ಗದಗ
ಸಾಮಾಜಿಕ, ಧಾರ್ಮಿಕ ಹಾಗು ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ, ಶಿಕ್ಷಣಪ್ರೇಮಿ, ಅಖಿಲಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪನವರು ಲಿಂಗೈಕ್ಯರಾದುದು ನಮ್ಮ ನಾಡಿಗೆ ತುಂಬಲಾಗದ ನಷ್ಟ.
ಮುತ್ಸದ್ಧಿ ನಾಯಕರಾಗಿದ್ದ ಅವರ ಅಗಲುವಿಕೆಯಿಂದ ಶೈಕ್ಷಣಿಕ ಲೋಕದ ಮಿನುಗು ನಕ್ಷತ್ರವೊಂದು ಕಣ್ಮರೆಯಾದಂತಾಗಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಗದಗ-ಡಂಬಳ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು ಶಾಮನೂರು ಶಿವಶಂಕರಪ್ಪ ಅವರು ಪ್ರತಿಭೆ ಮತ್ತು ಪರಿಶ್ರಮಗಳ ಕೂಡಲಸಂಗಮದಂತಿದ್ದರು.
ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಧರ್ಮದ ಏಳಿಗೆಗಾಗಿ ಮತ್ತು ಲಿಂಗಾಯತ ಸ್ವತಂತ್ರಧರ್ಮದ ಮಾನ್ಯತೆಗಾಗಿ ನಿರಂತರ ಶ್ರಮಿಸುತ್ತಿದ್ದರು. ತಾವು ದಾವಣಗೆರೆಯಲ್ಲಿ ಕರೆದ ಸಮಾವೇಶದಲ್ಲಿ ‘ಲಿಂಗಾಯತರು ಹಿಂದೂಗಳಲ್ಲ’ ಎಂದು ಘಂಟಾಘೋಷವಾಗಿ ಸಾರಿದ್ದಲ್ಲದೆ ವಿಶ್ವಗುರು ಬಸವಣ್ಣನವರೇ ಈ ಧರ್ಮದ ಧರ್ಮಗುರು ಎಂದು ನಂಬಿ ನಡೆದಿದ್ದರು. ಇಂದು ಅವರ ಆಶಯಗಳನ್ನು ಈಡೇರಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎನಿಸುವುದು.
ಮಹಾದಾಸೋಹಿ, ಶೈಕ್ಷಣಿಕ ಲೋಕದ ಧ್ರುವತಾರೆ ಎನಿಸಿದ್ದ ಮತ್ತು ತಮ್ಮ ಅಂಗವನ್ನು ಮಹಾಲಿಂಗದಲ್ಲಿ ಬೆರೆಸಿದ ಶಾಮನೂರು ಶಿವಶಂಕರಪ್ಪ ಅವರಿಗೆ ಸಾವಿಲ್ಲ. ‘’ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು’’ ಎಂಬ ಶರಣವಾಣಿಯನ್ನು ಸಾಕಾರಗೊಳಿಸಿದ ಅವರ ಅಮರ ವ್ಯಕ್ತಿತ್ವ ಚಿರಂತನವಾಗಿರುವುದು.
ಅವರ ಅಗಲುವಿಕೆಯಿಂದಾದ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಪರಿವಾರಕ್ಕೆ ಹಾಗು ನಾಡ ಜನತೆಗೆ ಬಸವಾದಿ ಶಿವಶರಣರು ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.
