ಶರಣಸಿರಿ ಪ್ರಶಸ್ತಿ ಪುರಸ್ಕೃತ : ಚಿಕ್ಕೋಳ್ ಈಶ್ವರಪ್ಪ

ದಾವಣಗೆರೆ:

” ಸತ್ಯವಚನವ ನುಡಿಯಬಲ್ಲರೆ ಶರಣನೆಂಬೆನು.

ಸದಾಚಾರದಲ್ಲಿ ನಡೆಯಬಲ್ಲರೆ ಶರಣನೆಂಬೆನು.

ವೃತ್ತಿಜ್ಞಾನವಳಿದು ಚಿತ್ತದ ಕೊನೆಯ ಮೊನೆಯಲ್ಲಿ,

ನಿತ್ಯಲಿಂಗದ ನೆನಹು ತುಂಬಿ ಸುಳಿಯಬಲ್ಲರೆ ಅಚ್ಚ ಶರಣನೆಂಬೆನಯ್ಯ ಅಖಂಡೇಶ್ವರ. “

ಯಾರಿಗೆ ಶರಣ ಎನ್ನಬೇಕು? ಶರಣನ ನಿಲುವು ಏನು?ಎನ್ನುವುದನ್ನು ಷಣ್ಮುಖ ಶಿವಯೋಗಿಗಳು ತಮ್ಮ ಮೇಲಿನ ವಚನದಲ್ಲಿ ಚೆನ್ನಾಗಿ ತಿಳಿಸಿದ್ದಾರೆ.

ಸತ್ಯದ ನುಡಿಗಳನ್ನಾಡುವುದು, ನುಡಿಯಂತೆ ಸದಾಚಾರದಲ್ಲಿ ಇರುವುದು, ಮನಸ್ಸಿನಲ್ಲಿ ಇದ್ದ ಭಿನ್ನ ಭೇದದ ಭಾವಗುಣಗಳು ನಶಿಸಿ, ಸದಾಕಾಲ ಚಿತ್ತದಲ್ಲಿ ; ಸತ್ಯ ನಿತ್ಯ ಪರಿಪೂರ್ಣವಾದ ಲಿಂಗದ ಧ್ಯಾನವು ಆವರಿಸಿದ್ದರೆ, ಕ್ಷಣ ಕ್ಷಣದಲ್ಲಿ ಲಿಂಗಾಂಗದ ಭಾವ ಸುಳಿಯುತ್ತಿದ್ದರೆ ಅಂತವರನ್ನು ಶರಣರು ಎನ್ನಬೇಕು ಎನ್ನುತ್ತಾರೆ.

ಇಂದು ಇಂತಹ ನಿಲುವಿನ ಶರಣರನ್ನು ಕಾಣುವುದು ಕಷ್ಟವೇನೋ ಎನಿಸುತ್ತದೆ. ಚನ್ನಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ” ಕೋಟಿಗೊಬ್ಬ ಶರಣ ” ಎಂದಿದ್ದಾರೆ. ಇನ್ನು ಈ ಸಮಯದಲ್ಲಿ ಎಷ್ಟು ಕೋಟಿಗೆ ಒಬ್ಬ ಶರಣನನ್ನು ಕಾಣಬಹುದು ಎಂದು ನಾವು ಆಲೋಚಿಸಬೇಕಿದೆ ಅವಲೋಕಿಸಬೇಕಿದೆ.

ಅವಲೋಕಿಸಿ ಆಲೋಚಿಸಿ ನೋಡಿದಾಗ, ಬಸವತತ್ವವನ್ನೇ ತಮ್ಮ ಉಸಿರಾಗಿಸಿಕೊಂಡು, ಪರಿಶುದ್ಧವಾದ ಸತ್ಯದ ನಡೆ ನುಡಿಯಿಂದ ಜೀವನವನ್ನು ನಡೆಸುತ್ತಿರುವ ಚಿಕ್ಕೋಳ ಈಶ್ವರಪ್ಪನವರು ಶರಣ ಎಂಬ ಪದಕ್ಕೆ ಅರ್ಹರಾಗಿದ್ದಾರೆ.

ದಿನಾಂಕ 12.06.1937 ರಂದು ರಾಮಮ್ಮ- ಚಂದಪ್ಪ, ಚಿಕ್ಕೋಳ ಶರಣ ದಂಪತಿಗಳಿಗೆ ಜನಿಸಿದವರೆ ಚಿಕ್ಕೋಳ ಈಶ್ವರಪ್ಪನವರು.

ಎಸ್.ಎಸ್.ಎಲ್.ಸಿ, ಮತ್ತು ಟಿ.ಸಿ.ಹೆಚ್, ಸಿ.ಪಿ.ಎಡ್, ಎನ್.ಡಿ.ಎಸ್. ಮಾಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ, 1958 ರ ಜುಲೈ 18 ರಂದು ಸಹ ಶಿಕ್ಷಕರಾಗಿ ಪ್ರಥಮವಾಗಿ ಕರ್ತವ್ಯಕ್ಕೆ ಸೇರುತ್ತಾರೆ. ಶಾಲೆಯಲ್ಲಿ ಶಿಸ್ತಿನ ಸಿಪಾಯಿಯಂತೆ ಇದ್ದು, ವಿದ್ಯಾರ್ಥಿಗಳಿಂದ ಶಾಲಾ ಶಿಕ್ಷಕರಿಂದ, ಗ್ರಾಮದ ನಾಗರಿಕರಿಂದ ಉತ್ತಮ ಶಿಕ್ಷಕರು ಎಂಬ ಹೆಸರನ್ನು ಪಡೆದಿದ್ದಾರೆ. ಮುಂದೆ ಮುಖ್ಯಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿ, ದಾವಣಗೆರೆಗೆ ಬಂದು ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರತರಾಗುತ್ತಾರೆ.

” ಲೋಕ ವಿರೋಧಿ ಶರಣ ಯಾರಿಗೂ ಅಂಜುವುದಿಲ್ಲ ಕೂಡಲಸಂಗಮದೇವರ ರಾಜ ತೇಜದೊಳಿರ್ಪನಾಗಿ ” ಎಂಬ ಗುರು ಬಸವಣ್ಣನವರ  ವಚನ ವಾಣಿಯಂತೆ ನೇರ ನಡೆ-ನುಡಿ ಸಿದ್ಧಾಂತಕ್ಕೆ ಹೆಸರಾದವರು ಈಶ್ವರಪ್ಪನವರು.

ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸುದೀರ್ಘವಾಗಿ 25 ವರ್ಷಗಳ ಕಾಲ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿಗೆ ಭದ್ರ ಬುನಾದಿ ಹಾಕಿದ ಕೀರ್ತಿ ಅವರದ್ದಾಗಿದೆ.

ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿ, 1995 ರಲ್ಲಿ ನಾಲ್ಕು ಅವಧಿಗೆ ಚನ್ನಗಿರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಚನ್ನಗಿರಿ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ, ನಾಡೋಜ ಡಾ|| ಎಂ. ಚಿದಾನಂದಮೂರ್ತಿ ಸಾಹಿತ್ಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿ, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಉಪಾಧ್ಯಕ್ಷರಾಗಿ, ಚನ್ನಗಿರಿ ತಾಲ್ಲೂಕು ನಿವೃತ್ತ ನೌಕರರ ಸಂಘದ ಕಾರ್ಯದರ್ಶಿಯಾಗಿ,  ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲಾ ಸಂಚಾಲಕರಾಗಿ, ಚನ್ನಗಿರಿ ತಾಲ್ಲೂಕು ಭಾರತ ಸ್ಕೌಟ್ ಮತ್ತು ಗೈಡ್ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅನೇಕ ಪ್ರಶಸ್ತಿ ಸನ್ಮಾನಗಳು ಇವರನ್ನು ಹರಸಿ ಬಂದಿವೆ.

2007ರಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮ. ರಾಮಮೂರ್ತಿ ರಾಜ್ಯಪ್ರಶಸ್ತಿ, ಸಿದ್ಧಗಂಗಾ ಸೇವಾ ರತ್ನ , 2015 ರಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ರಾಜ್ಯ ಪ್ರಶಸ್ತಿ, ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಸಿದ್ಧಗಂಗಾ ಶ್ರೀಗಳ ನೆನಪಿನ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಸೃಷ್ಟಿ ಶಕ್ತಿ ಸಂಸ್ಥೆಯಿಂದ ಮತ್ತು ದಾವಣಗೆರೆ ಮತ್ತು ಚನ್ನಗಿರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಕವಿ ಹೆಚ್. ಎಸ್ಕೆ ನೆನಪಿನ ಸಾಹಿತ್ಯ ಪ್ರಶಸ್ತಿ, ಸುವರ್ಣ ಸಾಧಕ ಸಿರಿ ಪ್ರಶಸ್ತಿ, ತುಮಕೂರು ರೋಟರಿ ಸಂಸ್ಥೆಯಿಂದ ಭಾರತ ಸೇವಾ ರತ್ನ ಪ್ರಶಸ್ತಿ, ಬಸವ ರತ್ನ ರಾಷ್ಟಪ್ರಶಸ್ತಿ, ಹಿರಿಯ ನಾಗರಿಕ ಸೇವಾ ಪ್ರಶಸ್ತಿ,  ಸಿಂಗಪೂರನಲ್ಲಿ ಪತ್ರಕರ್ತರ ಸಂಘದಿಂದ 2010 ರಲ್ಲಿ ನಡೆದ 7ನೇ ವಿಶ್ವ ಕನ್ನಡ ಸಂಸ್ಕೃತಿ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಹೀಗೆ ಅನೇಕ ಸಂಘ ಸಂಸ್ಥೆಗಳು ಮಠಗಳು, ದಾವಣಗೆರೆಯ ವಿಶ್ವವಿದ್ಯಾಲಯ, ಶಾಲಾ ಕಾಲೇಜುಗಳು ಶರಣ ಈಶ್ವರಪ್ಪನವರಿಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಇಂತಹ ಮಹನೀಯರಾದ ಶರಣ ಚಿಕ್ಕೋಳ ಈಶ್ವರಪ್ಪನವರಿಗೆ, ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕೊಡಮಾಡುವ “ಶರಣಸಿರಿ ” 2026 ರ ಪ್ರಶಸ್ತಿಯು  ಲಭಿಸಿದೆ.

ಭೀಮಸಮುದ್ರದ ಲಿಂಗೈಕ್ಯ ಶ್ರೀಮತಿ ಹಾಲಮ್ಮ ಮತ್ತು ಲಿಂಗೈಕ್ಯ ಶ್ರೀ ಜಿ. ಮಲ್ಲಿಕಾರ್ಜುನಪ್ಪ ಇವರ ಸ್ಮರಣಾರ್ಥ; ಗಾಯತ್ರಿ ಸಿದ್ದೇಶ್ವರ ಮತ್ತು ಜಿ.ಎಂ. ಸಿದ್ದೇಶ್ವರ ಅವರು ಶರಣ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿರುವ ; ದತ್ತಿನಿಧಿಯ ಆದಾಯದಲ್ಲಿ ಪ್ರತಿವರ್ಷ, ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು 2025ರಿಂದ “ಶರಣ ಸಿರಿ” ಪ್ರಶಸ್ತಿಯನ್ನು ಸೂಕ್ತವಾದವರಿಗೆ ನೀಡಿ ಗೌರವಿಸುತ್ತಿದೆ.

ಈ ವರ್ಷದ 2026 ರ “ಶರಣಸಿರಿ” ಪ್ರಶಸ್ತಿಯನ್ನು ಇಂದು  ದಾವಣಗೆರೆಯ ಹರಿಹರ ರಸ್ತೆಯ ; ಜಿ.ಎಂ. ವಿಶ್ವವಿದ್ಯಾಲಯಲ್ಲಿ ನಡೆಯುವ ಪರಿಷತ್ತಿನ ದತ್ತಿ ಕಾರ್ಯಕ್ರಮದಲ್ಲಿ ಶರಣ ಚಿಕ್ಕೋಳ್ ಈಶ್ವರಪ್ಪನವರಿಗೆ ನೀಡಿ ಗೌರವಿಸಲಾಗುತ್ತಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *