“ಅಕ್ಕನಾಗಮ್ಮನವರ ಕುರಿತು ಅನೈತಿಕವಾಗಿ ಚಿತ್ರಕರಿಸಿದ್ದು ಸಂಪೂರ್ಣ ತಪ್ಪು ಹಾಗೂ ಯಾವುದೇ ನಾಗರಿಕ ಸಮಾಜ ಒಪ್ಪತಕ್ಕುದಲ್ಲ ಈ ರೀತಿ ಚಿತ್ರೀಕರಿಸಿದ್ದು ಘೋರ ಅಪರಾಧ.”
ವಿಜಯಪುರ:
“ಶರಣರ ಶಕ್ತಿ” ಚಲನಚಿತ್ರ ಬಿಡುಗಡೆಯಾಗುವುದನ್ನು ನಿರ್ಭಂಧಿಸಬೇಕೆಂದು ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರವಿಕುಮಾರ ಬಿರಾದಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒತ್ತಾಯಿಸಿದ್ದಾರೆ.
ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದು, 12ನೇ ಶತಮಾನದ ಬಸವಣ್ಣನವರ ಅಕ್ಕನಾಗಮ್ಮನವರ ಕುರಿತು ಅನೈತಿಕವಾಗಿ ಚಿತ್ರಕರಿಸಿದ್ದು ಸಂಪೂರ್ಣ ತಪ್ಪು ಹಾಗೂ ಯಾವುದೇ ನಾಗರಿಕ ಸಮಾಜ ಒಪ್ಪತಕ್ಕುದಲ್ಲ ಈ ರೀತಿ ಚಿತ್ರೀಕರಿಸಿದ್ದು ಘೋರ ಅಪರಾಧ.
“ಮನೆ ಹೊಕ್ಕು ಲಿಂಗ ಕಟ್ಟುತ್ತೇವೆ” ಎಂಬ ಮಾತು ಬಸವಣ್ಣನವರ ತತ್ವಕ್ಕೆ ವಿರುದ್ಧವಾದದ್ದು, ಬಲವಂತದ ಲಿಂಗ ಕಟ್ಟುವುದನ್ನು ಬಸವಾದಿ ಶರಣರು ಪ್ರತಿಪಾದಿಸಿಲ್ಲ.
ತಳವರ್ಗದ ಶರಣರಿಗೆ ನೀಲಿ ಬಣ್ಣ ಲೇಪಿಸಿರುವುದು ಸಂಪೂರ್ಣ ತಪ್ಪು, ಬಸವಾದಿ ಶರಣರು ಯಾವುದೇ ತಾರತಮ್ಯ ಮಾಡಿಲ್ಲ, ವರ್ಗ ರಹಿತ ಸಮಸಮಾಜ ಕಟ್ಟಿದವರು.
ಬಸವಣ್ಣನವರನ್ನು ಕೊಲೆ ಮಾಡಲಾಯಿತು ಅಂತ ತೋರಿಸಲಾಗಿದೆ ಇದು ಸಂಪೂರ್ಣ ತಪ್ಪು ಮಾಹಿತಿ.
ಈ ಚಲನಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಬಸವಣ್ಣನವರ ವಿಚಾರಧಾರೆಯನ್ನು ಒಪ್ಪದವರು, ಬೇಕೆಂತಲೇ ಬಸವಾದಿ ಶರಣರಿಗೆ ಮಸಿ ಬಳಿಯುವ ದುರುದ್ದೇಶದಿಂದ ಈ ಚಿತ್ರ ತಯಾರಿಸಿದ್ದಾರೆ ಅಂತ ಅನಿಸುತ್ತಿದೆ.
ಕೇವಲ ಎರಡು ನಿಮಿಷದ ಟ್ರೈಲರ್ ನಲ್ಲೆ ಇಷ್ಟೊಂದು ತಪ್ಪುಗಳು, ಅವಮಾನಗಳನ್ನು ಬಸವಾದಿ ಶರಣರಿಗೆ ಮಾಡಿದ್ದಾರೆಂದರೆ ಇನ್ನು ಸಂಪೂರ್ಣ ಚಿತ್ರದಲ್ಲಿ ಇನ್ನೆಷ್ಟು ಅನಾಹುತಗಳನ್ನು ಈ ನಿರ್ಮಾಪಕ ದಿಲೀಪ್ ಶರ್ಮಾ/ ಕುಲಕರ್ಣಿಗಳು ಮಾಡಿರಬಹುದು.
ಈ ಅಂಶಗಳ ಬಗ್ಗೆ ಬಿರಾದಾರ ಅವರು ಆತಂಕ ವ್ಯಕ್ತಪಡಿಸಿ, ಈ ಸೂಕ್ಷ್ಮ ವಿಚಾರಗಳನ್ನು ಪರಿಗಣಿಸಿ ಬಸವಣ್ಣನವರ ಅನುಯಾಯಿಗಳಿಗೆ ಆಗಿರುವ ಆಘಾತ, ಅನ್ಯಾಯವನ್ನು ಸರಿಪಡಿಸಬೇಕು. ಅಲ್ಲದೆ ಶರಣರ ಶಕ್ತಿ ಚಲನಚಿತ್ರವನ್ನು ಎಲ್ಲಾ ವಿಧದ ಮಾಧ್ಯಮಗಳಿಗೆ ಬಿಡುಗಡೆಯಾಗುವುದನ್ನು ಸಂಪೂರ್ಣ ನಿರ್ಭಂಧಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.