‘ವೈದಿಕ ಆಮಿಷಕ್ಕೆ ಒಳಗಾದ ಲಿಂಗಾಯತರು ದಾರಿತಪ್ಪುತ್ತಿದ್ದಾರೆ’

ಬಸವ ಮೀಡಿಯಾ
ಬಸವ ಮೀಡಿಯಾ

ಶಿವನ್ ಕಾರ್ತಿಕ ನಿಲಯ ಗುರುಪ್ರವೇಶ

ಶಹಾಪುರ:

ಲಿಂಗಾಯತರು ಬಸವಾದಿ ಶರಣರು ಹೇಳಿದ ತತ್ವ ಚಿಂತನೆಗಳನ್ನು ಮರೆತು ವೈದಿಕತ್ವಕ್ಕೆ ಅಂಟಿಕೊಳ್ಳುತ್ತಿರುವುದು ವಿಷಾದದ ಸಂಗತಿ. ಯಾವ ಕಾಲ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಎಲ್ಲವುಗಳು ಇಷ್ಟಲಿಂಗದಲ್ಲಿಯೇ ಅಡಗಿವೆ. ವೈದಿಕ ಪ್ರಲೋಭನೆಗೆ ಒಳಗಾದ ಲಿಂಗಾಯತರು ದಾರಿತಪ್ಪುತ್ತಿದ್ದಾರೆ ಎಂದು  ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಸ್ವಾಮೀಜಿಗಳು ನುಡಿದರು.

ನಗರದ ಬಸವ ಮಾರ್ಗ ಪ್ರತಿಷ್ಠಾನದಿಂದ ಮಡಿವಾಳಮ್ಮ ಇಜೇರಿ ಅವರ ‘ಶಿವನ್ ಕಾರ್ತಿಕ ನಿಲಯ’ದ ಗುರುಪ್ರವೇಶದ ನಿಮಿತ್ತ ಹಮ್ಮಿಕೊಂಡ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ನೂರಾರು ಮಾತುಗಳನ್ನು ಆಡುವುದಕ್ಕಿಂತ ನಮ್ಮ ಬದುಕು ಹೆಚ್ಚು ಜನರನ್ನು ಪ್ರಭಾವಿಸುತ್ತದೆ. ನಾನು ಚಿಕ್ಕವನಿರುವಾಗ ಗ್ರಹಿಸಿದ ಸಂಗತಿಗಳು, ಮಾರ್ಗದರ್ಶನ ನೀಡಿದ‌ ಮಹನೀಯರ ವಿಚಾರಗಳು ಇಂದಿಗೂ ನನ್ನನ್ನು ಕೈ ಹಿಡಿದು ನಡೆಸುತ್ತಿವೆ. ಶರಣರ ಸಮಗ್ರ ಚಿಂತನೆಗಳನ್ನು ಸಮಾಜ ಇಂದು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಅಭಿಪ್ರಾಯ ಪಟ್ಟರು.

ಬಸವಾದಿ ಶರಣರು ದುಡಿಯುವ ರೈತಾಪಿ ವರ್ಗದ ಬಗೆಗೆ ಅಪಾರವಾದ ಪ್ರೀತಿ ಗೌರವಗಳನ್ನು ಇಟ್ಟುಕೊಂಡಿದ್ದರು. ರೈತರನ್ನು ಇಂದು ಶೋಷಣೆಗೆ ಗುರಿಪಡಿಸದವರೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ. ಸಣ್ಣಪುಟ್ಟ ಸಾಲ ಮಾಡಿದ ರೈತ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತ ಬೆಳೆದ ಬೆಳೆಗೆ ಯೋಗ್ಯ ಧಾರಣಿ ನೀಡಿದರೆ ಆತ ಖಂಡಿತಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲಾರ. ಶರಣಹೃದಯಿಗಳು ಮತ್ತು ಸರಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕೆಂದು ಪ್ರಾಂತ ರೈತ ಸಂಘದ ಮುಖಂಡ ಚೆನ್ನಪ್ಪ ಆನೆಗುಂದಿ ಹೇಳಿದರು.

ಮನೆ ಕಟ್ಟುವುದು ದೊಡ್ಡದಲ್ಲ, ಆ ಮನೆಯಲ್ಲಿ ಬಹುದೊಡ್ಡ ಮನಸ್ಸು ಇರಬೇಕಾದುದು ಮುಖ್ಯ. ಮನೆ ಮಹಾಮನೆ ಆಗಬೇಕಾದರೆ ಅಲ್ಲಿ ವಾಸಿಸುವವರು ಇವನಾರವ ಇವನಾರವ ಎಂದು ದೂರೀಕರಿಸದೆ, ಎಲ್ಲರನ್ನು ತಬ್ಬಿಕೊಳ್ಳುವ ಆತ್ಮೀಯ ಭಾವ ಬೆಳೆಸಿಕೊಳ್ಳಬೇಕು. ಮೌಢ್ಯಗಳಿಗೆ ಒಳಗಾಗಿ ಯಜ್ಞಯಾಗ ಮಾಡುವುದಕ್ಕೆ ಜನಸಾಮಾನ್ಯ ಬಲಿಯಾಗಬಾರದು. ಸಹಜ ಮತ್ತು ಸರಳ ನಡೆನುಡಿಗಳಲ್ಲಿ ದೇವರಿದ್ದಾನೆ. ದೇವರನ್ನು ಒಲಿಸಿಕೊಳ್ಳಲಿಕ್ಕೆ ನಿರ್ಮಲ ಮನಸ್ಸೊಂದೇ ಸಾಕು ಎಂದು  ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅನುಭಾವ ನೀಡಿದರು.

ಸಾಹಿತಿ ಶಿವಣ್ಣ  ಇಜೇರಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಡಾ. ಸಿದ್ಧರಾಮ ಹೊನ್ಕಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶರಣು ಯಡ್ರಾಮಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಮಡಿವಾಳಮ್ಮ ಇಜೇರಿ ವಂದಿಸಿದರು.

ಸಭೆಯಲ್ಲಿ ಶಿವಶಂಕರ ಔರಸಂಗ, ಗುಂಡಪ್ಪ ತುಂಬಗಿ, ವಿರೂಪಾಕ್ಷಿ ಹೇರುಂಡಿ, ಖಾಜಾ ಪಟೇಲ, ಕರೀಂ ಪಟೇಲ, ಡಾ. ಪ್ರಭುರಾಜ ಮಡ್ಡಿ, ನಾಡಗೌಡ, ಗುರುಬಸಯ್ಯ ಗದ್ದುಗೆ, ಸೋಮಶೇಖರ ಹಿರೇಮಠ,    ಸೂಗಣ್ಣ ದೇವದುರ್ಗ, ಬಸವರಾಜ ಶಿಣ್ಣೂರ, ಅಕ್ಬರ್ ಹೊಟಗಿ, ಮಹೇಶಬಾಬು ಸುರ್ವೆ, ರವೀಂದ್ರನಾಥ ಹೊಸ್ಮನಿ, ಸಿದ್ದಲಿಂಗಣ್ಣ ಆನೇಗುಂದಿ, ರವಿ ರಾಂಪೂರ, ವಿಶ್ವನಾಥ ಕುಂಬಾರ, ಸಿದ್ದಲಿಂಗಪ್ಪ ಕೆರವಟಿಗಿ, ಉಮೇಶ್ ಗುಡಗುಂಟಿ, ಬಸವರಾಜ ಮ್ಯಾಗಿನಮನಿ, ತಿಪ್ಪಣ್ಣ ಜಮಾದಾರ ಕಳ್ಳಿ, ಕಂಠೆಪ್ಪ ಮ್ಯಾಗಿನಮನಿ, ಬಸವರಾಜ ಆನೇಗುಂದಿ, ಸಂಗಮೇಶ ತುಂಬಿಗಿ, ಪಂಪಣ್ಣಗೌಡ ಮಳಗ, ಭೀಮಣ್ಣ ಚನ್ನೂರ  ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಶಿವಣ್ಣ ಇಜೇರಿಯವರು ರಚಿಸಿ, ಪ್ರಕಾಶನಗೊಳಿಸಿದ ಪುಸ್ತಕಗಳನ್ನು ಕೊಟ್ಟು ಗೌರವಿಸಲಾಯಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *