‘ಶರಣ ಪರಂಪರೆಯಲ್ಲಿ ನೂರಾರು ತತ್ವಪದಗಳ ರಚಿಸಿದ ಸರ್ಪಭೂಷಣ ಶಿವಯೋಗಿಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಬಸವಾದಿ ಶರಣರ ದಾರಿಯಲ್ಲಿ ಸಾಗಿ ಬಂದ ಸರ್ಪಭೂಷಣ ಶಿವಯೋಗಿಗಳು ನೂರಾರು ತತ್ವಪದಗಳನ್ನು ರಚಿಸಿ ಸಾರವತ್ತಾದ ಜೀವನ ಸಾಗಿಸಬೇಕಾದ ರಸ ಗಟ್ಟಿಯನ್ನು ನೀಡಿದ್ದಾರೆಂದು ಶಿರಸಂಗಿ ಮಹಾಲಿಂಗೇಶ್ವರ ಮರುಘರಾಜೇಂದ್ರ ಮಠದ ಶ್ರೀ ಬಸವ ಮಹಾಂತ ಸ್ವಾಮಿಗಳವರು ನುಡಿದರು.

ಶ್ರೀಗಳು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮೂಲ ಕರ್ತೃ ಮುರುಗಿ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಯುಗಾದಿ ನೂತನ ವರ್ಷ ಆರಂಭಕ್ಕೆ ಆಯೋಜಿಸದ್ದ ಸರ್ಪಭೂಷಣ ಶಿವಯೋಗಿಗಳ ಜಯಂತಿ ಉತ್ಸವದ ಸಮ್ಮುಖ ವಹಿಸಿ ಮಾತನಾಡಿದರು.

೨೦೦-೩೦೦ ವರ್ಷಗಳ ಪೂರ್ವದಲ್ಲಿ ಸಾಗಿಬಂದ ಸಾಧಕರು ಸ್ವಾಮಿಗಳು ಹೇಗಿರಬೇಕೆಂಬ ಸಂಗತಿಗಳ ಬಗ್ಗೆ ತತ್ವಪದಗಳ ಮೂಲಕ ಆದರ್ಶ ಮಾದರಿಯ ಜೀವನದ ಬಗ್ಗೆ ಮೇಲ್ಪಂತಿಯನ್ನು ಹಾಕಿ ಕೊಟ್ಟಿದ್ದಾರೆ.
ಸರ್ಪಭೂಷಣ ಶಿವಯೋಗಿಗಳು ಸುಂದರ ಬದುಕಿಗೆ ಬೇಕಾದ ಜೀವನ ಮೌಲ್ಯಗಳು ಕಟ್ಟಿ ಕೊಟ್ಟಿದ್ದಾರೆ ಎಂದು ನುಡಿದರು.

೧೭೯೫ರಲ್ಲಿ ಬೆಂಗಳೂರಿನ ಸಮೀಪ ಚಿಕ್ಕಬಾಣವರ ಗ್ರಾಮದಲ್ಲಿ ಮಲ್ಲಿಕಾರ್ಜುನಪ್ಪ ರತ್ನಮ್ಮ ದಂಪತಿಗಳಿಗೆ ಐದನೇ ಮಗನಾಗಿ ಜನಿಸಿದ ಇವರು ಮೂಲ ಹೆಸರು ಸಪ್ಪಣ್ಣನವರು ಎಂದು. ೬-೭ ವರ್ಷದ ಬಾಲಕ ಶಾಲೆಗೆ ಹೋಗುವುದರಲ್ಲಿ ನಿರಾಸಕ್ತಿ ತಳೆದು ಅಲ್ಲಲ್ಲಿ ಮಠದ ನೆರಳಲ್ಲಿ ಕುಳಿತುಕೊಳ್ಳವುದನ್ನು ಕಂಡ ಬಾಲಕನ ಪೋಷಕರು ಬೆಂಗಳೂರಿನ ತಿಪ್ಪಶೆಟ್ಟಿ ಮಠದ ಗುರುಸಿದ್ಧ ಸ್ವಾಮಿಗಳ ಬಳಿಗೆ ಕರೆದುಕೊಂಡು ಹೋದಾಗ ಗುರುಗಳು ಬಾಲಕನನ್ನು ನೋಡಿ ಇವನಿಗೆ ವಿದ್ಯೆ ಹತ್ತುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಈತನಿಗೆ ಸಂಗೀತ ಒಲಿಯುತ್ತದೆ.

ಈ ಹುಡುಗನನ್ನು ಮಠಕ್ಕೆ ಬಿಟ್ಟು ಬಿಡಿ ಅಂದಾಗ ತಂದೆ-ತಾಯಿಗಳು ಗುರುಗಳ ಆಜ್ಞೆಗೆ ತಲೆಬಾಗಿ ಗುರುಗಳಿಗೆ ಒಪ್ಪಿಸುತ್ತಾರೆ. ಬಾಲಕ ಸಪ್ಪಣ್ಣನಿಗೆ ಸರ್ಪಭೂಷಣ ಶಿವಯೋಗಿ ಎಂಬ ಹೊಸ ಹೆಸರಿಟ್ಟು ಶಿಷ್ಯನಿಗೆ ಅಗತ್ಯವಾದ ವಿದ್ಯೆಗಳನ್ನು ತರಬೇತಿಗಳನ್ನು ನೀಡಿಸುತ್ತಾರೆ. ಸ್ವಲ್ಪ ಸಮಯದ ನಂತರ ಸರ್ಪಭೂಷಣರು ಅಧ್ಯಯನದ ಜೊತೆ ಜೊತೆಗೆ ಸಮಾಜ ಕಟ್ಟುವ, ತಿದ್ದುವ ಮೂಲಕ ಲೋಕಕಲ್ಯಾಣಕ್ಕಾಗಿ ದೇಶ ಸಂಚಾರ ಕೈಗೊಳ್ಳುತ್ತಾರೆ.

ಜೊತೆಜೊತೆಗೆ ಬಲವಾಗಿ ವೈರಾಗ್ಯ ಜೀವನಕ್ಕೆ ಶರಣಾಗುತ್ತಾರೆ. ಶಿಶುನಾಳ ಶರೀಫರು, ನಿಜಗುಣರು, ಬಾಲ ಮಹಂತರು, ಮುಪ್ಪಿನ ಷಡಕ್ಷರಿಗಳಂತೆ ತತ್ವಪದಗಳ ರಚನೆಗೆ ಮುಂದಾಗುತ್ತಾರೆ ಐದು ಸ್ಥಲಗಳಲ್ಲಿ ನೂರಾರು ತತ್ವಪದಗಳ ರಚನೆ ಮಾಡುವ ಮೂಲಕ ಸಾಗುತ್ತಾರೆ.

ತತ್ವಪೀಠಾಧಿಕಾರಿಗಳಾಗಿದ್ದ ಸರ್ಪಭೂಷಣ ಶಿವಯೋಗಿಗಳು ಜವಾಬ್ದಾರಿಯನ್ನು ಚಿಕ್ಕ ಗುರುಸಿದ್ಧ ದೇವರಿಗೆ ವಹಿಸಿ ತಾವು ಮತ್ತಷ್ಟು ವಿರಕ್ತ ಅಥವಾ ವೈರಾಗ್ಯ ನಿಲುವಿಗೆ ಬದ್ದಾರಾಗುತ್ತ ನಿರ್ಲಿಪ್ತ ಸ್ಥಿತಿಗೆ ತಲುಪುತ್ತಾರೆ. ಅಂತಹ ಸರ್ಪಭೂಷಣರು ಬದುಕಿದ್ದು ಕೇವಲ ೪೫ ವರ್ಷಗಳಾದರು ಅಗಾಧವಾದ ಜೀವನ ಸಾಗಿಸಿದ್ದಾರೆ ಅವರ ಈ ಜಯಂತಿ ಹೊಸ ವರ್ಷಕ್ಕೆ ನವೋಲ್ಲಾಸವನ್ನು ತಂದಿದೆ ಎಂದು ನುಡಿದರು.

ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮಿಗಳು ಈ ಶರಣೋತ್ಸವದಲ್ಲಿ ಅನುಭವದ ಮಳೆಯಾಗುತ್ತಿದೆ. ಪ್ರತಿ ತಿಂಗಳು ಬರುವ ಶರಣರ ಜಯಂತೋತ್ಸವವನ್ನು ಮಾಡುವ ಮುಖಾಂತರ ಶರಣರ ಚಿಂತನೆ ಆದರ್ಶಗಳನ್ನು ತಿಳಿಸುವ ವಿಚಾರವನ್ನು ಶ್ರೀಮಠವು ಮಾಡುತ್ತಿದೆ. ಪ್ರತಿದಿನ ತಾವುಗಳು ಹೇಗೆ ತಮ್ಮ ತಮ್ಮ ಮನೆಗಳನ್ನು ಶುಚಿಯಾಗಿಟ್ಟುಕೊಳ್ಳುತ್ತೀರಾ, ಅದರಂತೆ ತಮ್ಮಗಳ ತನು ಖುಷಿ ಮಾಡಿಕೊಳ್ಳಲು ಶರಣರ ಅಮೃತವಾಣಿಯನ್ನು ಕೇಳಿದರೆ ಸಾಧ್ಯವಾಗುತ್ತದೆ. ಅಂತಹ ವಿಚಾರಗಳನ್ನು ಶ್ರೀಮಠದ ಕಾರ್ಯಕ್ರಮಗಳಿಂದ ನಾವು ಅಳವಡಿಸಿಕೊಳ್ಳಬಹುದು.

ಅಂತರಾತ್ಮದ ಶುಚಿಯನ್ನು ಇಟ್ಟುಕೊಂಡು ಮಹತ್ವರಾದವರೆಂದರೇ ಸರ್ಪಭೂಷಣ ಶಿವಯೋಗಿಗಳು. ಅವರ ಚಿಂತನೆ, ನುಡಿಗಳು ಅವಿಸ್ಮರಣೆಯವಾದಂತಹು. ಸರ್ಪಭೂಷಣ ಶಿವಯೋಗಿಗಳು ಕೇವಲ ಆದ್ಯಾತ್ಮಿಕ ಸಾಧನೆಗಷ್ಟೇ ಸೀಮಿತವಲ್ಲದೆ ಇಡೀ ಸಮಾಜದ ಜನರ ಸ್ಪೂರ್ತಿಯಾಗಿದ್ದರು. ಶ್ರೀಗಳು ಕೈವಲ್ಯ ಕಲ್ಪವಲ್ಲರಿ ಎಂಬ ಪ್ರಸಿದ್ದ ತತ್ವ ಪದ ಸಂಕಲನವನ್ನು ರಚಿಸಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಭಕ್ತಿಜ್ಞಾನ ವೈರಾಗ್ಯದ ನೀತಿ ಬೋದನೆಯನ್ನು ಸಾರಿದ್ದಾರೆ ಎಂದು ನುಡಿದರು

ಸಮಾರಂಭದ ಸಾನಿಧ್ಯವನ್ನು ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಗಳು ವಹಿಸಿದ್ದರು. ಸಮ್ಮುಖವನ್ನು ಶ್ರೀಮಠದ ಬಸವ ಮುರುಘರಾಜೇಂದ್ರ ಶ್ರೀಗಳು ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸಮಾಜ ಸಂಘ ಸಂಸ್ಥೆ ಹಾಗೂ ಸಂಘಟನೆಗಳ ಪದಾಧಿಕಾರಿಗಳಾದ ನಾಗರಾಜ್ ಸಂಗಮ್, ಟಿ ವೀರೇಂದ್ರ ಕುಮಾರ್, ಬಸವರಾಜ ಕಟ್ಟಿ, ಹಾಲೇಶಪ್ಪ ಸೇರಿದಂತೆ ಎಸ್.ಜೆ.ಎಂ ವಿದ್ಯಾಪೀಠದ ಶಾಲಾ-ಕಾಲೇಜುಗಳ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಜೆ.ಎಂ ಸ್ವತಂತ್ರ ಪದವಿಪೂರ್ವ ಕಾಲೇಜಿನ ನಿರ್ವಹಣೆಯಲ್ಲಿ ಜಮುರಾ ಕಲಾವಿದರು ಸರ್ಪಭೂಷಣ ಶಿವಯೋಗಿಗಳ ತತ್ವಪದಗಳನ್ನು ಹಾಡಿದರು. ಪ್ರಾಚಾರ್ಯ ತಿಪ್ಪೇಸ್ವಾಮಿ ಸ್ವಾಗತಿಸಿದರು, ರವಿಕಲಾರವರು ಕಾರ್ಯಕ್ರಮವನ್ನು ನಿರೂಪಿಸಿ ಶರಣ ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *