ಕೋಮುವಾದಿ ಸೇಡಂ ಉತ್ಸವ ವಿರೋಧಿಸಲು ಕಲಬುರ್ಗಿ ಸಭೆ ಕರೆ

ಜನವರಿ 29ರಿಂದ 6 ಫೆಬ್ರವರಿ 2025ರವರೆಗೆ ಸೇಡಂ ಪಟ್ಟಣದ 240 ಏಕರೆ ಜಾಗದಲ್ಲಿ ಸಂಘ ಪರಿವಾರದ ಬೃಹತ್ ಕಾರ್ಯಕ್ರಮ ನಡೆಯಲಿದೆ

ಕಲಬುರ್ಗಿ

ಕೋಮುವಾದಿ ಸ್ವರೂಪದ ‘ಭಾರತೀಯ ಸಂಸ್ಕೃತಿ ಉತ್ಸವ’ವನ್ನು ಖಂಡಿಸಿ ರವಿವಾರ ನಗರದ ಕನ್ನಡ ಭವನದಲ್ಲಿ ಪ್ರಗತಿಪರ ಚಿಂತಕರ ಮತ್ತು ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆಯಿತು.

ಸಂಘ ಪರಿವಾರ ಪ್ರಾಯೋಜಿತ ‘ಭಾರತೀಯ ಸಂಸ್ಕೃತಿ ಉತ್ಸವ’ ಜನವರಿ 29ರಿಂದ 6 ಫೆಬ್ರವರಿ 2025ರವರೆಗೆ ಸೇಡಂ ಪಟ್ಟಣದಲ್ಲಿ ನಡೆಯಲಿದೆ. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿ ಕಲಬುರಗಿ ಇವರ ಸಹಯೋಗದೊಂದಿಗೆ ನಡೆಯಲಿರುವ ಈ ಬೃಹತ್ ಕಾರ್ಯಕ್ರಮವನ್ನು ಪ್ರಕೃತಿ ನಗರ, ಬೀರನಹಳ್ಳಿರಸ್ತೆ, ಕಲಬುರಗಿ ಮಾರ್ಗದ 240 ಏಕರೆ ಜಾಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದರ ಖಂಡನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತಾನಾಡಿದ ಡಾ. ಮೀನಾಕ್ಷಿ ಬಾಳಿ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ 50ನೇ ವರ್ಷಾಚರಣೆಯ ನೆಪದಲ್ಲಿ ನಡೆಯುತ್ತಿರುವ ಉತ್ಸವ ಕಲ್ಯಾಣ ಕರ್ನಾಟಕದ ಸೌಹಾರ್ದತೆಯ ಪರಂಪರೆಯನ್ನು ನಿರ್ನಾಮ ಮಾಡುವ ಹುನ್ನಾರ ಹೊಂದಿದೆ ಎಂದು ಆರೋಪಿಸಿದರು.

ಶರಣ ಸಂಸ್ಕೃತಿ, ಸೂಫಿ ಸಂಸ್ಕೃತಿ, ದ್ರಾವಿಡ, ಶೂದ್ರ, ಶೋಷಿತರ ಪರವಾದ ಸಂಸ್ಕೃತಿಯನ್ನು ಹೊಸಕಿ ಹಾಕುವ ಪ್ರಯತ್ನವನ್ನು ಸಂಘ ಪರಿವಾರ ಮಾಡುತ್ತಲೇ ಬಂದಿದೆ. ಹಾಗಾಗಿ ನಾವೆಲ್ಲರೂ ಮತ್ತಷ್ಟು ಎಚ್ಚೆತ್ತುಕೊಳ್ಳಬೇಕಾಗಿದೆ. ಕೋಮುವಾದಿ ಸಂಸ್ಕೃತಿಯ ಉತ್ಸವಕ್ಕೆ ಉತ್ತರವಾಗಿ ನಾವೆಲ್ಲರೂ ಸೌಹಾರ್ದ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.

ನಂತರ ಮಾತನಾಡಿದ ಬಸವಕಲ್ಯಾಣದ ಬಸವಪ್ರಭು ಸ್ವಾಮಿಜಿ ಅವರು ಮಾಡುತ್ತಿರುವುದು ಭಾರತೀಯ ಸಂಸ್ಕೃತಿಯ ಉತ್ಸವವಲ್ಲ, ಅಧೋಗತಿಯ ಸಂಸ್ಕೃತಿ ಉತ್ಸವವಾಗಿದೆ ಎಂದರು. ಭಾರತದಲ್ಲಿ ವಿವಿಧ ಸಂಸ್ಕೃತಿಗಳಿವೆ. ಆದರೂ ಸನಾತನ ಸಂಸ್ಕೃತಿಯ ಪುನರುತ್ಥಾನವೇ ಇದರ ಉದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರೊ. ಆರ್.ಕೆ . ಹುಡಗಿಯವರು ಮಾತನಾಡುತ್ತಾ ಒಂದು ಶಿಕ್ಷಣ ಸಂಸ್ಥೆಯು ಇಷ್ಟೊಂದು ಹಣ ಖರ್ಚು ಮಾಡಿ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯವೇ? ಮುಖ್ಯಸ್ಥರಾದ ಬಸವರಾಜ ಪಾಟೀಲ ಸೇಡಂ ಅವರು ಕೋಮುವಾದಿ ವಿಷಬೀಜ ಬಿತ್ತಲು ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆಂದು ಹೇಳಿದರು.

ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸುತ್ತಿರುವ ಸ್ವಾಮೀಜಿಗಳಿಗೆ ಅಂತರಂಗ ಪತ್ರ, ರಾಜಕಾರಣಿಗಳಿಗೆ ಬಹಿರಂಗ ಪತ್ರ ಬರೆದು ಅವರು ಉತ್ಸವಕ್ಕೆ ಹೋಗದಂತೆ ತಡೆಯುವುದು ಹಾಗೂ ಅವರ ಉತ್ಸವಕ್ಕೆ ಮೊದಲು ನಾವು ಬಹುತ್ವ ಭಾರತ ಸಂಸ್ಕೃತಿ ಸಮಾವೇಶ ನಡೆಸುವುದೆಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆ ರಾಜ್ಯ ಮುಖಂಡರಾದ ಎಸ್. ವೈ. ಗುರುಶಾಂತ, ಅರ್ಜುನ ಭದ್ರೆ, ಪ್ರಭು ಖಾನಾಪುರೆ, ಚಂದ್ರಕಲಾ ಬಿದರಿ, ಕೆ. ನೀಲಾ, ಶ್ರೀಶೈಲ ಮಸೂತಿ, ದತ್ತಾತ್ರೇಯ ಇಕ್ಕಳಕ್ಕಿ, ಅಬ್ದುಲ್ ಖಾದರ್, ಕೊದಂಡರಾಮ, ಪದ್ಮಿನಿ, ಜಗದೇವಿ, ನಾಗೇಶ, ಆರ್. ಜಿ. ಶೆಟಗಾರ, ಹರಳಯ್ಯ, ನಂದಪ್ಪ, ಲವಿತ್ರ ವಸ್ತ್ರದ, ಶ್ರೀಶೈಲ ಗೂಳಿ, ಪ್ರಮೋದ ಪಂಚಾಳ, ಸುಜಾತಾ, ಗೀತಾ ಹೊಸಮನಿ, ದಲಿತ, ವಿದ್ಯಾರ್ಥಿ, ಯುವಜನ, ಕಾರ್ಮಿಕ, ಸಾಂಸ್ಕೃತಿಕ ಮತ್ತಿತರ ಸಂಘಟನೆಗಳ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

Share This Article
2 Comments
    • ಭಾರತೀಯ ಸಂಸ್ಕೃತಿ ಉತ್ಸವ 7 ಈ ಕಾರ್ಯಕ್ರಮದ ಯಶಸ್ವಿಯಾಗಿ ಪರೋಕ್ಷ ವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಮ್ಮೆಲ್ಲ ಸಹೋದರ ಸಹೋದರಿಯರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

Leave a Reply

Your email address will not be published. Required fields are marked *