ಶಿವಕುಮಾರ ಶ್ರೀಗಳ ಆದರ್ಶ ಅಜರಾಮರ : ಯು.ಸಿ. ಶಿವಕುಮಾರ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ :

ಕೋಟ್ಯಾಂತರ ಭಕ್ತರ ಮನೆ ಮನಗಳಲ್ಲಿ ನೆಲೆಗೊಂಡಿರುವ  ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಯವರ ಆದರ್ಶ ಅಜರಾಮರವಾಗಿದೆ ಎಂದು ಮನ್ ಮುಲ್ ಅಧ್ಯಕ್ಷ ಯು.ಸಿ. ಶಿವಕುಮಾರ (ಶಿವಪ್ಪ) ಹೇಳಿದರು.

ನಗರದ ಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ವತಿಯಿಂದ ಈಚೆಗೆ ನಡೆದ ದಾಸೋಹ ಹುಣ್ಣಿಮೆ ಕಾರ್ಯಕ್ರಮದಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಭಕ್ತರ ಮನ, ಮನೆಯಲ್ಲಿ ನೆಲೆಗೊಂಡವರು. ಸಾಮಾನ್ಯ ಬಡ ಕುಟುಂಬವೊಂದರಿಂದ ಬಂದ ಶ್ರೀಗಳು ಅಸಾಮಾನ್ಯರಾಗಿ ಜಗತ್ತಿಗೆ ಬೆಳಕಾಗಿದ್ದು ಈ ಶತಮಾನದ ಭಾಗ್ಯ. ಶಿಕ್ಷಣ, ಆರೋಗ್ಯ, ಧರ್ಮದ ಏಳಿಗೆಗೆ ಶ್ರೀಗಳು ತಮ್ಮ ಇಡೀ ಜೀವನವನ್ನು ಮುಡಿಪಾಗಿರಿಸಿದವರು.

ಜಾತಿ, ಬೇಧವಿಲ್ಲದೆ ತಮ್ಮ ಮಠದಲ್ಲಿ ಸರ್ವಧರ್ಮಿಯರಿಗೂ ಆಶ್ರಯ ನೀಡಿದ ಸಿದ್ಧಗಂಗಾ ಮಠದ ಕೀರ್ತಿ ಪತಾಕೆ ಡಾ. ಶಿವಕುಮಾರಸ್ವಾಮಿಗಳ ಕಾರಣದಿಂದಲೇ ಇಂದು ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಸದಸ್ಯೆ ಕೆ. ವಿದ್ಯಾ ಮಂಜುನಾಥ್ ಮಾತನಾಡಿ, ಪರಮಪೂಜ್ಯರ ಶುಭನಾಮದಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಪ್ರತಿತಿಂಗಳು ಅನ್ನಸಂತರ್ಪಣೆ ಮಾಡುವ ಮೂಲಕ ದಾಸೋಹ ಹುಣ್ಣಿಮೆ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ. ಶಿವಕುಮಾರ  ಪ್ರಾಸ್ತಾವಿಕವಾಗಿ ಮಾತನಾಡಿದರು.

ಮನ್ಮುಲ್ ಅಧ್ಯಕ್ಷ ಶಿವಪ್ಪ, ಮದ್ದೂರು ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಅರ್.‌ ಮಂಜುನಾಥ, ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ, ಉಪಾಧ್ಯಕ್ಷರಾದ ಜಿ. ಮಹಾಂತಪ್ಪ, ಮೆಣಸಗೆರೆ ಶಿವಲಿಂಗಪ್ಪ, ಅಮೃತಿ ಶೇಖರ, ನಿರ್ದೇಶಕರಾದ ತೇಜಸ್, ಮಹದೇವಪ್ಪ, ಕೆಂಪರಾಜು, ಕೈಲಾಸಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *