ಚಿತ್ರದುರ್ಗ:
12ನೇ ಶತಮಾನದ ಪ್ರತಿಯೊಬ್ಬ ಶರಣರದು ವಿಶಿಷ್ಟ ವ್ಯಕ್ತಿತ್ವ ಮತ್ತು ಮಾನವೀಯ ಕಾಯಕ. ಅವರು ಮಾಡಿದ ಕಾಯಕಗಳನ್ನೊಮ್ಮೆ ನೆನಪಿಸಿಕೊಂಡರೆ ಮೈರೋಮಾಂಚನವಾಗುತ್ತದೆ.
ಬಸವಣ್ಣನವರ ಆದರ್ಶದ ನಡೆಯನ್ನು ಕಂಡು ಕೇಳಿ ಬಂದವರು ಅನೇಕರು. ಹೊರದೇಶ ಅಫಘಾನಿಸ್ತಾನದಿಂದ ಕಲ್ಯಾಣಕ್ಕೆ ಬಂದ ಮರುಳ ಶಂಕರದೇವರು ಮಹಾಮನೆಯಲ್ಲಿ ಲಕ್ಷಾಂತರ ಜನರ ಪ್ರಸಾದ (ಊಟ) ಮಾಡಿದ ಎಂಜಲು ಎಲೆಯನ್ನು ಬಸವಣ್ಣನವರಿಗೆ ಗೊತ್ತಾಗದ ರೀತಿಯಲ್ಲಿ ಸುಮಾರು ೧೨ ವರ್ಷಗಳ ಕಾಲ ನಿರ್ವಹಿಸುತ್ತಾ ಬರುತ್ತಾರೆ.
ಇದು ಹೇಗೋ ಬಸವಣ್ಣ ಮತ್ತು ಅಲ್ಲಮಪ್ರಭುಗಳಿಗೆ ಗೊತ್ತಾಗಿ ಈ ಕಾಯಕವನ್ನು ನೋಡಲು ಬಂದಾಗ ಮರಳುಶಂಕರ ದೇವರು ಚಡಪಡಿಸುತ್ತಾರೆ. ನಾನು ಮಾಡುವ ಗುಪ್ತ ಕಾಯಕ ಗೊತ್ತಾಗಿ ಬಿಟ್ಟಿತಲ್ಲ. ಸಾಕು ಇನ್ನು ನಾನು ಬದುಕಿರುವುದು ಬೇಡ ಬಯಲಾಗುವುದು ಒಳಿತು ಎಂದು ತೀರ್ಮಾನಿಸುತ್ತಾರೆನ್ನುವ ಐತಿಹ್ಯ ಬರುತ್ತದೆ.
ಆದರೆ ನಾವಿಂದು ಶೋಕಿಗಳಾಗಿದ್ದೇವೆ. ನಾವು ಮಾಡುವ ಒಳ್ಳೆಯ ಕಾರ್ಯ ಮಾತ್ರ ಜನರಿಗೆ ಅಥವಾ ಜಗತ್ತಿಗೆ ಗೊತ್ತಾಗಬೇಕೆಂದು ಹಂಬಲಿಸುತ್ತೇವೆ. ಕೆಟ್ಟ ಕೆಲಸ ಹೊರಗಿನ ಪ್ರಪಂಚಕ್ಕೆ ಗೊತ್ತಾಗುವುದು ಬೇಡ ಎಂದು ಗುಟ್ಟಾಗಿಟ್ಟಿರುತ್ತೇವೆ. ಮರಳುಶಂಕರ ದೇವರು ಒಳ್ಳೆಯ ಕೆಲಸವನ್ನೇ ಗುಪ್ತವಾಗಿಟ್ಟು ಅದು ರಟ್ಟಾಗುವ ಸಮಯ ಬಂದಾಗ ಸಾರ್ಥಕವಾಯ್ತು- ನನಗೆ ಬದುಕು ಬೇಡ ಎನ್ನುವ ಉದಾತ್ತ ತತ್ವ ಎಷ್ಟೊಂದು ಮಾರ್ಮಿಕವಾಗಿದೆ ಎನ್ನುವುದು. ಎಂತಹ ಮಾದರಿ ನಡೆ ಎಂದು ಶಿರಸಂಗಿ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ೧೨ನೇ ಶತಮಾನದತ್ತ ನೆರೆದವರನ್ನೊಮ್ಮೆ ಕರೆದುಕೊಂಡು ಹೋದರು.
ಶ್ರೀಗಳವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ಶಿವಶರಣರಾದ ಮರುಳ ಶಂಕರದೇವರು ಹಾಗೂ ಕಿನ್ನರಿ ಬೊಮ್ಮಯ್ಯನವರ ಜಯಂತಿ (ಶರಣೋತ್ಸವ)ಯ ಸಮ್ಮುಖ ವಹಿಸಿ ಮಾತನಾಡುತ್ತ ಆದರ್ಶ ನಡೆಯನ್ನು ಅನುಸರಿಸುವವರು ಈಗ ಇಲ್ಲವೆಂದಿಲ್ಲ. ಆದರೆ ಅನುಸರಿಸುವವರ ಸಂಖ್ಯೆ ವಿರಳ.
ಸುಜಾಲ್ ಎನ್ನುವ ವ್ಯಕ್ತಿ ಅತ್ಯಂತ ಶ್ರೀಮಂತರಾದರೂ ಅಮೃತಸರದ ಗುರುದ್ವಾರಕ್ಕೆ ಬರುವ ಯಾತ್ರಾರ್ಥಿಗಳ ಪಾದರಕ್ಷೆಗಳನ್ನು ದೇವಾಲಯದ ಹೊರಗಡೆ ನೋಡಿಕೊಳ್ಳುವ ಮತ್ತು ಅದರ ವಾರಸುದಾರರು ಬಂದಾಗ ಅವರ ಕಾಲ ಬಳಿ ತೆಗೆದುಕೊಂಡು ಹೋಗಿ ಕೊಡುವ ಕಾಯಕವನ್ನು ಇಂದಿಗೂ ಮಾಡುತ್ತಿದ್ದಾರೆ. ಇಂತಹ ವಿನಯವಂತಿಕೆ ಬೇಕು.
ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಎನ್ನುವ ಕಿಂಕರ ಭಾವದಿಂದಲೇ ಪ್ರಪಂಚದ ಅನೇಕರು ಕಲ್ಯಾಣಕ್ಕೆ ಬರುವಂತೆ ಮಾಡಿದ್ದು ಸದುವಿನಯದ ಲಕ್ಷಣ. ಇಂತಹ ಗುಪ್ತ ಭಕ್ತಿಯ ಅನೇಕ ಶರಣರು ಕಲ್ಯಾಣದಲ್ಲಿದ್ದರೆಂದು ನುಡಿದರು.

ಸಮ್ಮುಖ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಆಂಧ್ರಪ್ರದೇಶದ ಪುದೂರು ಕಡೆಯಿಂದ ಬಂದ ಕಿನ್ನರಿ ಬೊಮ್ಮಯ್ಯನವರು ಮೊದಲು ಅಕ್ಕಸಾಲಿಗ ವೃತ್ತಿಯನ್ನು ಮಾಡುತ್ತಿದ್ದರು. ಅವರೂ ಸಹ ಕಲ್ಯಾಣದ ಕೀರ್ತಿ ವಾರ್ತೆಯನ್ನು ಕೇಳಿ ಆ ವೃತ್ತಿ ಕೈಬಿಟ್ಟು ಕಲ್ಯಾಣದ ತ್ರಿಪುರಾಂತಕ ದೇವಾಲಯದಲ್ಲಿ ಕಿನ್ನರಿ ನುಡಿಸುವ ಕೆಲವನ್ನು ಮಾಡುತ್ತ, ಶರಣರಿಗೆ ಕಲೆಯ ಪ್ರದರ್ಶನ ಮಾಡಿಸುತ್ತಿದ್ದರು. ಈಗಲೂ ಬೀದರ್ ಜಿಲ್ಲೆಯ ಮಳಖೇಡ ಗ್ರಾಮದಲ್ಲಿ ಬೊಮ್ಮಯ್ಯನವರ ಹೆಸರಿನಲ್ಲಿ ಜಾತ್ರೆ ೩-೪ ದಿನಗಳು ಅರ್ಥಪೂರ್ಣವಾಗಿ ನಡೆಯುತ್ತದೆ.
ಅಂದಿನ ಕಲ್ಯಾಣ ಎಂತೆಂತಹ ಮಹನೀಯರನ್ನು ಕೊಡುಗೆಯಾಗಿ ನೀಡಿದೆ ಎನ್ನುವುದಕ್ಕೆ ಇಂತಹ ಶರಣರ ಚರಿತ್ರೆ ನಮ್ಮ ಮುಂದಿದೆ. ಅವರು ಎಂತೆಂತಹ ತ್ಯಾಗ ಮಾಡಿಹೋಗಿದ್ದಾರೆ. ಅವರು ಮಾಡಿರುವ ತೃಣದಷ್ಟು ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ.
ಮುರುಘಾಮಠ ಇಂತಹ ಶರಣರ ಚರಿತ್ರೆಯನ್ನು ಯಾವುದೇ ವಾರ ತಿಥಿ ನಕ್ಷತ್ರ ನೋಡದೆ ಆಚರಿಸುತ್ತಿದೆ. ಇಂದು ಭಾನುವಾರ ಬಿಡುವಿನ ದಿನ. ಕೆಲವರಿಗೆ ಕಷ್ಟವಾದರೂ ನಮ್ಮ ಕಿವಿಗಳಿಗೆ ಒಳ್ಳೆಯದನ್ನು ಕೇಳಿಸಬೇಕೆಂಬ ಆಶಯದಿಂದ ಅರ್ಥಪೂರ್ಣ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ನುಡಿದರು.
ಸ್ಥಳೀಯ ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರಾದ ಪ್ರತೀತ ಹಾಗು ರಾಕೇಶ್ ಅವರು ಮರುಳಶಂಕರ ದೇವರ ಮತ್ತು ಕಿನ್ನರಿ ಬೊಮ್ಮಯ್ಯನವರ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.
ಸಮಾರಂಭದ ಸಾನ್ನಿಧ್ಯವನ್ನು ಶ್ರೀಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಡಾ. ಬಸವಕುಮಾರ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ನಾಗರಾಜ ಸಂಗಂ, ಕವಿ ಗಂಗಾಧರಪ್ಪ, ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಪುಷ್ಪವಲ್ಲಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಸಮಾರಂಭದ ಆರಂಭಕ್ಕೆ ಶಿಕ್ಷಕಿ ಅನಿತಾ ವಚನ ಪ್ರಾರ್ಥನೆ ಮಾಡಿದರು. ಕಾವ್ಯ ಸ್ವಾಗತಿಸಿದರು. ನೇತ್ರಾವತಿ ಕಾರ್ಯಕ್ರಮ ನಿರ್ವಹಿಸಿದರೆ, ಮಂಗಳ ಶರಣು ಸಮರ್ಪಣೆ ಮಾಡಿದರು.
