ಗೊ.ರು.ಚನ್ನಬಸಪ್ಪ, ಸಂಗೀತ ಕಟ್ಟಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ
ಕೂಡಲಸಂಗಮ
ಬಸವ ಧರ್ಮ ಪೀಠದ ವತಿಯಿಂದ ಜನವರಿ ೧೨ ರಿಂದ ೧೪ರ ವರೆಗೆ ೩೯ನೇ ಶರಣ ಮೇಳ ನಡೆಯುವುದು, ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು, ಕರ್ನಾಟಕ ಮಾತ್ರವಲ್ಲದೇ ನೆರೆಯ ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದ ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ಶುಕ್ರವಾರ ಬಾಗಲಕೋಟೆ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕಳೆದ ೩೮ ವರ್ಷದಿಂದ ಯಶಸ್ವಿಯಾಗಿ ಶರಣ ಮೇಳ ನಡೆಸಿಕೊಂಡು ಬರಲಾಗಿದೆ. ಲಿಂಗಾಯತರು, ಬಸವತತ್ವ ಅನುಯಾಯಿಗಳು ವರ್ಷಕ್ಕೆ ಒಂದು ಬಾರಿಯಾದರು ಒಂದೆಡೆ ಸೇರಬೇಕು ಎಂಬ ಉದ್ಧೇಶದಿಂದ ಲಿಂಗಾಯತರ, ಬಸವತತ್ವ ಅನುಯಾಯಿಗಳ ಧರ್ಮ ಕ್ಷೇತ್ರವಾದ ಕೂಡಲಸಂಗಮದಲ್ಲಿ ಪ್ರಥಮ ಬಾರಿಗೆ ೧೯೮೮ರಲ್ಲಿ ಶರಣ ಮೇಳ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ನಿರಂತರ ನಡೆದುಕೊಂಡು ಬಂದಿದೆ.

೩೯ನೇ ಶರಣ ಮೇಳದ ಪ್ರಚಾರ ನವೆಂಬರ್ ೧ ರಿಂದ ಜನವರಿ ೮ರ ವರೆಗೆ ಕರ್ನಾಟಕ ಮಾತ್ರವಲ್ಲದೇ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯದಲ್ಲಿ ಮಾಡಿದೆ. ಶರಣ ಮೇಳದ ವೇದಿಕೆ ಸಿದ್ಧಗೊಂಡಿದ್ದು, ಬರುವ ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಜನವರಿ ೯ರ ಬೆಳ್ಳಿಗೆ ಅಖಂಡ ವಚನ ಪಠಣ ಕಾರ್ಯಕ್ರಮದೊಂದಿಗೆ ೩೯ನೇ ಶರಣ ಮೇಳದ ಕಾರ್ಯಕ್ರಮಗಳು ಆರಂಭಗೊಂಡಿವೆ.
ಮೊದಲ ದಿನವಾದ ಜನವರಿ ೧೨ರ ಬೆಳಿಗ್ಗೆ ೧೦:೩೦ಕ್ಕೆ ರಾಷ್ಟ್ರೀಯ ಬಸವ ದಳದ ೩೫ನೇ ಅಧಿವೇಶನದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸಂಗಪ್ಪ ಉದ್ಘಾಟಿಸುವರು. ವಿವಿಧ ರಾಜ್ಯ, ಜಿಲ್ಲೆಯ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು ಬಾಗವಹಿಸುವರು. ಸಾಯಂಕಾಲ ೬ ಗಂಟೆಗೆ ಮಠಾಧಿಪತಿಗಳ ಧರ್ಮ ಚಿಂತನಗೋಷ್ಠಿ ಉದ್ಘಾಟನೆಯನ್ನು ಮೈಸೂರು ಜಿಲ್ಲೆ ಗಾವಡಗೆರೆ ಗುರು-ಲಿಂಗ-ಜಂಗಮ ದೇವರಮಠದ ನಟರಾಜ ಸ್ವಾಮೀಜಿ ಮಾಡುವರು.
ಸಾನಿಧ್ಯವನ್ನು ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಗುಳೆದ್ದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಮಹಾಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅಪ್ಪಣ್ಣ ಭಾರತಿ ಸ್ವಾಮೀಜಿ, ಚಿತ್ರದುರ್ಗ ಮೇದಾರ ಕೇತಯ್ಯ ಪೀಠದ ಮೇದಾರ ಕೇತಯ್ಯ ಸ್ವಾಮೀಜಿ ಮುಂತಾದವರು ಭಾಗವಹಿಸುವರು.
ಎರಡನೇ ದಿನವಾದ ಜನವರಿ ೧೩ ರಂದು ಬೆಳಿಗ್ಗೆ ೧೦:೩೦ಕ್ಕೆ ೩೯ನೇ ಶರಣ ಮೇಳ ಉದ್ಘಾಟನೆಯನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಮಾಡುವರು. ಮಾತೆ ಮಹಾದೇವಿ ರಚಿಸಿದ ತರಂಗಿಣಿ ಕೃತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಬಿಡುಗಡೆ ಮಾಡುವರು.
ಧರ್ಮ ಧ್ವಜಾರೋಹಣವನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾಡುವರು, ಅಧಕ್ಷತೆಯನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಬಸವತತ್ವ ಚಿಂತಕ ರಂಜಾನ್ ದರ್ಗಾ, ಮಹಾಂತೇಶ ಬಿರಾದಾರ, ಜೆ.ಎಸ್. ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ, ಮಹಾದೇವ ಹೊರಟ್ಟಿ ಮುಂತಾದವರು ಭಾಗವಹಿಸುವರು.
ಸಾಯಂಕಾಲ ೬ ಗಂಟೆಗೆ ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸಮಾರಂಭದ ಸಾನಿಧ್ಯವನ್ನು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವಹಿಸುವರು. ಗುರುಬಸವ ಪೂಜೆಯನ್ನು ಬಸವನ ಬಾಗೇವಾಡಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಮಾಡುವರು. ಧರ್ಮಧ್ವಜಾರೋಹಣವನ್ನು ಹಂದಿಗುಂದ ವಿರಕ್ತಮಠದ ಶಿವಾನಂದ ಮಹಾಸ್ವಾಮೀಜಿ ಮಾಡುವರು. ಬಸವ ಧರ್ಮ ಪೀಠದ ಜಂಗಮಮೂರ್ತಿಗಳು, ಗಣನಾಯಕ-ನಾಯಕಿಯರು ಮುಂತಾದವರು ಭಾಗವಹಿಸುವರು.
ಮೂರನೇ ದಿನವಾದ ಜನವರಿ ೧೪ ರಂದು ಬೆಳಗ್ಗೆ ೧೦ ಗಂಟೆಗೆ ಲಿಂಗಾಯತ ಧರ್ಮ ಸಂಸ್ಥಾಪನ ದಿನ, ಬಸವ ಕ್ರಾಂತಿ ದಿನಾಚರಣೆ ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಆರ್. ಪಾಟೀಲ ಮಾಡುವರು. ಮುಖ್ಯ ಅತಿಥಿಯಾಗಿ ವಿಜಯಪುರ ಯುವ ಮುಖಂಡ ಬಸನಗೌಡ ಎಂ. ಪಾಟೀಲ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮುಂತಾದವರು ಭಾಗವಹಿಸುವರು, ಸಾಯಂಕಾಲ ಬಸವಣ್ಣನ ಐಕ್ಯಮಂಟಪದಿಂದ ಬಸವಧರ್ಮ ಪೀಠದವರೆಗೆ ಸಾಮೂಹಿಕ ಪಥ ಸಂಚಲನ, ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯುವುದು.
ಪ್ರಶಸ್ತಿ ಪ್ರದಾನ
ಜನವರಿ ೧೩ರ ಬೆಳಿಗ್ಗೆ ಮಾತೆ ಮಹಾದೇವಿ ಸ್ಮರಣಾರ್ಥ ನೀಡುವ ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿ-೨೦೨೬ರನ್ನು
ಬೆಂಗಳೂರಿನ ಗಾಯಕಿ ಸಂಗೀತಾ ಕಟ್ಟಿ ಅವರಿಗೆ, ೨೦೨೬ರ ರಾಜ್ಯಪ್ರಶಸ್ತಿಗಳಾದ ಶರಣರ ಕಾಯಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಶರಣ ಜ್ಞಾನ ರತ್ನ ಪ್ರಶಸ್ತಿಯನ್ನು ಬಾಗಲಕೋಟೆ ಟಿವಿ-೯ ವರದಿಗಾರ ರವಿ ಮೂಕಿ ಅವರಿಗೆ ಪ್ರಧಾನ ಮಾಡಲಾಗುವುದು.

ಜನವರಿ ೧೪ರ ಬೆಳಿಗ್ಗೆ ಲಿಂಗಾನಂದ ಸ್ವಾಮೀಜಿ ಸ್ಮರಣಾರ್ಥ ನೀಡುವ ಸ್ವಾಮಿ ಲಿಂಗಾನಂದ ಶ್ರೀ ರಾಷ್ಟ್ರೀಯ ಪ್ರಶಸ್ತಿ ೨೦೨೬ನ್ನು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅವರಿಗೆ, ಒಕ್ಕಲಿಗ ಮುದ್ದಣ್ಣನ ಸ್ಮರಣಾರ್ಥ ಪ್ರಮುಖ ಪ್ರಜ್ಞೆ ರಾಷ್ಟ್ರೀಯ ಪ್ರಶಸ್ತಿ-೨೦೨೬ನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ, ಕಾಯಕಕಲಿ ರಾಜ್ಯ ಪ್ರಶಸ್ತಿ-೨೦೨೬ರನ್ನು ಬೆಂಗಳೂರಿನ ಜನಸ್ನೇಹಿ ಟ್ರಸ್ಟನ ಸಂಸ್ಥಾಪಕ ಯೋಗೇಶ ಅವರಿಗೆ ಪ್ರಧಾನ ಮಾಡಲಾಗುವುದು.
ಜನವರಿ ೧೨ರ ಬೆಳಿಗ್ಗೆ ಮೈಸೂರಿನ ನಾಗಮ್ಮ ಷಡಕ್ಷರಿ ಅವರಿಗೆ ಶರಣ ದಾಸೋಹರತ್ನ, ವಿಜಯಪುರ ರಾಷ್ಟ್ರೀಯ ಬಸವ ದಳದ ಬೇಕರಿ ಶಿವಣ್ಣ ಅವರಿಗೆ ಶರಣ ಸೇವಾರತ್ನ, ಕೂಡಲಸಂಗಮದ ಗಂಗಣ್ಣ ಬಾಗೇವಾಡಿ ಅವರಿಗೆ ಶರಣ ಸೇವಾರತ್ನ, ಹುನಗುಂದದ ರಾಚಪ್ಪ ರಾಜಮನಿ ಅವರಿಗೆ ಶರಣ ಕೃಷಿರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ರಾತ್ರಿ ದಾವಣಗೆರೆ ಬಸವ ತತ್ವ ಪ್ರಚಾರಕ ಎ.ಎಚ್. ಹುಚ್ಚಪ್ಪ ಮಾಸ್ಟರ್ ಅವರಿಗೆ ಬಸವರತ್ನ, ಚಾಮರಾಜ ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆಯ ನಾಗಮಲ್ಲಪ್ಪ ಅವರಿಗೆ ಶರಣರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಪುಸ್ತಕ ಬಿಡುಗಡೆ
ಜನವರಿ ೧೨ ಬೆಳಿಗ್ಗೆ ಶ್ರೀಶೈಲ ಸಿದ್ದಪ್ಪ ಆಳೂರು ಅವರ ರೈತ ಸಾಮ್ರಾಜ್ಯ ಕಟ್ಟೋಣ ಬನ್ನಿ, ರಾತ್ರಿ ಹೆಚ್.ಜಿ. ಹಂಪಣ್ಣ ಅವರ ಶ್ರೀ ಚೆನ್ನಮಲ್ಲೇಶ್ವರ, ಜನವರಿ ೧೩ರ ರಾತ್ರಿ ಚಂದ್ರಶೇಖರ ಇಟಗಿ ಅವರ ತ್ರಿದಳ, ಶ್ರೀಧರ ಗೌಡರ ಅವರ ಇದೇ ಅಂತರಂಗ ಶುದ್ದಿ-ಇದೇ ಬಹಿರಂಗ ಸುದ್ದಿ ಗ್ರಂಥಗಳ ಬಿಡುಗಡೆಯಾಗುವವು.
ಜನವರಿ ೧೨ ರಿಂದ ೧೪ರ ವರೆಗೆ ಬೆಳಿಗ್ಗೆ ಯೋಗಾಸನ ನಡೆಯುವುದು, ಕಾರ್ಯಕ್ರಮಗಳಲ್ಲಿ ವಚನ ನೃತ್ಯ, ಗಾಯನ ನಡೆಯುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೂಡಲಸಂಗಮದ ಮಹದೇಶ್ವರ ಸ್ವಾಮೀಜಿ, ಬೆಂಗಳೂರು ಕುಂಬಳಗೋಡು ವಿಶ್ವಕಲ್ಯಾಣ ಮಿಷನ್ ದ ಬಸವಯೋಗಿ ಸ್ವಾಮೀಜಿ, ಹೈದರಾಬಾದ್ ಬಸವ ಮಂಟಪದ ಅನಿಮೀಷಾನಂದ ಸ್ವಾಮೀಜಿ, ಚಿತ್ರದುರ್ಗ ಬಸವ ಮಂಟಪದ ದಾನೇಶ್ವರಿ ಮಾತಾಜಿ, ಬೆಂಗಳೂರು ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ ಇದ್ದರು.
