ಚಿತ್ರದುರ್ಗ
ಸೆಪ್ಟಂಬರ್ ೧೬ರಂದು ಜಿಲ್ಲೆಯಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಸಡಗರದಿಂದ ನಡೆಸಲು ಮುರುಘಾಮಠದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧಕ್ಷರಾಗಿ ಹನುಮಲಿ ಷಣ್ಮುಖಪ್ಪ, ಗೌರವ ಕಾರ್ಯದರ್ಶಿಯಾಗಿ ಶಾಸಕರಾದ ಕೆ.ಸಿ.ವೀರೇಂದ್ರ, ಗೌರವ ಉಪಾಧ್ಯಕ್ಷರಾಗಿ ಜಿ ಎಂ ಅನಿತ್ ಕುಮಾರ್, ಕೆ.ಎಸ್.ನವೀನ್ ಹಾಗೂ ಖಜಾಂಚಿಯಾಗಿ ಕೆ ಎಂ ವೀರೇಶ್‌ವರನ್ನು ನೇಮಕ ಮಾಡಲಾಯಿತು ಮತ್ತು ಮುಂದೆ ಉಪಸಮಿತಿ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಬೃಹನ್ಮಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿಗೆ ಉದಾತ್ತ ತತ್ವ ನೀಡಿದ ಬಸವಣ್ಣನವರು ಕೇವಲ ಕರ್ನಾಟಕಕ್ಕೆ ಸಾಂಸ್ಕೃತಿಕ ನಾಯಕನಾಗುವುದಕ್ಕಿಂತ ದೇಶದ ಸಾಂಸ್ಕೃತಿಕ ನಾಯಕರಾದರೆ ಅದಕ್ಕೊಂದು ಅರ್ಥ ಬರುತ್ತದೆ. ಸಂವಿಧಾನದ ವಿಚಾರಗಳನ್ನು ಅಂದು ಅನುಭವ ಮಂಟಪದಲ್ಲಿ ಜಾರಿಗೆ ತಂದರು. ಆ ಹಿನ್ನಲೆಯಲ್ಲಿ ಬಸವ ಸಾಂಸ್ಕೃತಿಕ ಅಭಿಯಾನ ಏರ್ಪಟ್ಟಿದೆ.
ಚಿತ್ರದುರ್ಗದಲ್ಲಿ ನಾವು ನೀವೆಲ್ಲರೂ ಸೇರಿ ಯಶಸ್ವಿಯಾಗಿ ನಡೆಸಿಕೊಡಬೇಕಾಗಿದೆ. ಬಸವಣ್ಣನವರು ಹೇಗೆ ಸರ್ವಸಮಾಜದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೋ ಅದೇ ರೀತಿ ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ವಹಿಸಿ ಅರ್ಥಪೂರ್ಣವಾಗಿಸಬೇಕಿದೆ. ಈ ನಿಟ್ಟಿನಲ್ಲಿ ಬಸವಣ್ಣನವರ ಚಿಂತನೆ, ಸಂವಾದ, ಜನಜಾಗೃತಿ ಸೇರಿದಂತೆ ವಿಶಿಷ್ಟ ರೀತಿಯಲ್ಲಿ ಆಚರಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬೇಕೆಂದರು.
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಬಸವ ಸಾಂಸ್ಕೃತಿಕ ಅಭಿಯಾನ ನಡೆಸುವ ಉದ್ದೇಶದಿಂದ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ರಚನೆ ಮಾಡಿಕೊಂಡು ೩-೪ ಸಭೆಗಳನ್ನು ಈಗಾಗಲೇ ನಡೆಸಿದೆ. ಅಭಿಯಾನ ಯಶಸ್ವಿಗೊಳಿಸುವ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಯಲ್ಲೂ ನಡೆಸುವ ಆಶಯ ಹೊಂದಲಾಗಿದೆ. ಇಲ್ಲಿ ಯಾರು ನಾಯಕರಲ್ಲ. ನಮ್ಮ ನಾಯಕ ಬಸವಣ್ಣನವರೇ ಆಗಿದ್ದಾರೆ. ನಾವು ಅವರ ಅನುಯಾಯಿಗಳು. ಇಲ್ಲಿ ನಾವು ಸಾಮಾನ್ಯರಾಗಿ ಕೆಲಸ ಮಾಡಬೇಕಿದೆ. ಇಲ್ಲಿ ಯಾವುದೇ ಕುರ್ಚಿ ಅಮಿಷಗಳಗೆ ಬರುವುದು ಬೇಡ. ಸ್ಥಾನಮಾನಕ್ಕಿಂತ ಸಂಘಟನೆ ಮುಖ್ಯ. ಜಾತಿ ಸಂಘರ್ಷವಿಲ್ಲದೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ.

ಲಿಂಗಾಯಿತ ಎನ್ನುವುದು ಜಾತಿಯಲ್ಲ. ಅದೊಂದು ತತ್ವ ಸಿದ್ಧಾಂತ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಆಡಂಬರದ ಕಾರ್ಯಕ್ರಮ, ಡಿಜೆ ಪ್ರದರ್ಶನವಿರಬಾರದು. ದೇಸಿಯ ಜಾನಪದ ಕಲಾತಂಡಗಳ ಪ್ರದರ್ಶನಗಳಿರಬೇಕು. ಹಣವಂತರಿಗಿಂತ ಗುಣವಂತರ ಸಂಖ್ಯೆ ಹೆಚ್ಚಾಗಬೇಕು. ಒಟ್ಟಾರೆ ಎಲ್ಲಾ ರೀತಿಯಿಂದ ಎಲ್ಲರೂ ಸೇರಿ ಒಳ್ಳೆಯ ಸಂದೇಶ ರವಾನೆಯಾಗುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಿ ಯಶಸ್ವಿಗೊಳಿಸಲು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ನವೀನ್ ಕೆ ಎಸ್ ಮಾತನಾಡಿ, ಬಸವ ಸಾಂಸ್ಕೃತಿಕ ಅಭಿಯಾನ ಒಂದು ಒಳ್ಳೆಯ ಪರಿಕಲ್ಪನೆಯ ಯೋಜನೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕಿದೆ. ಈ ಕಾರ್ಯಕ್ರಮ ಎಲ್ಲರಿಗೂ ಮಾರ್ಗದರ್ಶಿಯಾಗಬೇಕು. ಇದರಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕು. ನಾನು ಶಾಸಕನಾಗಿ ಅನ್ನುದಕ್ಕಿಂತ ಒಬ್ಬ ಬಸವ ಅನುಯಾಯಿಯಾಗಿ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತೇನೆ. ಈ ಆರಂಭದಿಂದ ಕಾರ್ಯಕ್ರಮ ಮುಗಿಯವವರೆಗೆ ನಿಮ್ಮ ಜೊತೆ ಇರುತ್ತೇನೆ. ಬೆಂಗಳೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನೂ ಸಹ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ವೀರಶೈವ ಸಮಾಜದ ಮುಖಂಡರಾದ ಶ್ರೀ ಕೆ.ಸಿ. ನಾಗರಾಜ್ ಮಾತನಾಡಿ, ಸಮಾರಂಭದ ಯಶ್ವಸಿಗೆ ಸಂಬಂಧಿಸಿದಂತೆ ಎಲ್ಲಾ ಸಹಕಾರ ನೆರವು ನೀಡುವುದಾಗಿ ತಿಳಿಸಿದರು.

ಹಿರಿಯ ಮುಖಂಡ ಹನುಮಲಿ ಷಣ್ಮುಖಪ್ಪ ಮಾತನಾಡಿ, ಕಾರ್ಯಕ್ರಮವನ್ನು ಎಲ್ಲರೂ ಸೇರಿ ಚೆನ್ನಾಗಿ ಆಚರಿಸಬೇಕಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂದು ಕಾರ್ಯಕ್ರಮವನ್ನು ಆಯೋಜಿಸೋಣ ಎಂದು ನುಡಿದರು.
ಸಭೆಯಲ್ಲಿ ವಿವಿಧ ಮಠಾಧೀಶರು, ಶರಣೆಯರು, ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಕೆ ಎಂ ಶಿವಸ್ವಾಮಿ, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಸಮಾಜದ ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ, ಸ್ಥಳೀಯ ವೀರಶೈವ ಸಮಾಜದ ಕಾರ್ಯದರ್ಶಿ ವೀರೇಂದ್ರ ಕುಮಾರ್, ಖಜಾಂಚಿ ತಿಪ್ಪೇಸ್ವಾಮಿ, ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಕೆಂಚವೀರಪ್ಪ, ವಿವಿಧ ಸಂಘಟನೆ ಹಾಗೂ ಸಮಾಜಗಳ ಪಧಾಧಿಕಾರಿಗಳಾದ ದ್ಯಾಮಣ್ಣ, ರಾಗಿ ಶಿವಲಿಂಗಪ್ಪ, ಎಸ್ ವಿ ಕಲ್ಲೇಶ್, ಪಿ ವಿ ಕರಿಯಪ್ಪ, ಜಾಗರಾಜ್ ಸಂಗಮ್, ಕಣಿವೆ ಮಾರಮ್ಮ ಸಂಘದ ತಿಪ್ಪೇಸ್ವಾಮಿ ಹಡಪದ ಸಮಾಜದ ಶ್ರೀನಿವಾಸ್ ಮತ್ತಿತರ ಸಮಾಜಗಳ ಮುಖಂಡು ಹಾಗೂ ಪಧಾಧಿಕಾರಿಗಳು ಸೇರಿದಂತೆ ನೂರಾರು ಬಸವ ಅನುಯಾಯಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಮೇಶ್ ಪತ್ತಾರ್ ಪ್ರಾರ್ಥಿಸಿ, ಕೆ ಎಂ ವೀರೇಶ್ ಸ್ವಾಗತಿಸಿ ನಂದೀಶ್ ವಂದಿಸಿದರು.
ಬಸವಪರ ಸಂಘಟನೆಗಳು, ಬಸವಕೇಂದ್ರ, ಬಸವದಳ, ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ, ಮಹಿಳಾಪರ ಸಂಘಟನೆಗಳು, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಹಾಗೂ ಜಿಲ್ಲಾ ಘಟಕ ಸ್ಥಳೀಯ ವೀರಶೈವ ಸಮಾಜ ಹಾಗೂ ವಿವಿಧ ಸಮಾಜಗಳು ಭಾಗವಹಿಸಿದ್ದರು.
ಬಸವ ಸಂಸ್ಕೃತಿ ಅಭಿಯಾನ ವೇಳಾಪಟ್ಟಿ ಬದಲಾಯಿತೆ?
ಸಪ್ಟೆಂಬರ್ 17ಕ್ಕೆ ಚಿತ್ರದುರ್ಗದಲ್ಲಿ ನಡೆದರೆ, ಮುಂದಿನ ಜಿಲ್ಲೆಗಳಲ್ಲಿ ಎಂದು ನಡೆಯುವುದು?
ನೂತನ ವೇಳಾಪಟ್ಟಿ ನೀಡಿ.