‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರಕಿಸಲು ದುಡಿದ ಶರಣರು’

ಗದಗ

ಜಗತ್ತಿಗೆ ಹೊಸ ಮಾರ್ಗವನ್ನು, ಸಮಸಮಾಜವನ್ನು ಹುಟ್ಟು ಹಾಕುವಲ್ಲಿ ಬಸವಾದಿ ಶರಣರು ನಡೆಸಿದ ಚಳುವಳಿ ಎಲ್ಲರಿಗೂ ದಾರಿ ದೀಪ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಧ್ಯೇಯದಂತೆ ನಡೆದವರು ೧೨ನೇ ಶತಮಾನದ ಶರಣರೆಂದು ಪ್ರೊ. ಎನ್.ಎಂ. ಪವಾಡಿಗೌಡ್ರ ಹೇಳಿದರು.

ಅವರು ಶ್ರೀ ತೋಂಟದಾರ್ಯ ಮಠದ ಆವರಣದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಜರುಗಿದ ವಚನ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ೧೪೫ನೇ ಜಯಂತಿ ಹಾಗೂ ಶರಣ ಬಸವರಾಜ ಅಂಗಡಿಯವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಸವಾದಿ ಶಿವಶರಣರ ಸಾಹಿತ್ಯ ಪ್ರಸಾರ, ಮುದ್ರಣ ಸೇವೆ’ ವಿಷಯದ ಮೇಲೆ ಮಾತನಾಡಿದರು.

ವೇದದಿಂದ, ಉಪನಿಷತ್ತಿನಿಂದ, ತ್ರಿಪದಿ, ಕಂದ ಪದ್ಯಗಳ ಪ್ರಭಾವದಿಂದ ವಚನ ಸಾಹಿತ್ಯ ಬೆಳೆದು ಬಂದದ್ದಲ್ಲ. ಇದೊಂದು ಸರ್ವತಂತ್ರ ಸ್ವತಂತ್ರ ಸಾಹಿತ್ಯವೆಂದು ಹೇಳುತ್ತಾ, ಡಾ. ಫ.ಗು. ಹಳಕಟ್ಟಿಯವರ ಧೀಮಂತ ವ್ಯಕ್ತಿತ್ವವನ್ನು ಸ್ಮರಿಸಿಕೊಂಡರು.

ಶರಣೆ ಜಯಶ್ರೀ ಬಿ. ಪಟ್ಟಣಶೆಟ್ಟಿ ಅವರು ಬಸವರಾಜ ಅಯ್ಯಪ್ಪ ಅಂಗಡಿಯವರ ಕುರಿತು ಹೇಳುತ್ತಾ, ಗದುಗಿಗೆ ಮೊದಲು ಲ್ಯಾಮಿನೇಶನ್, ಸ್ಪರ್ಧಾ ಕೈಪಿಡಿಗಳನ್ನು ತಂದವರು ನಮ್ಮ ತಂದೆಯವರು. ಅವರು ವ್ಯಕ್ತಿ ಆಗಿರಲಿಲ್ಲ ಶಕ್ತಿಯಾಗಿದ್ದರು ಎಂದು ಸ್ಮರಿಸಿದರು.

ಪ್ರೊ. ಎಂ. ಯು. ಹಿರೇಮಠ ಅವರು ಬಸವರಾಜ ಅಂಗಡಿ ಅವರು ಅಂದಿನ ದಿನಮಾನದ ಶರಣರಾಗಿದ್ದು ಹಲವಾರು ವ್ಯಕ್ತಿಗಳಿಗೆ ಪ್ರೇರಣೆಯಾಗಿದ್ದರು. ಅವರ ಶಿಸ್ತು ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು. ಶರಣ ಸುರೇಶ ಬಿ. ಅಂಗಡಿ ಅವರು ತಂದೆಯವರ ಪರಿಶ್ರಮದ ಕುರಿತು ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ಬಸವದಳದ ಅಧ್ಯಕ್ಷರಾದ ಶರಣ ವಿ. ಕೆ. ಕರೇಗೌಡ್ರ ಅವರು, ಶರಣರ ವಚನಗಳನ್ನು ಸ್ಮರಿಸುತ್ತಾ, ಫ.ಗು. ಹಳಕಟ್ಟಿಯವರು ತಮ್ಮ ತಂದೆ ಶರಣ ಗುರಪ್ಪ ಮತ್ತು ಮಾವ ತಮ್ಮಣ್ಣಪ್ಪ ಚಿಕ್ಕೋಡಿಯವರಿಂದ ಪ್ರಭಾವಿತರಾಗಿದ್ದರೆಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಪ್ರಕಾಶ ಟಿ. ಅಸುಂಡಿ ಅವರು, ೧೨ನೇ ಶತಮಾನದ ಬರೆದ ಶರಣರ ವಚನಗಳು ಮಠ, ಮಂದಿರ, ಮನೆಗಳಲ್ಲಿ ಪೂಜೆಗೊಳ್ಳುತ್ತ, ಕೊನೆಗೆ ಜೀರ್ಣಗೊಂಡು ಹಾಳಾಗುವ ಸಂದರ್ಭ ಇತ್ತು. ಇಂಥ ಸಂದರ್ಭದಲ್ಲಿ ವಕೀಲರು ಆಗಿದ್ದ ಫ.ಗು. ಹಳ್ಳಕಟ್ಟಿಯವರು ತಮ್ಮ ಕಕ್ಷಿದಾರರ ಮನೆಗೆ ಹೋದಾಗ ಆ ಅಪೂರ್ವ ಸಂಪತ್ತನ್ನು ಕಂಡು ಅವರ ಮನ ಒಲಿಸಿ ಆ ವಚನ ಕಟ್ಟುಗಳನ್ನು ತಂದು ಸಂರಕ್ಷಿಸಿ, ಕೊನೆಗೆ ಮನೆ ಮಾರಿ ವಚನಗಳನ್ನು ಅಚ್ಚು ಹಾಕಿಸಿ ವಚನ ಸಾಹಿತ್ಯವೆಂಬ ಸಂಪತ್ತನ್ನು ಈ ಜಗದ ಕಣ್ಣಿಗೆ ತಂದರು. ಅವರ ತನು, ಮನದಲ್ಲಿ ಶರಣತತ್ವ ಅಳವಟ್ಟಿತು. ಇಂತಹ ಮಹಿಮರಿಂದ ಬರೀ ವಚನ ಸಾಹಿತ್ಯ ರಕ್ಷಣೆಯಷ್ಟೇ ಅಲ್ಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಹಿತ್ಯಕ, ಸಂಘಟನಾತ್ಮಕವಾಗಿ ಕೂಡಾ ವಿಜಯಪುರ ಜಿಲ್ಲೆಯನ್ನು ಬೆಳೆಸಿದರೆಂದು ಸ್ಮರಿಸಿದರು.

ಶರಣೆ ಗಂಗಮ್ಮ ಹೂಗಾರ ಆರಂಭದಲ್ಲಿ ಪ್ರಾರ್ಥಿಸಿದರು. ಶರಣೆ ಜ್ಯೋತಿ ಹೆರಲಗಿ ಅವರು ಸ್ವಾಗತಿಸಿದರು. ಪ್ರೊ. ಸಿದ್ಧಲಿಂಗೇಶ ಎ. ಸಜ್ಜನಶೆಟ್ಟರ ನಿರೂಪಿಸಿದರು. ಎಂ.ಬಿ. ಲಿಂಗದಾಳ ವಂದಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಶರಣ ಎಸ್.ಬಿ. ಮೆಣಸಗಿ, ಪಿ.ಟಿ. ನಾರಾಯಣಪೂರ, ಬೂದಪ್ಪ ಅಂಗಡಿ, ಜಿ.ಪಿ. ಕಟ್ಟಿಮನಿ, ವಿ.ಎಸ್. ಉಪ್ಪಿನ, ಬಸವರಾಜ ವಾರಿ, ಈರಣ್ಣ ಬಡಿಗಣ್ಣನವರ, ಮಲ್ಲಿಕಾರ್ಜುನ ವಾರದ, ಎಚ್.ಬಿ. ತೋಟದ, ಪಟ್ಟಣಶೆಟ್ಟಿ, ಕಾಡಪ್ಪನವರ, ಶರಣೆಯರಾದ ಮಂಜುಳಾ ಹಾಸಿಲಕರ, ರೇಣುಕಾ ಹಾಸಿಲಕರ, ಶ್ರೀಮತಿ ವಾರದ, ಗಿರಿಜಾ ಹಿರೇಮಠ, ಸಹನಾ ಆಲತಗಿ ಮುಂತಾದ ಶರಣ ಬಂಧುಗಳು ಭಾಗಿಗಳಾಗಿದ್ದರು.

ತಾಲೂಕ ಶರಣ ಸಾಹಿತ್ಯ ಪರಿಷತ್ತು ಮತ್ತು ತಾಲೂಕ ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *