ಶರಣ ಮೇದಾರ ಕೇತಯ್ಯ, ಹರ್ಡೇಕರ್ ಮಂಜಪ್ಪ, ಸಿದ್ಧೇಶ್ವರ ಶ್ರೀಗಳ ಸ್ಮರಣೆ

ರಾಯಚೂರು:

ನಗರದ ಬಸವ ಕೇಂದ್ರದಲ್ಲಿ ಬಸವಾದಿ ಶರಣ ಮೇದಾರ ಕೇತಯ್ಯನವರ, ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮರಣೆ ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮುಕ್ತಾ ನರಕಲದಿನ್ನಿ ಅವರು ಮಾತನಾಡಿ, ಮೇದಾರ ಕೇತಯ್ಯನವರು 12ನೇ ಶತಮಾನದ ಶ್ರೇಷ್ಠ  ಶರಣರು. ಕಾಡಿಗೆ ಹೋಗಿ ಬಿದಿರುಗಳನ್ನು ಕಡಿದು ತಂದು, ಅವುಗಳಿಂದ ಬುಟ್ಟಿ  ಹೆಣೆಯುವುದು ಅವರ ಕಾಯಕವಾಗಿತ್ತು.

ಈ ಕಾಯಕದಿಂದ ಬಂದ ಹಣದಲ್ಲಿ ಜಂಗಮ ದಾಸೋಹ ನಡೆಸುತ್ತಿದ್ದರು. ಸತ್ಯವತಿ ಸಾತವ್ವೆ ಪತಿಗೆ ತಕ್ಕ ಸತಿಯಾಗಿದ್ದರು. ಎನ್ನ ಚಿತ್ತಕ್ಕೆ ಆಚಾರ ಲಿಂಗವಾದಾತ ಬಸವಣ್ಣ ಎಂದು ಅವರನ್ನು ಕೊಂಡಾಡಿದ್ದಾರೆ.

ಗವರೇಶ್ವರ ಅಂಕಿತದಿಂದ ವಚನಗಳನ್ನು ರಚಿಸಿದ್ದಾರೆ. ಸತ್ಯಶುದ್ಧ ಕಾಯಕ ಮಾಡುವುದರೊಂದಿಗೆ ಲಿಂಗಾಂಗ ಸಾಮರಸ್ಯವನ್ನು ಸಾಧಿಸಿದ್ದಾರೆಂದರು.

ಮಹಾದೇವಪ್ಪ ಏಗನೂರ ಮಾತನಾಡಿ, ಹರ್ಡೇಕರ್ ಮಂಜಪ್ಪನವರು ದಾಸಿಯ ಪುತ್ರನಾಗಿದ್ದರು. ಸಮಾಜದ ಕೀಳರಿಮೆಯಿಂದ ಬೇಸತ್ತು ಆರ್ಯ ಸಮಾಜದತ್ತ ಆಕರ್ಷಿತರಾಗಿದ್ದರು. ಶಿಕ್ಷಕರಾಗಿದ್ದ ಇವರಿಗೆ ಆ ಶಾಲೆಯ ಮುಖ್ಯ ಗುರುಗಳಾದ ಸಂಗನಬಸಯ್ಯನವರು  ಒಂದು ವಚನದ ತಾಡೊಲೆಯನ್ನು ತೋರಿಸಿದರು. ಅದರಲ್ಲಿ

” ದಾಸಿಯ ಪುತ್ರನಾಗಲಿ, ವೇಶ್ಯೆ ಪುತ್ರನಾಗಲಿ

ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ ಶಿವನೆಂದು ವಂದಿಸಿ ….. “

ವಚನವನ್ನು ಓದಿದ ಅವರು ಆರ್ಯ ಸಮಾಜದಿಂದ ಬಸವ ಸಮಾಜಕ್ಕೆ ಬಂದಿದ್ದು ಇತಿಹಾಸ. ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ, ಪತ್ರಕರ್ತರಾದವರು “ಧನುರ್ದಾರಿ ” ಪತ್ರಿಕೆಯನ್ನು ಪ್ರಾರಂಭಿಸಿ, ಆ ಮೂಲಕ ಸ್ವಾತಂತ್ರ ಹೋರಾಟಕ್ಕಾಗಿ ಯುವಕರನ್ನು ಸೆಳೆಯಲು ಅನೇಕ ಲೇಖನಗಳನ್ನು ಪ್ರಕಟಿಸುತ್ತಿದ್ದರು.

1913ರಲ್ಲಿ ದಾವಣಗೆರೆಯಲ್ಲಿ ಬಸವ ಜಯಂತಿಯನ್ನು ಪ್ರಥಮ ಬಾರಿಗೆ ಆಚರಣೆಯಲ್ಲಿ ತಂದರು. ಹಾಗೂ 1935ರಲ್ಲಿ ಧಾರವಾಡದ ಮುರುಘಾ ಮಠದಲ್ಲಿ ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರ ಜಯಂತಿಯನ್ನು ಪ್ರಥಮ ಬಾರಿಗೆ ಆಚರಣೆಗೆ ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಬಂಥನಾಳ ಸಂಗನಬಸವ ಶಿವಯೋಗಿಶ್ವರರ  ಕೋರಿಕೆ ಮೇರೆಗೆ 1925 ರಲ್ಲಿ ಬಂಥನಾಳದ ಶ್ರೀಮಠದಲ್ಲಿ ಒಂದು ತಿಂಗಳ ಪರ್ಯಂತ ಬಸವ ಪುರಾಣವನ್ನು ಹೇಳಿದ್ದರು. ಇದೇ ಸಂದರ್ಭದಲ್ಲಿ ಸುಮಾರು ಏಳು ತಾಲೂಕುಗಳಲ್ಲಿ ಸಂಚರಿಸಿ ಜನರಲ್ಲಿರುವ ದುಶ್ಚಟಗಳನ್ನು ಬಿಡಿಸಿ ಸನ್ಮಾರ್ಗಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆಂದರು.

ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಬಗ್ಗೆ ಬಸವಪ್ರಭು ಇಂಜಿನಿಯರ್ ಮಾತನಾಡಿ, ಸಾಮಾಜಿಕ ಒಳಿತಿಗಾಗಿ, ಯುವಜನತೆಗೆ ನೈತಿಕ, ಅಧ್ಯಾತ್ಮಿಕ, ವೈಜ್ಞಾನಿಕ ಮನೋಭಾವನೆಯನ್ನು ತುಂಬಿ ಉತ್ತಮ ನಾಗರಿಕರನ್ನಾಗಿ ಮಾಡುವ ಗುರಿಯನ್ನಿಟ್ಟುಕೊಂಡು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿಯೂ ಕೂಡಾ ಪ್ರವಚನ ಮಾಡಿ ಜನಮನ್ನಣೆ ಗಳಿಸಿದರು. ತಮಗೆ ಒದಗಿಬಂದ ಕಾಣಿಕೆ ಹಾಗೂ ಪ್ರಶಸ್ತಿಗಳನ್ನು ನಯವಾಗಿ ತಿರಸ್ಕರಿಸಿದರು. 12ನೇ ಶತಮಾನದ ಅಲ್ಲಮ್ಮನಂತೆ 21ನೇ ಶತಮಾನದ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು ಎಂದು ಮಾತನಾಡಿದರು.

ರಾಚನಗೌಡ ಕೋಳೂರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಎ. ವೀರಭದ್ರಪ್ಪ, ಮಹಾಂತಗೌಡ ಸಿಂಧನೂರ, ಸರೋಜಾ ಮಾಲಿಪಾಟೀಲ, ಮಲ್ಲಿಕಾರ್ಜುನ ಗುಡಿಮನಿ, ಡಾ. ಪ್ರಿಯಾಂಕಾ ಗದ್ವಾಲ,ಪಿ. ಸೋಮಶೇಖರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಲಿಂಗೈಕ್ಯರಾದ ಬಸವರಾಜ ಯರಮರಸ್ ಅವರ ಗೌರವಾರ್ಥ ಮೌನಚರಣೆ ಮಾಡಲಾಯಿತು.

ಎಸ್. ಶಂಕರಗೌಡರು ಸ್ವಾಗತಿಸಿದರು. ಸಂಗೀತಗಾರರಾದ ರತ್ನಾಕರ ವಚನ ಗಾಯನ ಮಾಡಿದರು. ಪೂರ್ಣಿಮಾ ಪಾಟೀಲ ಸಾಮೂಹಿಕ ಬಸವ ಪ್ರಾರ್ಥನೆಯನ್ನು ನಡೆಸಿ ಕೊಟ್ಟರು. ಹರವಿ. ನಾಗನಗೌಡರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಅಮರೇಶ ಅಮೀನಗಡ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *