ನರಗುಂದ
ಶರಣರು ಜಗತ್ತಿಗೆ ಸಂವಿಧಾನ ನೀಡಿದರು. ಶರಣ ಸಾಹಿತ್ಯ ಎಲ್ಲ ಕಾಲ, ಎಲ್ಲ ವರ್ಗಕ್ಕೂ ಪ್ರಸ್ತುತವಾಗುವ ಪ್ರತಿಪಾದನೆ ಮಾಡಿದ ಮೌಲ್ಯಗಳು ಜೀವನ ಮೌಲ್ಯಗಳು. ಇದು ಜೀವನ ಸಂವಿಧಾನಕ್ಕೆ ಶರಣರು ನೀಡಿದ ನೀತಿ ಸಂಹಿತೆಯಾಗಿದೆ. ಶರಣ ಚಳವಳಿಯು ಗಾಂಧಿ ಮತ್ತು ಅಂಬೇಡ್ಕರ್ ಅವರ ಸಮೀಕರಣದಂತೆ ಕಾಣುತ್ತದೆ. ಈ ಇಬ್ಬರೂ ಕಟ್ಟಲು ಬಯಸಿದ ಆರೋಗ್ಯಪೂರ್ಣ, ಮಾನವೀಯ, ಸ್ವಾವಲಂಬಿ ಸಮುದಾಯದ ಸಮಗ್ರ ಕಲ್ಪನೆಯೊಂದು ೧೨ನೇ ಶತಮಾನದಲ್ಲಿಯೇ ಕಂಡುಬಂದಿದೆ ಎಂದು ಉಪನ್ಯಾಸಕರಾದ ಶಂಭು ಹೆಗಡಾಳ ಅವರು ಬಣ್ಣಿಸಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಪರಿಷತ್ತಿನ ನರಗುಂದ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯ ರಚನೆಯಾದ ಹಲವು ಶತಮಾನಗಳ ನಂತರವೂ ಶರಣರ ನಿಜ ಜೀವನದ ಅನುಭವಗಳನ್ನು ಆಧರಿಸಿ ಬರೆಯಲಾದ ವಚನಗಳು ಇನ್ನೂ ಅರ್ಥಪೂರ್ಣ ಜೀವನಕ್ಕೆ ಮಾರ್ಗದರ್ಶಕ ಬೆಳಕಾಗಿ ಕಾರ್ಯನಿರ್ವಹಿಸುತ್ತಿವೆ. ಶರಣ ಚಳವಳಿಯ ಮೂಲ ತತ್ವಗಳಾದ ಕಾಯಕ ಮತ್ತು ದಾಸೋಹದಿಂದ ಜನರು ವಿಮುಖರಾಗುತ್ತಿರುವುದು ದುರ್ದೈವದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಪೊಲೀಸ್ ವರಿಷ್ಠಾಧಿಕಾರಿಗಳಾದ ಗುರು ಮತ್ತೂರ ಅವರು ಮಾತನಾಡಿ, ಶರಣರು ರಚಿಸಿದ ವಚನಗಳು ಜೀವನ ಅನುಭವಗಳ ಅಭಿವ್ಯಕ್ತಿಗಳಾಗಿವೆ. ದಾರ್ಶನಿಕ ಸುಧಾರಕರು ಶೋಷಣೆ ಮತ್ತು ದಬ್ಬಾಳಿಕೆಯಿಂದ ಮುಕ್ತವಾದ ಮತ್ತು ಸಮಾನತೆ ಮತ್ತು ಭ್ರಾತೃತ್ವವನ್ನು ಆಧರಿಸಿದ ಸಮಾನತಾವಾದಿ ಸಮಾಜಕ್ಕಾಗಿ ಹೋರಾಡಿದರು. ವಚನಗಳು ರಚನೆಯಾದ ಎಂಟು ಶತಮಾನಗಳ ನಂತರವೂ ಜನರಿಗೆ ಮಾರ್ಗದರ್ಶಕ ಬೆಳಕಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಸಾನಿದ್ಯವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವವಚನದ ಮೂಲಕ ಶರಣರ ವಚನಗಳು ಸರ‍್ವ ಸಮಾನತೆಯ ತತ್ವ, ಸಿದ್ಧಾಂತದ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಶರಣ ಸಾಹಿತ್ಯವನ್ನು ವಿಶ್ವನಾಯಕರಿಗೆ ಪರಿಚಯಿಸಿ ವಚನ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸಬೇಕಾಗಿದೆ. ವಚನಗಳು ಕನ್ನಡದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಅಷ್ಟೇ ಅಲ್ಲ ಅವು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪರ‍್ವ ಕೊಡುಗೆಗಳಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಉಮೇಶಗೌಡ ಪಾಟೀಲ, ಗದಗ ಜಿಲ್ಲಾ ಶಶಾಪ ಅಧ್ಯಕ್ಷ ಕೆ. ಎ. ಬಳಿಗೇರ ಮಾತನಾಡಿದರು.

ವೇದಿಕೆ ಮೇಲೆ ಅಪ್ಪಣ ನಾಯ್ಕರ, ಸಿ .ಎಸ್. ಸಾಲೂಟಗಿಮಠ, ಬಿ. ಎಮ್. ಜಾಬಣ್ಣವರ, ಪ್ರೋ ಪಿ. ಎಸ್. ಅಣ್ಣಿಗೇರಿ, ಚಂದ್ರು ದಂಡಿನ, ಗ್ರಾ.ಪಂ ಅಧ್ಯಕ್ಷ ಜ್ಞಾನದೇವ ಮನೇನಕೊಪ್ಪ, ಲೀಲಕ್ಕ ಹಸಬಿ, ಸುಕನ್ಯಾ ಸಾಲಿ, ಎಸ್. ಜಿ. ಮಣ್ಣೂರಮಠ ಸೇರಿದಂತೆ ನೂತನ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಎಸ್.ಎಸ್. ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.