ಶರಣಬಸವೇಶ್ವರ ಮಠದಲ್ಲಿ ಒಂದು ವಾರದ ‘ದಾಸೋಹ ಸಂಸ್ಕೃತಿ ಉತ್ಸವ’

ಬಸವ ಮೀಡಿಯಾ
ಬಸವ ಮೀಡಿಯಾ

ಜಗಳೂರು

ತಾಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಮಾ.15 ರಿಂದ 7 ದಿನಗಳ ಕಾಲ ‘ದಾಸೋಹ ಸಂಸ್ಕೃತಿ ಉತ್ಸವ’ ಕಾರ್ಯಕ್ರಮ ಜರುಗಲಿದೆ ಎಂದು ಮಠ ನಿರ್ಮಾಣ ಅಭಿವೃದ್ಧಿ ಸಮಿತಿ ಸಂಘಟನಾ ಸಂಚಾಲಕ ಹಾಗೂ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ದೊಣೆಹಳ್ಳಿ ಶರಣಬಸವೇಶ್ವರ ದಾಸೋಹ ಮಠ ನಿರ್ಮಾಣ ಅಭಿವೃದ್ಧಿ ಸಮಿತಿ ವತಿಯಿಂದ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಮಾ.15ರಂದು ಜಗಳೂರು ನೆರೆಯ ತಾಲೂಕುಗಳಾದ ಕೂಡ್ಲಿಗಿ, ಮೊಳಕಾಲ್ಕೂರು, ಚಳ್ಳಕೆರೆ, ತಾಲೂಕುಗಳ ಸಮಗ್ರ ನೀರಾವರಿ ಐಕ್ಯ ಹೋರಾಟ ಕುರಿತು ಚರ್ಚಿಸಲು ರೈತ ಸಮಾವೇಶದೊಂದಿಗೆ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಮಾವೇಶದಲ್ಲಿ ವಿವಿಧ ಬಸವಾದಿ ಶರಣರ ತತ್ವದಡಿಯ ಮಠಾಧೀಶರ ಸಾನ್ನಿಧ್ಯದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಡಾ.ಪ್ರಭಾ ಮಲ್ಲಿಕಾರ್ಜುನ, ಈ. ತುಕಾರಾಂ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಡಾ. ಎನ್.ಟಿ. ಶ್ರೀನಿವಾಸ್, ಟಿ. ರಘುಮೂರ್ತಿ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ,ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದರು.

ಮಾ.16ರಂದು ಭಾನುವಾರ ಚಿತ್ರದುರ್ಗ ಮುರುಘಾ ಮಠದ ಮಾದಾರ ಚನ್ನಯ್ಯ ಅವರ ದಿವ್ಯ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಸಮಾವೇಶ ನಡೆಯಲಿದೆ. ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಉಚಿತ ಸಾಮೂಹಿಕ ವಿವಾಹಗಳು ಮತ್ತು ರಾಜ್ಯಮಟ್ಟದ ವಧುವರರ ಸಮಾವೇಶ ಜರುಗಲಿವೆ. ಇದೇ ವೇಳೆ ಸಾಹಿತಿ ಡಾ. ಸಂಗೇನಹಳ್ಳಿ ಅಶೋಕ ಕುಮಾರ ಅವರ ನನ್ನ ದೇವರು ಮತ್ತು ಇತರ ಕವಿತೆಗಳು ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಗಣ್ಯರು ಹಾಗೂ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, 17ರಂದು ಶರಣ ಸಂಗಮ, ಉಚಿತ ಆರೋಗ್ಯ ತಪಾಸಣಾ ಸಮಾವೇಶ, ಮಾ.22, 23 ರಂದು ಉಚಿತ ಕೃತಕ ಪೂರ್ಣ ದಂತಪಂಕ್ತಿ ಜೋಡಣಾ ಶಿಬಿರದಲ್ಲಿ ಬೆಂಗಳೂರಿನ ಸರ್ಕಾರಿ ದಂತ ಮಹಾವಿದ್ಯಾಲಯದ 150ಕ್ಕೂ ಅಧಿಕ ವೈದ್ಯರ ತಂಡ ಆಗಮಿಸಲಿದೆ. ಮಾ.23ರಂದು ಮಧ್ಯಾಹ್ನ ದಂತಪಂಕ್ತಿ ವಿತರಣಾ ಸಮಾರಂಭದಲ್ಲಿ ಮುರುಘಾ ರಾಜೇಂದ್ರ ಬೃಹನ್ಮಠದ ಉಸ್ತುವಾರಿ ಸದಸ್ಯ ಡಾ. ಬಸವಕುಮಾರ ಶ್ರೀ, ಮುಖ್ಯ ಅತಿಥಿಗಳಾಗಿ ದಾಮ ಐಮಡಿ ಶರಣಾರ್ಯರು, ಗಣ್ಯರು ಇರುವರು. ಅಧ್ಯಕ್ಷತೆಯನ್ನು ಶಾಸಕ ಬಿ.ದೇವೇಂದ್ರಪ್ಪ ವಹಿಸಲಿದ್ದಾರೆ ಎಂದರು.

ವೀರಶೈವ ಸಮಾಜದ ಮುಖಂಡ ಶಿವನಗೌಡ, ಸಾಹಿತಿ ಸಂಗೇನಹಳ್ಳಿ ಅಶೋಕ ಕುಮಾರ್, ಕಾನಾಮಡುಗು ಪ್ರಾಂಶುಪಾಲ ನಾಗಲಿಂಗಪ್ಪ, ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್, ಏಳಂಜಿ ಶರಣಪ್ಪ, ವಿಎಸ್‌ಎಸ್‌ಎನ್‌ ಅಧ್ಯಕ್ಷ ಕೆ.ಗುರುಮೂರ್ತಿ, ಸಂತೋಷ ಕುಮಾರ್, ವಿಜಯ್ ಕುಮಾರ್, ಪ್ರಾಂಶುಪಾಲ ನಾಗಲಿಂಗಪ್ಪ, ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *