ಗದಗ
ಬಸವಾದಿ ಪ್ರಮಥರ ಈ ನೆಲದಲ್ಲಿ ಶರಣರ ತತ್ವಗಳನ್ನು ಪಸರಿಸಲು ಮಠ-ಮಾನ್ಯರ ಜೊತೆಗೆ ಬಸವಪರ ಸಂಘಟನೆಗಳು ನಿರಂತರ ಕಾರ್ಯಶೀಲವಾಗಿವೆ. ಬಸವಾದಿ ಶರಣರು ಕಟ್ಟಿಕೊಟ್ಟ ಅನುಭವ ಮಂಟಪದ ಭವ್ಯ ಸಂಸ್ಕೃತಿಯನ್ನು ಮನೆ ಮನೆಗಳಲ್ಲಿ ಅರುಹುವುದೇ ‘ವಚನ ಶ್ರಾವಣ’ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ, ಎಂದು ಶರಣತತ್ವ ಚಿಂತಕ ಅಶೋಕ ಬರಗುಂಡಿಯವರು ತಿಳಿಸಿದರು.
ಶರಣ ಆಂಜನೇಯ ಬಂಗಾರಪ್ಪ ಕಟಗಿ ಅವರ ಮನೆಯಲ್ಲಿ ನಡೆದ ‘ವಚನ ಶ್ರಾವಣ-೨೦೨೫’ ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವ ದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

“ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ, ನಿರ್ಮಳ ಬಸವಾ, ಶಿವಜ್ಞಾನಿ ಬಸವಾ, ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪಥವು ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ.”
ಈ ವಚನ ನಿರ್ವಚನಗೈಯುತ್ತಾ, ಇಲ್ಲಿ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಬಸವಣ್ಣನವರ ಸ್ತುತಿ ಮಾಡುತ್ತಿದ್ದಾರೆಂದು ಅನ್ನಿಸುತ್ತದೆ. ಆದರೆ ಇದರಲ್ಲಿ ದೊಡ್ಡ ಒಳಾರ್ಥ ಅಡಗಿದೆ. ಕೊನೆಯ ಸಾಲನ್ನು ಸೂಕ್ಷ್ಮವಾಗಿ ನೋಡಿದಾಗ ನಿಮಗೂ, ಎನಗೂ ಬಸವಣ್ಣನ ಧರ್ಮವಯ್ಯಾ, ಈ ಸಾಲಿನಲ್ಲೇ ಈ ವಚನದ ಸಂಪೂರ್ಣ ಅರ್ಥ ಅಡಗಿದೆ. ಇಲ್ಲಿ ಈ ವಚನ ವ್ಯಕ್ತಿಗತವಾಗದೆ ಸಮಷ್ಟಿಗತವಾಗಿದೆ.
ಮನುಷ್ಯರಲ್ಲೇ ಮೇಳು-ಕೀಳು ಸೃಷ್ಠಿಸಿ, ಹಿಂದಿನ ಜನ್ಮ ಮುಂದಿನ ಜನ್ಮವೆಂಬ ಭ್ರಾಂತಿ ತುಂಬಿ, ಈ ಜನ್ಮ ಪ್ರಾರಬ್ಧ ಕರ್ಮವೆಂದು ಹೇಳುವ ಕರ್ಮಠರಿಗೆ ಸವಾಲು ಹಾಕುವಂತೆ ಬಸವಣ್ಣನವರು ಒಂದು ಧರ್ಮ ಜೀವಪರ ಎನ್ನಿಸಿಕೊಳ್ಳಬೇಕಾದರೆ, ಅದು ಕರುಣೆ, ದಯೆಗಳನ್ನು ಹೊಂದಿರಬೇಕು. ಮಾನವೀಯ ನೆಲೆಗಟ್ಟಿನಲ್ಲಿರಬೇಕು. ಅದು ಕಾಲ, ಕರ್ಮಗಳನ್ನ ಹರಣ ಮಾಡುವ ಗುಣ ಹೊಂದಿರಬೇಕು. ಅದು ನಿರ್ಮಳವಾಗಿರಬೇಕು. ಶಿವಜ್ಞಾನ ಸಂಪನ್ನವಾಗಿರಬೇಕೆನ್ನುವರು. ಇವೆಲ್ಲವನ್ನು ತನ್ನಲ್ಲಿ ಮೇಳೈಸಿಕೊಂಡಿದ್ದ ಅವುಗಳನ್ನು ತಾನು ಬದುಕಿ ಜೊತೆಗೆ ಜನಮಾನಸದಲ್ಲೂ ಬಿತ್ತಿ ಅವರು ಅದೇ ಪಥದಲ್ಲಿ ನಡೆವಂತೆ, ಮಾಡಿದನೆಂದು ಬಸವಣ್ಣನವರನ್ನು ಸಿದ್ಧರಾಮರು ಈ ವಚನದಲ್ಲಿ ತುಂಬು ಹೃದಯದಿಂದ ನೆನೆಯುತ್ತಾರೆಂದರು.

ನಂತರ ಮಾತನಾಡಿದ ಬೇಲೂರು ಬಸವೇಶ್ವರ ಮಠದ ಪೂಜ್ಯ ಡಾ. ಮಹಾಂತ ಬಸವಲಿಂಗ ಸ್ವಾಮೀಜಿ, ಈ ಜಗತ್ತಿನಲ್ಲಿ ಅನೇಕ ಧರ್ಮಗಳಿವೆ. ಅವುಗಳು ತಮ್ಮದೇ ಸಿದ್ಧಾಂತ ಹೊಂದಿವೆ. ಆದರೆ ಅವೆಲ್ಲಕ್ಕಿಂತಲೂ ಭಿನ್ನವಾದ ಧರ್ಮ ಲಿಂಗಾಯತವಾಗಿದೆ.
ಬಸವಾದಿ ಶರಣರು ನುಡಿದು ಅದೇ ನಡೆದು ತೋರಿಸಿದರು. ಹಲವು ಜಾತಿ, ಧರ್ಮಗಳಲ್ಲಿ ಪ್ರಾಣಿ ಬಲಿಯಂತಹ ಪದ್ದತಿ ಈಗಲೂ ಇದೆ. ಪ್ರಾಣಿಗಳನ್ನು ಕೊಂದು ತಿಂದರೆ ದೇವರು ಸಂತೃಪ್ತನಾಗುವನೆಂಬ ಭಾವ ತುಂಬಿದೆ. ಅಲ್ಲಿ ಕರುಣೆ ಇಲ್ಲವೇ ಇಲ್ಲ. ಆದರೆ ಬಸವಣ್ಣನವರ ಧರ್ಮ ಇದಕ್ಕೆ ವ್ಯತಿರಿಕ್ತವಾಗಿದೆ. ಅಲ್ಲಿ ಕರುಣೆ ತುಂಬಿದೆ. ದಯವೇ ಧರ್ಮವಾಗಿದೆ. ಕಾಲಹರವೆಂದರೆ ಹುಟ್ಟು ಸಾವನ್ನು ಗೆದಿಯುವುದು, ಕರ್ಮಹರವೆಂದರೆ ಹಿಂದಿನ ಜನ್ಮದ ಕರ್ಮಗಳು ಬಸವಣ್ಣನ ಧರ್ಮದಲ್ಲಿ ನಾಶವಾಗುವವು.

ಯಾವುದೇ ಕಳಂಕವಿಲ್ಲದ ನಿರ್ಮಳ ಜೀವನವನ್ನು ಬಸವಣ್ಣನವರು ಬದುಕಿದರು. ಅವರು ಶಿವಜ್ಞಾನಿಯಾಗಿದ್ದರು. ಅವರ ನಡೆ, ನುಡಿಯೇ ಭಕ್ತಿಪಥವಾಗಿದೆ ಎಂದು ಈ ವಚನದಲ್ಲಿ ಸಿದ್ಧರಾಮರು ಸ್ಮರಿಸಿಕೊಳ್ಳುವರು. ಈ ಕಾರಣಕ್ಕಾಗಿ ಎಲ್ಲ ಶರಣರು ಬಸವಣ್ಣನವರಿಗೆ ಶರಣಾಗಿ ಅವರನ್ನು ಗುರುವೆಂದು ಒಪ್ಪಿಕೊಂಡರೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವದಳದ ಅಧ್ಯಕ್ಷರಾದ ವಿ.ಕೆ. ಕರೀಗೌಡ್ರ ಅವರು ಪ್ರಾಸಂಗಿಕವಾಗಿ ಮಾತನಾಡಿದರು.
ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಕಟಗಿ ಮನೆತನದ ಹಿರಿಯರಾದ ಬಂಗಾರಪ್ಪನವರು ನೆರವೇರಿಸಿದರು. ಧ್ವಜಗೀತೆಯನ್ನು ಬಸವದಳದ ಶರಣೆಯರು ಹಾಡಿದರು.
ಆಂಜನೇಯ ಕಟಗಿ ಸ್ವಾಗತಿಸಿದರು. ಶರಣ ಎಸ್. ಎ. ಮುಗದರವರು ಸಂವಿಧಾನ ಪೀಠಿಕೆಯನ್ನು ಓದಿಸಿದರು. ಶರಣೆ ಅಶ್ವಿನಿ ಕಟಗಿಯವರಿಂದ ವಚನ ಪಠಣ ಜರುಗಿತು. ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಕೆ.ಎಸ್. ಚಟ್ಟಿಯವರು ವಚನ ಶ್ರಾವಣದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ವಚನ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
‘ವಚನ ಶ್ರಾವಣ’ ಈ ಹೊತ್ತಿಗೆಯನ್ನು ಬಿ.ವಿ. ಕಾಮಣ್ಣವರ ಸ್ಮರಣಾರ್ಥ ಶರಣೆ ಮಂಗಳಾ ಕಾಮಣ್ಣವರ ಹಾಗೂ ಶರಣ ಚೆನ್ನಬಸವಣ್ಣ ಕಾಮಣ್ಣವರ ದಾಸೋಹ ಮಾಡಿದರು. ವಚನ ಚಿಂತಕರಿಗೆ ‘ವಚನ ಹೃದಯ’ ಈ ಗ್ರಂಥವನ್ನು ಲಿಂ. ಶಂಕ್ರಣ್ಣ ಅಂಗಡಿ ಇವರ ಸ್ಮರಣಾರ್ಥ ಇವರ ಧರ್ಮಪತ್ನಿ ಲಕ್ಷ್ಮೀ ಅಂಗಡಿ, ಶರಣು ಅಂಗಡಿ ದಾಸೋಹ ಮಾಡಿದರು. ಜೊತೆಗೆ `ಬಸವಣ್ಣ ಯಾಕೆ ಬೇಕು’ ಈ ಗ್ರಂಥವನ್ನು ಶೇಖಣ್ಣ ಕವಳಿಕಾಯಿ, ವಿಭೂತಿ ದಾಸೋಹವನ್ನು ಮಂಜುಳಾ ಹಾಸಿಲಕರ ಮಾಡಿದರು.
ಶರಣು ಸಮರ್ಪಣೆ ಗೌರಕ್ಕ ಬಡಿಗಣ್ಣವರ ಮಾಡಿದರು. ನಿರೂಪಣೆ ಪ್ರಕಾಶ ಅಸುಂಡಿಯವರಿಂದ ನೆರವೇರಿತು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಶರಣ (ಶ್ರಾವಣ) ಮಾಸ ಪರ್ಯಂತ ನಡೆಯುವ ಈ ಕಾರ್ಯಕ್ರಮದಲ್ಲಿ ಶರಣ ಬಂಧುಗಳು ಭಾಗವಹಿಸಲು ವಿನಂತಿಸಲಾಯಿತು.