ಗದಗ
ಲಿಂಗಾಯತ ಸಮಾಜ ಎಚ್ಚೆತ್ತುಕೊಂಡು ಕರ್ಮಠದ ಕಂದಾಚಾರಗಳನ್ನು ಬದಿಗೊತ್ತಿ ಬಸವತತ್ವದ ನಿಜಾಚರಣೆಗಳನ್ನು ಮೈಗೂಡಿಸಿಕೊಳ್ಳಬೇಕು. ಇಂದಿನ ಯುವ ಜನಾಂಗ ವ್ಯಸನ ಮುಕ್ತರಾಗಿ ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಸ್ವಾಮಿಗಳು ನುಡಿದರು.
ಗದುಗಿನ ಸಚ್ಚಿದಾನಂದ ಮಠದಲ್ಲಿ ಜರುಗಿದ ಇತ್ತೀಚೆಗೆ ಲಿಂಗೈಕ್ಯರಾದ ಶರಣೆ ಸರೋಜ ಹಾಗೂ ಲಿಂಗೈಕ್ಯ ಶರಣ ರುದ್ರಪ್ಪ ಶಂಕರಪ್ಪ ಪಟ್ಟಣ ಅವರ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಅನುಭಾವ ಗೈದರು.

ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ನಿಷ್ಠಿ ರುದ್ರಪ್ಪ ಅನುಭಾವ ನುಡಿಗಳನ್ನಾಡುತ್ತ, ಪಟ್ಟಣ ಕುಟುಂಬದವರು ತಮ್ಮ ತಂದೆ-ತಾಯಿಗಳ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮುಂದಿನ ಜನಾಂಗಕ್ಕೆ ಉತ್ತಮ ಮುನ್ನುಡಿ ಬರೆದಿದ್ದಾರೆ ಎಂದರು.
ಕುಟುಂಬದ ಹಿರಿಯರು ರಾಮದುರ್ಗದ ಶಾಸಕರು ಹಾಗೂ ಕರ್ನಾಟಕ ಸರಕಾರದ ಮುಖ್ಯ ಸಚೇತಕರಾದ ಶರಣ ಅಶೋಕ ಎಂ. ಪಟ್ಟಣ ಅವರು ಅಧ್ಯಕ್ಷತೆ ವಹಿಸಿ, ಇಂದಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದ್ದು ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ. ನಾವೆಲ್ಲ ಎಚ್ಚೆತ್ತುಕೊಂಡು ಪ್ರಜ್ಞಾವಂತ ನಾಗರಿಕರಾಗಿ ಬದುಕಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದು ಪ್ರಶಸ್ತಿ ಪಡೆದ ಶರಣ ಮಹಾದೇವಪ್ಪ ಬಟ್ಟೂರ, ಶರಣೆ ಮಂಗಳಾ ಕಿರಣ ನೀಲಗುಂದ ಹಾಗೂ ನಿವೃತ್ತ ಗಡಿ ಭದ್ರತಾ ಪಡೆಯ ಯೋಧ ಶರಣ ಸಾತಲಿಂಗಪ್ಪ ಜಿ. ತೋಡಕರ ಅವರನ್ನು ಸನ್ಮಾನಿಸಲಾಯಿತು.
ಶರಣ ಬಿ.ಎಂ.ವಾಲಿ, ಡಾ: ಎಸ್.ಸಿ. ಚವಡಿ. ವ್ಹಿ.ವ್ಹಿ. ನಡುವಿನಮನಿ, ಶರಣ ಸುರೇಶ ಸೊನ್ನದ, ಶರಣ ವಿವೇಕಾನಂದ ಪಾಟೀಲ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶರಣೆ ನೀಲಮ್ಮ ಅಂಗಡಿ ಶಿಕ್ಷಕಿ ವಚನ ಪ್ರಾರ್ಥನೆ ಗೈದರು. ಶರಣೆ ಪ್ರತಿಭಾ ಪಟ್ಟಣ ಸ್ವಾಗತಿಸಿದರು. ರವೀಂದ್ರ ಪಟ್ಟಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ವಿಜಯಲಕ್ಷ್ಮಿ ಕೊಟಗಿ ಶರಣು ಸಮರ್ಪಣೆ ಮಾಡಿದರು. ಕುಮಾರಿ ವರ್ಷಾ ಬಾರಕೇರ ಕಾರ್ಯಕ್ರಮ ನಿರೂಪಿಸಿದರು.