ಉತ್ತಮ ಸಂಸ್ಕಾರ ರೂಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಾಣೇಹಳ್ಳಿ ಶ್ರೀಗಳ ಕರೆ

ಧಾರವಾಡ

ಮನುಷ್ಯನಿಗೆ ಓದು ಮುಖ್ಯವಲ್ಲ. ಮಾತು ಮತ್ತು ಕೃತಿ ಮುಖ್ಯವಾಗಬೇಕು. ಇವತ್ತು ಜಾತಿ ಡೊಂಬರ ಸಂಖ್ಯೆ ಮಠ, ಮನೆ, ಸಮಾಜ, ದೇಶ ಹೀಗೆ ಎಲ್ಲ ವರ್ಗದಲ್ಲೂ ಇದೆ. ಇದು ಸರಿ ಮಾಡಲಿಕ್ಕೆ ಮೊದಲು ನಮ್ಮಿಂದಲೇ ಪ್ರಾರಂಭ ಆಗ್ಬೇಕು. ಲೋಕ ಸರಿಯಾಗಲಿ ಎನ್ನುವುದು ಮುಖ್ಯವಲ್ಲ. ಮೊದಲು ನಾನು ಸರಿಯಾಗಬೇಕು. ಬೇರೆಯವರಿಗೆ ಉಪದೇಶ ಮಾಡುವುದು ತಪ್ಪಲ್ಲ. ಉಪದೇಶ ಮಾಡುವವನ ಯೋಗ್ಯತೆ, ಅರ್ಹತೆ ಇದೆಯಾ ಎನ್ನುವಂಥದ್ದನ್ನು ಪ್ರಶ್ನೆ ಹಾಕಿಕೊಳ್ಳಬೇಕು.

ಯೋಗ್ಯತೆ, ಅರ್ಹತೆ ನಿಮಗಿದ್ದರೆ ಇನ್ನೊಬ್ಬರ ದೋಷಗಳನ್ನು ತಿದ್ದಲಿಕ್ಕೆ ನಿಮಗೆ ಸ್ವಾತಂತ್ರ್ಯ ಸಿಕ್ಕ ಹಾಗೆ. ನಾಡಿನ ಸ್ಥಿತಿಯನ್ನು ನೋಡಿದರೆ ಉಪದೇಶ ಮಾಡುವಂಥವರಿಗೇನೂ ಕೊರತೆಯಿಲ್ಲ. ಆದರೆ ಉಪದೇಶಕ್ಕೆ ತಕ್ಕಂತೆ ತಮ್ಮ ಬದುಕನ್ನು ಕಟ್ಟಿಕೊಳ್ಳುವವರು ಕೊರತೆ ಎದ್ದು ಕಾಣುತ್ತದೆ. ಹಾಗಾಗಿಯೇ ನಾಡಿನಲ್ಲಿ ಹಗರಣಗಳ ಸಂಖ್ಯೆ ಹೆಚ್ಚುತ್ತಾ ಇದೆ. ಆ ಸಾಲಿಗೆ ವಿದ್ಯಾರ್ಥಿಗಳು ಸೇರಬಾರದು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕರ್ನಾಟಕ ನಾಮಕರಣ ೫೦ರ ಸಂಭ್ರಮ ‘ಧರೆಗೆ ದೊಡ್ಡವರು’ ನಾಡು ನುಡಿಗೆ ಕೊಡುಗೆ ನೀಡಿದ ಹಿರಿಯ ಜೀವಗಳ ಬದುಕು-ಸಾಧನೆ ಕುರಿತು ವಿಚಾರ ಸಂಕಿರಣ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಬಗ್ಗೆ ತಂದೆ ತಾಯಿಗಳು, ಅಧ್ಯಾಪಕರು, ಸಮಾಜ ತುಂಬಾ ಕನಸನ್ನು ಕಟ್ಟಿಕೊಂಡಿದ್ದಾರೆ. ಆ ಕನಸನ್ನು ನನಸು ಮಾಡುವಂಥ ಸತ್ಸಂಕಲ್ಪ ಮಾಡಿಕೊಳ್ಳಬೇಕು. ಮುಂದಿನ ನಾಡಿನ ನಾಗರಿಕರಾಗಬೇಕಾದರೆ ಯಾವ ನೆಲದ ಮೇಲೆ ನಿಂತಿದ್ದೀರಿ, ಯಾವ ರೀತಿ ಆಲೋಚನೆ ಮಾಡುತ್ತಿದ್ದೀರಿ, ಯಾವ ರೀತಿ ಬದುಕುತ್ತಿದ್ದೀರಿ ಎನ್ನುವುದು ಮುಖ್ಯ. ಬಾಲ್ಯದಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸಿದ್ದರೆ ಮುಂದೆ ಆ ಸಂಸ್ಕಾರಗಳನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯ. ಚಿಕ್ಕವಯಸ್ಸಿನಲ್ಲಿ ಎಂತಹ ಸಂಸ್ಕಾರ ಸಿಗುತ್ತೋ ಅದಕ್ಕನುಗುಣವಾಗಿ ನಮ್ಮ ಭವಿಷ್ಯ ನಿರ್ಮಾಣಗೊಳ್ಳುವುದು. ಈ ನೆಲೆಯಲ್ಲಿ ನಮಗೆ ಒಳ್ಳೆಯ ಸಂಸ್ಕಾರ ಸಿಕ್ಕಿತೆಂದು ಹೇಳಿಕೊಳ್ಳಲಿಕ್ಕೆ ಹೆಮ್ಮೆ ಪಡುತ್ತೇವೆ. ನಮಗೆ ಆ ಸಂಸ್ಕಾರವನ್ನು ಕೊಟ್ಟಂಥವರು ಜನ್ಮಕೊಟ್ಟ ತಂದೆತಾಯಿಗಳು ಹಾಗೂ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.

ನಮ್ಮ ಪೂರ್ವಶ್ರಮದ ಮನೆತನ ತುಂಬಾ ಕಡುಬಡತನದಿಂದ ಬಂದಂಥದ್ದು. ಆ ಬಡತನವೇ ನಮ್ಮ ಬದುಕಿಗೆ ಭವ್ಯತೆಯನ್ನು ತಂದುಕೊಟ್ಟಿದೆ. ಬಡತನ ವ್ಯಕ್ತಿಯ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲಿಕ್ಕೆ ಶಕ್ತಿಯನ್ನು ತಂದುಕೊಡುತ್ತದೆ. ಇತ್ತೀಚಿನ ಮಕ್ಕಳಿಗೆ ಬಡತನದ ಕಲ್ಪನೇ ಇಲ್ಲ. ಮುಂದೆ ತಂದೆ-ತಾಯಿಗಳಿಗೆ ವಂಚಿತರಾಗುವರು.

ಹೊಗಳಿಗೆ ತುಂಬಾ ಅಪಾಯಕಾರಿ. ಮನುಷ್ಯನನ್ನು ಅದು ಅಹಂಕಾರಿಯನ್ನಾಗಿ ಮಾಡುತ್ತದೆ. ವಾಸ್ತವ ಸ್ಥಿತಿಯ ಬಗ್ಗೆ ಮಾತನಾಡಿದರೆ ಅದು ಹೊಗಳಿಕೆ ಅಲ್ಲ. ನಮ್ಮ ಬದುಕಿಗೆ ಬಹುದೊಡ್ಡ ಶಕ್ತಿಯನ್ನು ತಂದುಕೊಟ್ಟವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.

ಅವರದು ತಾಯ್ತನದ ಹೃದಯ. ಒಬ್ಬ ವ್ಯಕ್ತಿಗೆ ಪ್ರೋತ್ಸಾಹವನ್ನು ಕೊಟ್ಟರೆ ಅವನು ಉತ್ತುಂಗಶಿಖರಕ್ಕೇರಬಲ್ಲ ಎನ್ನುವುದಕ್ಕೆ ನಮ್ಮ ಗುರುಗಳೇ ಸಾಕ್ಷಿ. ನಮ್ಮ ಗುರುಗಳು ನಮಗೆ ತುಂಬಾ ಸ್ವಾತಂತ್ರ್ಯವನ್ನು ಕೊಟ್ಟಿದ್ದರು. ಸ್ವಾತಂತ್ರ್ಯವನ್ನು ಎಂದೂ ದುರುಪಯೋಗಪಡಿಸಿಕೊಳ್ಳದೇ ಪ್ರಾಮಾಣಿಕವಾಗಿ ಅವರು ಹೇಳಿದ ಕೆಲಸಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ. ಬಹುಶಃ ಇಂತಹ ಸ್ವಾತಂತ್ರ್ಯ ಇವತ್ತಿನ ಕಾಲದಲ್ಲಿ ನಾವು ಯಾರಿಂದಲೂ ನಿರೀಕ್ಷಿಸಲಿಕ್ಕೆ ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಕಹಿಘಟನೆಗಳು ನಡೆದದ್ದುಂಟು. ಆ ಘಟನೆಗಳು ನಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಸುಧಾರಣೆ ಮಾಡಲಿಕ್ಕೆ ಪ್ರೇರಣೆಯನ್ನು ನೀಡಿದವು. ವಿದ್ಯಾರ್ಥಿ ದಿಸೆಯಿಂದಲೂ ನಾವು ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಬಂದಂಥವರು ಎಂದರು.

ವೇದಿಕೆಯ ಮೇಲೆ ಕವಿ ಚಂದ್ರಶೇಖರ ತಾಳ್ಯ, ಸಾಹಿತಿ ಲೋಕೇಶ ಅಗಸನಕಟ್ಟೆ, ವಿಶ್ವೇಶ್ವರಿ ಬಿ.ಹಿರೇಮಠ, ಶಂಕರ ಹಲಗತ್ತಿ ಮತ್ತಿತರರಿದ್ದರು.

Share This Article
Leave a comment

Leave a Reply

Your email address will not be published. Required fields are marked *