ಸಂತೇಬೆನ್ನೂರು
ಸಾಣೇಹಳ್ಳಿಯಿಂದ ಸಂತೇಬೆನ್ನೂರುವರೆಗೆ ಹಮ್ಮಿಕೊಂಡಿದ್ದ ನಮ್ಮ ನಡೆ ಸರ್ವೋದಯದೆಡೆಗೆ’ ಪಾದಯಾತ್ರೆಯ ಸಮಾರೋಪ ಸಮಾರಂಭ ಪಟ್ಟಣದ ಎಸ್.ಎಸ್.ಜೆ.ವಿ.ಪಿ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಗುರುವಾರ ನಡೆಯಿತು.
ಪರಿಸರ ಜಾಗೃತಿ, ಕೃಷಿ ಮರುಚಿಂತನೆ, ಶಿಕ್ಷಣದಲ್ಲಿ ಪರಿವರ್ತನೆ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ರಾಜಕೀಯ ಜಾಗೃತಿಗಾಗಿ ಶ್ರೀ ಡಾ.ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.
ಜ.27ರಂದು ಸಾಂಸ್ಕೃತಿಕ ಕ್ಷೇತ್ರ ಸಾಣೇಹಳ್ಳಿಯಿಂದ ಆರಂಭವಾದ ಪಾದಯಾತ್ರೆ ಬೇಗೂರು, ಅಜ್ಜಂಪುರ, ತಾವರೆಕೆರೆ, ಪಾಂಡೋಮಟ್ಟಿ, ಚನ್ನಗಿರಿ, ದೇವರಹಳ್ಳಿ ಮೂಲಕ ಹಾದು ಐತಿಹಾಸಿಕ ಕ್ಷೇತ್ರ ಸಂತೆಬೆನ್ನೂರಲ್ಲಿ ಸಮಾಪ್ತಿಯಾಯಿತು.
ಪ್ರತಿ ಊರಲ್ಲೂ ಪರಿಸರ, ಆರೋಗ್ಯ, ಕೃಷಿ, ಶಿಕ್ಷಣ ಮತ್ತು ರಾಜಕೀಯ ಚಿಂತನೆಗಳ ನಾಟಕದೊಂದಿಗೆ ಸಾಗಿದ ಜಾಗೃತಿ ಯಾತ್ರೆಯಲ್ಲಿ ನಾಡಿನ ನಾನಾ ನಾನಾ ಚಿಂತಕರು, ಹೋರಾಟಗಾರರು, ರಾಜಕೀಯ ನಾಯಕರು ಪ್ರತಿ ದಿನ ನಡಿಗೆಯಲ್ಲಿ ಹೆಜ್ಜೆ ಹಾಕಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಂಘಟಿತ ಪ್ರಯತ್ನ ಅಗತ್ಯ ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಜಲ, ವಾಯು, ಪರಿಸರ ಹಾಗೂ ಮನ ಮಾಲಿನ್ಯಗಳನ್ನು ತಡೆಗಟ್ಟದಿದ್ದರೆ ನಾಡಿನ ಪರಿಸ್ಥಿತಿ ವಿಕೋಪಕ್ಕೆ ತಲುಪಲಿದೆ. ಈ ಕಾರಣ ಸಂಘಟನೆ ಸರ್ವೋದಯ ನಿರ್ಧಾರದಿಂದ ಪಾದಯಾತ್ರೆ ಮೂಲಕ ಜಾಗೃತಿಗೆ ಸಂಕಲ್ಪ ಮಾಡಲಾಯಿತು, ಎಂದರು.
ಇಂದಿನ ಆಡಳಿತ ಸಂವಿಧಾನದ ಆಶಯದಂತೆ ನಡೆಯುತ್ತಿಲ್ಲ. ರಾಜಕಾರಣಿಗಳು ನೈತಿಕತೆ ಕಳೆದುಕೊಂಡಿದ್ದೇವೆ ಮತ್ತೆ ಸ್ವಾತಂತ್ರ್ಯ ಬೇಕೆಂದರೆ ಪ್ರಾಮಾಣಿಕತೆ ಹಾಗೂ ನೈತಿಕ ನೆಲೆಗಟ್ಟು ಬೇಕು’ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ, ಅಭಿಪ್ರಾಯಪಟ್ಟರು.
ಶರಣರ ಬದುಕಿನಂತೆ ಜೀವನ ರೂಢಿಸಿಕೊಳ್ಳಬೇಕು. ತಮ್ಮ ಹೊಣೆ ಅರಿತು ವ್ಯಕ್ತಿತ್ವ ತಿದ್ದಿ ಕೊಂಡರೆ ಸಮಾಜ ಸುಧಾರಣೆ ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.
ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಮಹಿಮ ಪಟೇಲ್, ಸಾಹಿತಿ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಮೂರ್ತ್ಯಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ, ವಡ್ನಾಳ್ ಜಗದೀಶ್, ತೇಜಸ್ವಿ ಪಟೇಲ್,
ಎಂ.ಸಿದ್ದಪ್ಪ, ಜೆ.ರಂಗನಾಥ್, ಕೆ.ಎಜಾಜ್ ಅಹಮದ್, ಕೆ.ಬಸವರಾಜ್, ಮಲ್ಲಿಕಾರ್ಜುನಸ್ವಾಮಿ, ಎಂ.ಡಿ.ಗುಜ್ಜರ್, ಕೆ.ಮಂಜಪ್ಪ, ಎ.ಡಿ.ರಾಮಣ್ಣ ಹುಚ್ಚಂಗಿ ಪ್ರಸಾದ್, ಎಸ್.ಆರ್. ಕುಮಾರ್, ಕೆ. ಸಿರಾಜ್ ಅಹಮದ್, ಕೆ.ಪಿ.ಮಹೇಶ್, ಎಂ.ಬಿ. ನಾಗರಾಜ್, ಎಸ್.ಜೆ. ಕಿರಣ್ ಕಾರ್ಯಕ್ರಮದಲ್ಲಿ ಹಾಜರಿದ್ದರು.