ಹಿಂದೂ ರಾಷ್ಟ್ರದ ಸನಾತನ ಸಂವಿಧಾನ ವಿರೋಧಿಸಿ: ಸಾಣೇಹಳ್ಳಿ ಶ್ರೀ

‘ಇದಕ್ಕಾಗಿ ದೊಡ್ಡ ಮಟ್ಟದ ಪ್ರತಿರೋಧ ಮತ್ತು ಚಳುವಳಿ ರೂಪಿಸುವ ಅವಶ್ಯವಿದೆ’

ಬೇಗೂರು

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ರಚಿಸಲಾಗುತ್ತಿರುವ ಸನಾತನ ಸಂವಿಧಾನವನ್ನು ವಿರೋಧಿಸಲು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರ ಕರೆ ಕೊಟ್ಟರು.

ಸಾಣೇಹಳ್ಳಿಯಿಂದ ಹೊರಟಿರುವ ಸರ್ವೋದಯ ಪಾದಯಾತ್ರೆಯ ಅಂಗವಾಗಿ ಬೇಗೂರಿನಲ್ಲಿ ಇಂದು ಮಧ್ಯಾಹ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡುತ್ತ ಪ್ರಯಾಗರಾಜದಲ್ಲಿ ಸನಾತನ ಸಂವಿಧಾನ ರಚಿಸಲು ನಡೆದಿರುವ ತಯಾರಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಸನಾತನ ಪರಂಪರೆಯಿಂದ ಬಂದವರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಬೇಕು ಎಂಬ ಅಂಶಗಳು ಇದರಲ್ಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮನುಸ್ಮೃತಿ ಆಧಾರದಲ್ಲಿ ಮೇಲೆ ಹೊಸ ಸಂವಿಧಾನವನ್ನು ಹೇರುವ ಪ್ರಯತ್ನದ ವಿರುದ್ಧ ಎಲ್ಲರು ಧ್ವನಿಯೆತ್ತಬೇಕು ಎಂದು ಕರೆ ಕೊಟ್ಟರು. ಇದಕ್ಕಾಗಿ ದೊಡ್ಡ ಮಟ್ಟದ ಪ್ರತಿರೋಧ ಮತ್ತು ಚಳುವಳಿಗಳನ್ನು ರೂಪಿಸುವ ಅವಶ್ಯವಿದೆ ಎಂದು ಹೇಳಿದರು.

ಸರ್ವೋದಯ ಸಂಘಟನೆಯ ಸಂಚಾಲಕ ಶಿವನಕೆರೆ ಬಸವಲಿಂಗಪ್ಪ ನಾವು ಸರ್ವೋದಯದ ಆಶಯಗಳನ್ನಿಟ್ಟುಕೊಂಡು ಈ ಪಾದಯಾತ್ರೆ ಮಾಡುತ್ತಿದ್ದೇವೆ. ಮತ್ತೆ ಸರ್ವೋದಯದ ಆಶಯಗಳಂತೆ ಹೊಸ ಸಮಾಜವನ್ನು ಕಟ್ಟುವ ಸಮಯ ಬಂದಿದೆ.

ಗೋವು ಆಧಾರಿತ, ಮಳೆ ಆಧಾರಿತ, ಋತುಮಾನ ಆಧಾರಿತ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ರೈತರು ಸ್ವಾವಲಂಬಿಯಾಗಿ ಬದುಕಬಹುದು ಎಂದು ಹೇಳಿದರು. ಅಭಿವೃದ್ಧಿಯ ಹೆಸರಿನಲ್ಲಿ ಸಾಂಪ್ರದಾಯಿಕ ಕೃಷಿಯನ್ನು ದೂರಮಾಡಿರುವುದೇ ಇಂದಿನ ಅವನತಿಗೆ ಕಾರಣ ಎಂದು ಹೇಳಿದರು.

ವೈ ಎಸ್ ವಿ ದತ್ತ ಅವರು ಪಾದಯಾತ್ರೆಯ ಆಶಯಗಳನ್ನು ಪ್ರಶಂಶಿಸಿ ಇಂದಿನ ಪರಿಸರ ಮತ್ತು ರೈತರ ಸ್ಥಿತಿಗೆ ರಾಜಕಾರಣಿಗಳೇ ಕಾರಣವೆಂದು ಹೇಳಿದರು. ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರವನ್ನು ಜಾರಿಗೆ ತರುವ ಅವಶ್ಯಕತೆ ಬಗ್ಗೆ ಮಾತನಾಡಿದರು.

ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ಸ್ವಾಮೀಜಿಯವರು ಪರಿಸರ ಮತ್ತು ಕೃಷಿ ಕ್ಷೇತ್ರಗಳು ತುಂಬಾ ಆತಂಕಕಾರಿ ಸ್ಥಿತಿಗೆ ತಲುಪಿರುವ ಬಗ್ಗೆ ಮಾತನಾಡಿದರು.

ಸಭೆಯಲ್ಲಿ “ಒಕ್ಕಲಿಗ ಒಕ್ಕದಿದ್ದರೆ ನಾಡು ಹೇಗೆ ನಕ್ಕೀತು” ನಾಟಕ ಪ್ರದರ್ಶನ

ಟಿ ನರಸೀಪುರದ ಗೌರಿಶಂಕರ ಸ್ವಾಮೀಜಿಯವರು ಬಸವತತ್ವ ಆಧಾರದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಕೆಲಸ ಮಾಡುತ್ತಿರುವ ಸಾಣೇಹಳ್ಳಿ ಸ್ವಾಮೀಜಿಯವರ ಪ್ರಯತ್ನವನ್ನು ಪ್ರಶಂಸಿದರು.

ಚಲನಚಿತ್ರ ನಟಿ ಪೂಜಾಗಾಂಧಿ ಮಾತನಾಡಿ ಇದು ಜನಜಾಗೃತಿಯಲ್ಲ ನಮ್ಮ ನಮ್ಮ ಮನದ ಜಾಗೃತಿ ಎಂದು ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *