ಜಮಖಂಡಿ:
ಬಸವಾದಿ ಶರಣರ ತತ್ವಗಳನ್ನು ಬೋಧಿಸುವ ಮೂಲಕ ಶರಣ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತಿ ಈ ನಾಡಿನಲ್ಲಿ ಸಕಾರಾತ್ಮಕ ಪರಿವರ್ತನೆ ತಂದಿದ್ದ ಲಿಂಗೈಕ್ಯ ಡಾ. ಈಶ್ವರ ಮಂಟೂರ ಶರಣರು ಮಾನಸಿಕ ತಜ್ಞರಾಗಿದ್ದರು ಎಂದು ಇಳಕಲ್ಲ ವಿಜಯಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹುನ್ನೂರ- ಮಧುರಖಂಡಿ ಗ್ರಾಮಗಳ ಬಸವಜ್ಞಾನ ಗುರುಕುಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯದ ಸಾನಿಧ್ಯದಲ್ಲಿ ಮಂಗಳವಾರ ಬಸವಜ್ಞಾನ ಗುರುಕುಲದಲ್ಲಿ ನಡೆದ ಶರಣಸಂಸ್ಕೃತಿ ಉತ್ಸವ, ಜಾನಪದ ಕಲಾಮಹೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಲಿಂ. ಈಶ್ವರ ಮಂಟೂರ ಶರಣರ 4ನೇ ಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಜಮಖಂಡಿಯ ಓಲೆಮಠದ ಆನಂದ ದೇವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಷಟ್‌ಸ್ಥಲ ಧ್ವಜ ಬಸವಣ್ಣ ಮತ್ತು ಅಲ್ಲಮಪ್ರಭುಗಳು ಹಾರಿಸಿದ ಧ್ವಜವಾಗಿದೆ. ಷಟ್‌ಸ್ಥಲ ಲಿಂಗಾಯತ ಧರ್ಮದ ಲಾಂಛನ ಧ್ವಜವಾಗಿದೆ ಎಂದರು.
ಜಮಖಂಡಿಯ ಬಸವ ಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ ಬಸವ ಪುತ್ಥಳಿಗೆ ಪುಷ್ಪವೃಷ್ಟಿ ನೆರವೇರಿಸಿ ಮಾತನಾಡಿ, ಬಸವಣ್ಣನವರು ಪಂಚಾಚಾರ, ಷಟಸ್ಥಲ, ಅಷ್ಟಾವರಣಗಳ ಪ್ರತೀಕವಾಗಿದ್ದರು. ಅರಿವು, ಆಚಾರ, ಅನುಭಾವಗಳ ಮೊತ್ತವೇ ಬಸವಣ್ಣ ಎಂದು ಬಣ್ಣಿಸಿದರು.

ಪ್ರಶಸ್ತಿ ಪ್ರದಾನ
ಸಂಡೂರ ಸಂಸದ ಈ. ತುಕಾರಾಮ (ಬಸವಚೇತನ), ಸವದಿಯ ಪ್ರಗತಿಪರ ರೈತ ನಂದಕುಮಾರ ಪಾಟೀಲ (ಕೃಷಿಚೇತನ), ಹುನ್ನೂರಿನ ರಂಗಭೂಮಿ ಕಲಾವಿದ ಕೆ.ಆರ್. ಮಹಾಲಿಂಗಪ್ಪ (ಕಲಾಚೇತನ) ಹಾಗೂ ವಿಜಯಪುರದ ನಿವೃತ್ತ ಎಂಜಿನಿಯರ್ ಎಸ್.ವೈ. ಗದಗ (ಈಶಚೇತನ) ಅವರುಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಿಕ್ಕಲಕಿ ಕ್ರಾಸ್‌ನ ಭಗೀರಥ ಮಠದ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು. ಲಿಂಗಾನಂದ ಗವಿಮಠ, ಶ್ರೀಶೈಲ ಉಳ್ಳಾಗಡ್ಡಿ, ಮಗೆಪ್ಪ ಎಸ್. ದರೂರ ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ದಾವಣಗೆರೆಯ ವಿಭೂತಿ ಬಸವಾನಂದ, ಪ್ರೊ. ಬಸವರಾಜ ಕಡ್ಡಿ, ಹೊಳಲ್ಕೆರೆಯ ಉಪನ್ಯಾಸಕ ಜಿ.ವಿ. ಮಂಜುನಾಥ ಮಾತನಾಡಿದರು.
ರಾಯಚೂರಿನ ಮನೋಹರಲಾಲ ಬೋರಾ, ಜಮಖಂಡಿ ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ಹುನ್ನೂರಿನ ಬಸವಂತಪ್ಪ ಹನಗಂಡಿ, ರಾಯಚೂರಿನ ಮಲ್ಲಿಕಾರ್ಜುನ ಗುಡಿಮನಿ ಇದ್ದರು.
ಬನಹಟ್ಟಿಯ ಮಲ್ಲಿಕಾರ್ಜುನ ಧಡೂತಿ, ಅಲಬಾಳದ ಪುಂಡಲೀಕ ಕಾಂಬಳೆ ದಾಸೋಹ ಸೇವೆ ಸಲ್ಲಿಸಿದರು. ಪ್ರಾಧ್ಯಾಪಕ ಎನ್.ವಿ. ಅಸ್ಕಿ ಸ್ವಾಗತಿಸಿದರು. ಮುಖ್ಯಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು.
