ಶರಣ ಹೂಗಾರ ಮಾದಯ್ಯನವರ ಕಾಯಕ ಅನನ್ಯವಾದುದು

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

೧೨ನೇ ಶತಮಾನ ಕನ್ನಡನಾಡಿನ ಇತಿಹಾಸದಲ್ಲೊಂದು ಪರ್ವಕಾಲ. ಅಂದು ಬಸವಣ್ಣನವರ ನೇತೃತ್ವದಲ್ಲಿ ಸರ್ವ ಕಾಯಕಗಳ ಶರಣರು ಅನುಭವ ಮಂಟಪದಲ್ಲಿ ನೆರೆದು ತಾವು ಕಟ್ಟಬೇಕಾದ ಸಮಸಮಾಜದ ಬಗ್ಗೆ ಚರ್ಚಿಸುತ್ತಿದ್ದರು. ಅವರಲ್ಲಿ ಹೂವಿನ ಕಾಯಕದ ಹೂಗಾರ ಮಾದಯ್ಯನವರೂ ಒಬ್ಬರಾಗಿದ್ದರು. ಅವರ ಜೀವನ ಚರಿತ್ರೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲವಾದರೂ ಅನೇಕ ಶರಣರು ಅವರನ್ನು ಸ್ಮರಿಸಿಕೊಂಡಿದ್ದಾರೆ. ಕಾರಣ ಅಂತಹ ಘನ ವ್ಯಕ್ತಿತ್ವ ಮಾದಯ್ಯನವರದಾಗಿತ್ತು ಎಂದು ಗಜೇಂದ್ರಗಡ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಶರಣ ಮಂಜುನಾಥ ಹೂಗಾರ ಹೇಳಿದರು.

ಬಸವದಳದ 1613ನೇ ಶರಣ ಸಂಗಮ, ಶರಣ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಗೈಯುತ್ತಾ ಅವರು ಮಾತನಾಡಿದರು.

ಕಲ್ಯಾಣ ಕ್ರಾಂತಿಯ ಸಂದರ್ಭ, ಅನೇಕ ಶರಣರ ವಚನಗಳನ್ನು ಸುಡಲಾಯಿತು. ಅನೇಕ ಶರಣರ ಕಗ್ಗೊಲೆಗಳು ನಡೆದು ಹೋದವು ಹಾಗಾದ ದುರಂತದಲ್ಲಿ ಹೂಗಾರ ಮಾದಯ್ಯನವರ ವಚನಗಳೂ ನಾಶವಾಗಿರಬಹುದು, ಪರಿಣಾಮ ಅವರ ವಚನಗಳು ಅಲಭ್ಯವಾಗಿವೆ ಎಂದರು.

ಜಾನಪದ ಹಾಗೂ ತ್ರಿಪದಿಗಳಲ್ಲಿ, ಅನೇಕ ಶರಣರ ವಚನಗಳಲ್ಲಿ ಈ ಕಾಯಕಜೀವಿ ಮಾದಯ್ಯ ಶರಣರ ಬಗ್ಗೆ ಮಾಹಿತಿ ಸಿಗುತ್ತದೆ. ಕಲ್ಯಾಣದ ಬಸವಣ್ಣನವರ ಕೀರ್ತಿಯನ್ನು ಕೇಳಿ ಸಂಸಾರ ಮಾದಯ್ಯನವರು ಕುಟುಂಬಸಮೇತ ಕಲ್ಯಾಣಕ್ಕೆ ಹೊರಡುತ್ತಾರೆ. ಕಲ್ಯಾಣ ತಲುಪಿದಾಗ ಅಲ್ಲಿ ಹಡಪದ ಅಪ್ಪಣ್ಣನವರನ್ನು ಭೇಟಿಯಾಗುವರು. ಆಗ ಅಪ್ಪಣ್ಣನವರು ಬಸವಣ್ಣನವರ ಭೇಟಿ ಮಾಡಿಸುತ್ತಾರೆ. ಈ ರೀತಿಯಾಗಿ ಅನುಭವ ಮಂಟಪಕ್ಕೆ ಹೂಗಾರ ಮಾದಯ್ಯನವರನ್ನು ಬಸವಾದಿ ಶರಣರು ಹಾರ್ದಿಕವಾಗಿ ಸ್ವಾಗತಿಸುತ್ತಾರೆ.

ಮಾದಯ್ಯನವರು ಕಲ್ಯಾಣದಲ್ಲಿ ತಮ್ಮ ಹೂಗಾರಿಕೆ ಕಾಯಕ ಮಾಡುತ್ತಾರೆ, ಮುಂದೆ ಮಾದಯ್ಯನವರು 770 ಅಮರಗಣಂಗಳಲ್ಲಿ ಒಬ್ಬರಾಗುತ್ತಾರೆ.

ಅನೇಕ ಜಾನಪದ ಹಾಗೂ ತ್ರಿಪದಿಗಳಲ್ಲಿ ಇವರ ಬಗ್ಗೆ ಚೆಂದನೆಯ ವರ್ಣನೆಗಳು ಬಂದಿವೆ. ” ನೆನೆದಂಡೆ ಒಕ್ಕಲಿಗ ಹೆಣೆದು ಹಂತಿಗೆ ಕಟ್ಟಿ, ತೆನೆರಾಶಿ ಹಾಡು ಶಿವಶರಣ, ಮಾದಯ್ಯ ಕಣಕೆತ್ತಿರುವ ಬನ್ಯಾರಿ ’’ ಹಾಗೂ ” ಕಲ್ಯಾಣ ಹಾಡುತಲಿ ಎಲ್ಲ ಶರಣರ ವಚನ, ಸೊಲ್ಲಡಗಿ ನಾಲ್ಕು ವೇದಗಳು, ಹೊಸಮತಕೆ ಹುಲ್ಲಾಗಿ ಬಿದ್ದು ಕೈಮುಗಿದು ’’ ಇಂತಹ ಅನೇಕ ಜಾನಪದ ಗೀತೆಗಳನ್ನು ಉದಾಹರಿಸಿದರು. ಹಾಗೇ ಮಾದಯ್ಯನವರ ವಚನ ಸಾಹಿತ್ಯದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದು ಹೂಗಾರ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಎಂ.ಬಿ. ಲಿಂಗದಾಳ ಮಾತಾಡಿದರು.

ವಚನ ಪ್ರಾರ್ಥನೆ ಶರಣೆ ಮಂಜುಳಾ ಹಾಸಿಲಕರ ಹಾಗೂ ಸಂಗಡಿಗರಿಂದ ನಡೆಯಿತು.
ಸ್ವಾಗತ ಹಾಗೂ ಅತಿಥಿಗಳ ಪರಿಚಯವನ್ನು ಪ್ರಕಾಶ ಅಸುಂಡಿ, ನಿರೂಪಣೆಯನ್ನು ರಾಮಣ್ಣ ಕಳ್ಳಿಮನಿಯವರು ಮಾಡಿದರು. ಶರಣು ಸಮರ್ಪಣೆಯನ್ನು ಶರಣ ಎಸ್.ಎ. ಮುಗದ ಅವರು ನೆರವೇರಿಸಿದರು.

ವೇದಿಕೆ ಮೇಲೆ ಗದಗ ಜಿಲ್ಲಾ ಹೂಗಾರ ಸಮಾಜ ಸೇವಾ ಸಂಘದ ಪದಾಧಿಕಾರಿಗಳಾದ ಬಸವರಾಜ ಹೂಗಾರ, ವೀರಣ್ಣ ಹೂಗಾರ, ಶಶಿಧರ ಹೂಗಾರ, ಉಮೇಶ ಹೂಗಾರ, ಗಂಗಮ್ಮ ಹೂಗಾರ ಇದ್ದರು. ಬಸವದಳ ಪದಾಧಿಕಾರಿಗಳು, ಸದಸ್ಯರು, ಹಾಗೂ ಹೂಗಾರ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಸಾದ ದಾಸೋಹವನ್ನು ಶರಣ ಎಂ. ಬಿ. ಹೂಗಾರ ವಹಿಸಿಕೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *