ವಚನ ಶಿವರಾತ್ರಿ: 10 ವಚನಗಳನ್ನು ಒಂದೇ ಧ್ವನಿಯಲ್ಲಿ ಹಾಡಿದ 850 ಮಕ್ಕಳು

ಸಂಗೀತ ಶಿಕ್ಷಕ ನಾಗರಾಜ್ ಮತ್ತಿತರರು ಸೇರಿ 850 ವಿದ್ಯಾರ್ಥಿಗಳಿಗೆ ವಚನ ಗಾಯನದ ತರಬೇತಿ ನೀಡಿದ್ದರು.

ಸಾಣೇಹಳ್ಳಿ

ಇಲ್ಲಿನ ಶ್ರೀ ಶಿವಕುಮಾರ ಗ್ರೀಕ್ ಮಾದರಿಯ ಬಯಲು ರಂಗಮಂದಿರದಲ್ಲಿ ನಡೆದ `ವಚನ ಶಿವರಾತ್ರಿ’ಯ ಆಚರಣೆಯನ್ನು ವಿನೂತನವಾಗಿ ಬುಧವಾರ ಆಚರಣೆ ಮಾಡಲಾಯಿತು.

ಸಂಗೀತ ಶಿಕ್ಷಕ ನಾಗರಾಜ್ ಮತ್ತಿತರರು ಸೇರಿ ನಾಲ್ಕಾರು ದಿನಗಳ ಕಾಲ 850 ವಿದ್ಯಾರ್ಥಿಗಳಿಗೆ ವಚನ ಹಾಡುಗಾರಿಕೆಯ ತರಬೇತಿ ನೀಡಿದ್ದರು. ಎಲ್ಲ ವಿದ್ಯಾರ್ಥಿಗಳು ಹತ್ತು ವಚನಗಳನ್ನು ಒಂದೇ ಧ್ವನಿಯಲ್ಲಿ ಹಾಡಿದ `ವಚನ ಶಿವರಾತ್ರಿ’ಯ ಆಚರಣೆ ವಿಶೇಷ ಹಾಗೂ ವೈಶಿಷ್ಟ್ಯತೆಯಿಂದ ಕೂಡಿತ್ತು.

ಶ್ರೀ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಎಸ್.ಡಿ. ಸಿದ್ಧರಾಮಯ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೊಸದುರ್ಗದ ಕೆ.ಎಸ್. ನವೀನಕುಮಾರ ಮಾತನಾಡಿ; “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ” ಎನ್ನುವ ಶರಣರ ವಾಣಿಯಂತೆ, ದೇವರನ್ನು ಬರೀ ಕಲ್ಲು ಗುಡಿಗಳಲ್ಲಿ ನೋಡದೆ, ನಮ್ಮ ಆಂತರ್ಯದಲ್ಲಿ, ವ್ಯಕ್ತಿತ್ವದಲ್ಲಿ ಕಾಣಬೇಕು. ಇದಕ್ಕೆ ನಮ್ಮ ನಾಡಿನ 12ನೇ ಶತಮಾನದ ಶರಣರು ಒತ್ತು ಕೊಟ್ಟಿದ್ದರು.

ಬಸವಾದಿ ಶರಣರು ನಮ್ಮ ನಾಡು ಕಂಡ, ವಿಶಿಷ್ಟ ಸಮಾಜ ಸುಧಾರಕರಷ್ಟೇ ಅಲ್ಲ, ಅತ್ಯುತ್ತಮ ವ್ಯಕ್ತಿತ್ವ ವಿಕಸನದ ತರಬೇತುದಾರರಾಗಿದ್ದರು. ಈ ನೆಲೆಯಲ್ಲಿ ಧಾರ್ಮಿಕ ಶಿವರಾತ್ರಿಯನ್ನು ವೈಚಾರಿಕ “ಶಿವ ಶರಣರ ಶಿವರಾತ್ರಿ”ಯಾಗಿಸುವ ಅನನ್ಯ ಪ್ರಯತ್ನ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಿತು.

ಇಲ್ಲಿನ ಶಾಲೆಗಳಲ್ಲಿ ಅಭ್ಯಾಸ ಮಾಡುವ 850ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ, ಬಸವಣ್ಣ, ಅಲ್ಲಮಪ್ರಭು ಅಕ್ಕಮಹಾದೇವಿ, ದೇವರ ದಾಸಿಮಯ್ಯ, ಮೋಳಿಗೆ ಮಾರಯ್ಯ, ಉರಿಲಿಂಗಪೆದ್ದಿ ಮುಂತಾದ ವಚನಕಾರರ ವಚನಗಳ ಜೊತೆಗೆ, ಪಂಡಿತಾರಾಧ್ಯ ಸ್ವಾಮೀಜಿಯವರ ವಚನವೂ ಸೇರಿದಂತೆ ಒಟ್ಟು 10 ವಚನಗಳನ್ನು ಸುಶ್ರಾವ್ಯವಾಗಿ, ಭಾವಾಭಿವ್ಯಕ್ತಿಯೊಂದಿಗೆ ಹಾಡಲು ಕಲಿಸಿ, ಅದನ್ನು ಶಿವರಾತ್ರಿಯ ದಿನ, ನೂರಾರು ಮಂದಿ ಸಹೃದಯರ ಸಮ್ಮುಖದಲ್ಲಿ ಪ್ರಸ್ತುತ ಪಡಿಸಿದ್ದು ಪ್ರೇಕ್ಷಕರಿಗೆ ರೋಮಾಂಚನವನ್ನುಂಟು ಮಾಡಿತು ಎಂದರು.

ಈ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಇಂದು 850 ಜನ ವಿದ್ಯಾರ್ಥಿಗಳು ಹತ್ತು ವಚನಗಳನ್ನು ಏಕಧ್ವನಿಯಲ್ಲಿ ಹಾಡಿದ್ದು ಇದೊಂದು ಐತಿಹಾಸಿಕ ದಾಖಲೆ.

ಪ್ರತಿಯೊಬ್ಬರೂ ಕಾಲದ ಸದುಪಯೋಗ ಮಾಡಿಕೊಂಡಿರೆ ಅದೇ ಶಿವರಾತ್ರಿಯಾಗುವುದು. ಅಪ್ರಾಮಾಣಿಕನಾಗಿ ವರ್ತಿಸದೇ ಪ್ರಾಮಾಣಿಕತೆಯನ್ನು ತೋರಿಸಬೇಕು. ಮನುಷ್ಯನಿಗೆ ಪ್ರೀತಿ, ಸಂತೋಷ, ಕರುಣೆ ಮುಖ್ಯವೇ ಹೊರತು ಅಧಿಕಾರ, ಸಂಪತ್ತು ಮುಖ್ಯವಲ್ಲ ಎನ್ನುವುದನ್ನು ಶರಣರು ತೋರಿಸಿಕೊಟ್ಟಿದ್ದಾರೆ.

ಇವತ್ತು ಇಲ್ಲಿರುವ ಮಕ್ಕಳೆಲ್ಲ ದೈವೀಸ್ವರೂಪಿಗಳಾಗಿ ಕಂಡಿದ್ದು ನಮಗೆ ನಿಜಕ್ಕೂ ಸಂತೋಷವನ್ನುಂಟು ಮಾಡಿದೆ. ಮಕ್ಕಳು ಸಂಸ್ಕಾರವನ್ನು ಬೆಳೆಸಿಕೊಂಡರೆ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯ. ಸಾಣೇಹಳ್ಳಿಯಲ್ಲಿ ಓದುವ ಮಕ್ಕಳು ಸಂಗೀತ, ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವ ವಿಕಾಸಗೊಳಿಬೇಕು. ಶಿವರಾತ್ರಿ ಸಿನಿಮಾರಾತ್ರಿಯಾಗದೇ ಶಿವನ ಸ್ಮರಣೆಯ ರಾತ್ರಿಯಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಣ್ಣಿಗೆರೆ ವಿರೂಪಾಕ್ಷಪ್ಪ ಮಾತನಾಡಿ; ಅಜ್ಞಾನವನ್ನು ತೊಲಗಿಸುವ, ಜಾಗೃತಿಯನ್ನು ಮೂಡಿಸುವ ರಾತ್ರಿ, ಬೆಳಕನ್ನು ಮೂಡಿಸುವ ರಾತ್ರಿ, ಮನಸ್ಸನ್ನು ಶಾಂತಿಚಿತ್ತ ತರುವ ರಾತ್ರಿ ಶಿವರಾತ್ರಿ. ಇಲ್ಲಿ‌ ಮಕ್ಕಳು ವಚನಗೀತೆಗಳನ್ನು ಹಾಡಿದ್ದು ಯಾರ ಒತ್ತಾಯದಿಂದ ಹಾಡಿದಂಥದ್ದಲ್ಲ. ಎಲ್ಲರೂ ಮನಸ್ಸಿನ ಆಳಕ್ಕಿಳಿಸಿಕೊಂಡು ಹಾಡಿದ್ದು. ಇದು ನಮ್ಮೆಲ್ಲರಿಗೂ ರೋಮಾಂಚನವನ್ನುಂಟು ಮಾಡಿತು. ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಬೇರೆ ರೀತಿಯಲ್ಲಿ ಶಿವರಾತ್ರಿ ನಡೆಯುವುದು. ಆದರೆ ಸಾಣೇಹಳ್ಳಿಯಲ್ಲಿ ನಡೆಯುವ ಶಿವರಾತ್ರಿ ವೈಶಿಷ್ಟ್ಯತೆಯಿಂದ ಕೂಡಿದೆ.

ಶಿವರಾತ್ರಿ ಜೂಜಾಟ, ಕುಡಿತ ಇವುಗಳ ರಾತ್ರಿಯಾಗದೇ ದುಶ್ಚಟ ದೂರ ಮಾಡಿಕೊಳ್ಳುವ ರಾತ್ರಿಯಾಗಬೇಕು. ಶಿವರಾತ್ರಿಯ ದಿನ ಉಪವಾಸ ಮಾಡುವುದು ಪರಮಾತ್ಮನಿಗೆ ತಲುಪುವುದಿಲ್ಲ.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ, ಜ್ಯೋತಿ, ದಾಕ್ಷಾಯಿಣಿ ಹಾಗೂ ಸಾಣೇಹಳ್ಳಿಯ ಅಕ್ಕನಬಳಗದವರು ವಚನಗೀತೆ ಹಾಗೂ ಇತರೆ ಗೀತೆಗಳನ್ನು ಹಾಡಿದರು. ಸಂಧ್ಯಾ ಪಿ. ಎಲ್. ಸ್ವಾಗತಿಸಿ ನಿರೂಪಿಸಿದರು. ವಚನ ವಿಶ್ಲೇಷಣೆಯನ್ನು ಸಂಧ್ಯಾ ಪಿ. ಎಲ್. ಹಾಗೂ ಕಾವ್ಯ ಹೆಚ್. ಆರ್. ಮಾಡಿದರು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುಗಣದರುಪಾದೇಶ್ವರ ಪ್ರೌಢಶಾಲೆಯ ಮಕ್ಕಳು ವಚನ ನೃತ್ಯರೂಪಕ ನಡೆಸಿಕೊಟ್ಟರು.

Share This Article
1 Comment
  • ಅದ್ಭುತವಾದ ಕಾರ್ಯಕ್ರಮ. ಇಂತಹ ಸಾಮೂಹಿಕ ವಚನ ಗಾಯನ ಕಾರ್ಯಕ್ರಮಗಳು ಮಾನಸಿಕವಾಗಿ ಒಂದು ರೀತಿಯ ಸಾಮೂಹಿಕ ವಾತಾವರಣವನ್ನು ಸೃಷ್ಟಿಸುವುದರ ಮೂಲಕ ಕೇಳುಗರಲ್ಲಿ ಮತ್ತು ಹಾಡುವವರಲ್ಲಿ ಭಾವನಾತ್ಮಕ ಭಾವನೆಗಳು ಹುಟ್ಟಲು ಕಾರಣವಾಗುತ್ತವೆ.

Leave a Reply

Your email address will not be published. Required fields are marked *