ಸಾಣೇಹಳ್ಳಿ:
ಅಂಗೈಯಲ್ಲಿ ಲಿಂಗ ಹಿಡಿದುಕೊಂಡು ಸಲ್ಲಿಸುವ ವಿಶೇಷ ಪೂಜೆ ಲಿಂಗಾಯತ ಧರ್ಮದಲ್ಲಿ ಮಾತ್ರ ಸಾಧ್ಯ. ಆದರೆ ಲಿಂಗಾಯತರು ಸಂಪ್ರದಾಯಗಳಿಂದ ಹಾಗೂ ಗುಡಿಯ ಹಂಗಿನಿಂದ ಹೊರಬರುತ್ತಿಲ್ಲ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಬಸವ ಮಹಾಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೀಕ್ಷೆ ಎಂದರೆ ತಿಳಿವಳಿಕೆ ನೀಡುವುದು, ಅರಿವನ್ನು ಮೂಡಿಸುವುದು. ಆದರೆ ಕಂಡ ಕಂಡ ದೇವಸ್ಥಾನಗಳಿಗೆ ಹೋಗುವುದಲ್ಲ. ಹಾಗೆ ದೇವಸ್ಥಾನಗಳಿಗೆ ಹೋದರೂ ದೇವರನ್ನು ಮುಟ್ಟಿ ಪೂಜಿಸುವುದು ಕಷ್ಟ. ಇದಕ್ಕಾಗಿ ಬಸವಣ್ಣನವರು ದೇಹವೇ ದೇಗುಲ ಎಂದರು. ಆದರೆ ಅವರು ಗುಡಿಯನ್ನು ತಿರಸ್ಕರಿಸಲಿಲ್ಲ. ತಲೆಯನ್ನು ಬಂಗಾರದ ಕಳಸವೆಂದರು. ಇಂಥ ಅಪರೂಪವಾದುದು. ಇರುವಾಗ ಗುಡಿಯನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಇದಕ್ಕಾಗಿ ಲಿಂಗಾಯತ ಧರ್ಮವನ್ನು ಬಸವಣ್ಣನವರು ಆರಂಭಿಸಿದರು ಎಂದು ತಿಳಿಸಿದರು.
ಬಸವಣ್ಣನೇ ಬಂಧುಬಳಗ, ಬಸವಣ್ಣನೇ ಧರ್ಮಗುರು ಎಂದು ಅಲ್ಲಮಪ್ರಭುಗಳು ಹೇಳಿದರು. ಬಸವಣ್ಣನವರು ಕರುಣಿಸಿದ ಲಿಂಗಪೂಜೆ ಮಾಡಿದರೆ ಮುಂದೆ ಆಗಬಹುದಾದ ಅನಾಹುತಗಳು ತಪ್ಪಿಸಬಹುದು ಎಂದರು.

ಸುಪ್ರಭಾತ ಸಮಯದಲ್ಲಿ ಆರ್ತಿಯಲ್ಲಿ ಲಿಂಗವ ನೆನೆದಡೆ ತಪ್ಪುವುದು ಅಪಮೃತ್ಯು ಎಂದು ವಚನದಲ್ಲಿ ಹೇಳಿದ್ದೇಕೆಂದರೆ ಬೆಳಿಗ್ಗೆ ಹೊತ್ತು ಬೇಗ ಎದ್ದರೆ ಎಚ್ಚರವಾಗಿರುತ್ತೇವೆ ಎಂದರ್ಥ. ಹೀಗಾಗಿ ಬದುಕಿನ ಸೌಭಾಗ್ಯಕ್ಕಾಗಿ, ನಿಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಲಿಂಗದೀಕ್ಷೆ ಪಡೆಯಿರಿ ಎಂದು ಕಿವಿಮಾತು ಹೇಳಿದರು.
ವಚನಗೀತೆಗಳನ್ನು ಎಚ್.ಎಸ್.ನಾಗರಾಜ್ ಹಾಡಿದರು. ಸಿರಿಮಠ ಹಾಗೂ ವಿನಯ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
