ಲಿಂಗವಂತರು ಟೀಕೆಗೆ ಅಂಜಬೇಕಾಗಿಲ್ಲ: ನಿಜಾಚರಣೆ ಕಮ್ಮಟದಲ್ಲಿ ಸಾಣೇಹಳ್ಳಿ ಶ್ರೀ

`ವಚನಾಧಾರಿತ ನಿಜಾಚರಣೆ ಕಮ್ಮಟ’ಕ್ಕೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ೨೦೦ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಸಾಣೇಹಳ್ಳಿ

ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಎರಡು ದಿನಗಳ ಕಾಲ ನಡೆದ `ವಚನಾಧಾರಿತ ನಿಜಾಚರಣೆ ಕಮ್ಮಟ’ದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು ಲಿಂಗಾವಂತ ಧರ್ಮ ನಮ್ಮನ್ನು ಸದಾ ಎಚ್ಚರವಾಗಿರುವಂತೆ ಮಾಡುತ್ತದೆ. ಜಾಗೃತಗೊಳಿಸುತ್ತದೆ ಎಂದು ಹೇಳಿದರು.

ಲಿಂಗಾವಂತರನ್ನು ಬಹಳಷ್ಟು ಜನ ಟೀಕೆ ಮಾಡಬಹುದು. ಅದಕ್ಕೆ ಅಂಜಬೇಕಾಗಿಲ್ಲ. ಬಸವನ ಶಕ್ತಿ ನಮ್ಮ ಬೆನ್ನ ಹಿಂದೆ ಇದ್ದರೆ ಯಾರಿಗೂ ಅಂಜದೇ ಸುಖಸಂತೋಷದಿಂದ ಬಾಳಬಹುದು. ಲಿಂಗಾಯತ ಧರ್ಮದ ಬಗ್ಗೆ ಹೇಳುತ್ತಾ ಹೋದರೆ ಸನಾತನ ಪರಂಪರೆಯವರು ನಮ್ಮ ಬಸವ ಪರಂಪರೆಯವರನ್ನು ಬಹಳಷ್ಟು ಟೀಕಿಸುವರು. ಆಗ `ಬೈದವರೆನ್ನ ಬಂಧುಗಳು, ನಿಂದಿಸಿದವರೆನ್ನ ತಂದೆ ತಾಯಿಗಳು’ ಎನ್ನುವ ಭಾವ ಬರಬೇಕು.

ಶ್ರೇಷ್ಠಕಾರದ ವ್ಯಸನ ನಮ್ಮಿಂದ ದೂರವಾಗಿ ಭೃತ್ಯಾಚಾರದ ಭಾವ ಅಳವಡಬೇಕು. ಎಲ್ಲ ಕೆಲಸವನ್ನು ನಾನು ಮಾಡಿದೆ ಎನ್ನುವ ಅಹಂಕಾರ ಯಾರಿಗೂ ಸಲ್ಲದು. ಎಲ್ಲರೊಳಗೆ ನಾನೊಬ್ಬ ಎನ್ನುವ ವಿನಯವಂತಿಕೆಯ ಭಾವ ಇರಬೇಕು. ಅರಿವಿಂಗೆ ಹಿರಿದು ಕಿರಿದು ಭಾವ ಯಾರಲ್ಲೂ ಬರದೇ ಇನ್ನೂ ಕಲಿಯಬೇಕು ಎನ್ನುವ ವಿದ್ಯಾರ್ಥಿ ಭಾವ ಬರಬೇಕು. ಪ್ರತಿಯೊಬ್ಬರಿಗೂ ನಂಬಿಕೆ ಬಹಳ ಮುಖ್ಯ. ನಂಬಿಕೆಯನ್ನಿಟ್ಟುಕೊಂಡರೆ ಏನನ್ನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯ.

ಇಂತಹ ಗೋಷ್ಠಿಗಳಿಂದ ನಾವು ಹೊಸ ಹೊಸ ವಿಚಾರಗಳನ್ನು ಕಲಿತುಕೊಳ್ಳುತ್ತಾ ಹೋಗುತ್ತೇವೆ. ಎರಡು ದಿನಗಳ ಕಾಲ ನಡೆದ ಕಮ್ಮಟ ತುಂಬಾ ಪರಿಣಾಮಕಾರಿಯಾಗಿ ನಡೆಯಿತು. ಮುಂದಿನ ಕಾರ್ಯ ಸಾಧನೆಯನ್ನು ಕಮ್ಮಟಕ್ಕೆ ಭಾಗವಹಿಸಿದ ಶಿಬಿರಾರ್ಥಿಗಳು ಮುಂದುವರಿಸಿಕೊಂಡು ಹೋಗಬೇಕು. ಮುಂದಿನ ದಿನಮಾನಗಳಲ್ಲಿ ಯುವಕರಿಗೆ ಇಂತಹ ಶಿಬಿರವನ್ನು ನೆರವೇರಿಸುತ್ತೇವೆ ಎಂದರು.

ಗೃಹಪ್ರವೇಶ, ಕಲ್ಯಾಣ ಮಹೋತ್ಸವ, ಲಿಂಗಾಧಾರಣೆ, ಶವಸಂಸ್ಕಾರದ ವಚನಾಧಾರಿತ ನಿಜಾಚರಣೆಯ ವಿಷಯ ಮಂಡನೆ ಹಾಗೂ ಪ್ರಾತ್ಯಕ್ಷಿಕೆಯನ್ನು ತುಂಬಾ ಪರಿಣಾಮಕಾರಿಯಾಗಿ ಪಿ. ರುದ್ರಪ್ಪ, ಎಸ್ ಎನ್ ಅರಬಾವಿ, ಮಡಿವಾಳಪ್ಪ ಎಂ. ಸಂಗೊಳ್ಳಿ, ಎಂ. ಎಂ. ಮಡಿವಾಳರ ನೆರವೇರಿಸಿದರು.

ಶಿವಮೂರ್ತಯ್ಯ ಸ್ವಾಗತಿಸಿದರೆ ವಿಶ್ವೇಶ್ವರಯ್ಯ ನಿರೂಪಿಸಿ ವಂದಿಸಿದರು. ಶರಣ ನಾಗರಾಜ ಹೆಚ್. ಎಸ್. ನಿಜಾಚರಣೆಗೆ ಸಂಬಂಧಪಟ್ಟ ವಚನಗಳನ್ನು ಹಾಡಿದರು.

ಕಮ್ಮಟಕ್ಕೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ೨೦೦ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Share This Article
2 Comments
  • ಪ್ರತಿ ಜಿಲ್ಲೆಯಲ್ಲಿ ಈ ಲಿಂಗಾಯತ ಬೆಳಕಿನ ಕಾರ್ಯಕ್ರಮ ಹಮ್ಮಿಕೊಂಡರೆ ನಮ್ಮ ಜನ ನಿಜಕ್ಕೂ ನೆಲದ ಧರ್ಮ ಅನುಸರಿಸುತ್ತಾರೆ

  • fine. We have To Proceedings for bringing Awareness in younger generation by conducting such programmes all over karnataka for lingayatas..

Leave a Reply

Your email address will not be published. Required fields are marked *