ಗದಗ
ಹಾನಗಲ್ ಪೂಜ್ಯ ಶ್ರೀ ಕುಮಾರಸ್ವಾಮಿಗಳು ನಾಡು ಕಂಡ ಅಪರೂಪದ ಶ್ರೇಷ್ಠ ಸ್ವಾಮಿಗಳು. ಯಾವಾಗಲೂ ಸಮಾಜ, ಸಮಾಜ, ಸಮಾಜ, ಎನ್ನುತ್ತಾ ಅದನ್ನೆ ಮಂತ್ರವಾಗಿಸಿಕೊಂಡವರು. ಸಮಾಜಕ್ಕೆ ಹಾನಗಲ್ ಕುಮಾರ ಸ್ವಾಮಿಗಳ ಕೊಡುಗೆ ಅಪಾರ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೧೨ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಾನಗಲ್ ಕುಮಾರಸ್ವಾಮಿಗಳು ನಾಡಿನಾದ್ಯಂತ ಸಂಚರಿಸಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾಯಕ ಮಾಡಿದ್ದಾರೆ.
ಎಲ್ಲೆಲ್ಲಿ ಮಠಗಳಿವೆಯೋ ಅಲ್ಲಲ್ಲಿ ಹಾಸ್ಟೆಲ್ ಪ್ರಾರಂಭಿಸಿ, ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪ್ರಯತ್ನಿಸಿದ ಪ್ರತೀಕವಾಗಿ ೧೯೧೦ ರಿಂದ ಕೆ.ಎಲ್.ಇ. ಸಂಸ್ಥೆ, ಇನ್ನು ಅನೇಕ ಸಂಸ್ಥೆಗಳನ್ನು ಕಟ್ಟಲು ಪ್ರೇರಕ ಶಕ್ತಿಯಾದರು. ಮಠಗಳ ಉತ್ತರಾಧಿಕಾರಿಗಳಾದ ಸ್ವಾಮಿಗಳಿಗೆ ತರಬೇತಿ ಅವಶ್ಯವೆಂದು ಅರಿತು, ಶಿವಯೋಗ ಮಂದಿರವನ್ನು ಕಟ್ಟಿ ಸಮಾಜದ ಸ್ವಾಮಿಗಳಿಗೆ ಸಂಜೀವಿನಿಯಾದರು. ಇಂದು ನಾಡಿನಾದ್ಯಂತ ಹಲವಾರು ಸ್ವಾಮಿಗಳು ಶಿವಯೋಗಮಂದಿರದಲ್ಲಿ ತಮ್ಮನ್ನು ರೂಪಿಸಿಕೊಂಡು, ಮಠಮಾನ್ಯಗಳ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಯೋಗ, ಸಮಾಜ ಸೇವೆ, ಶಿಕ್ಷಣ, ಸಾಹಿತ್ಯ ಹಾಗೂ ಅಧ್ಯಾತ್ಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುತ್ತಾ, ಶಿವಯೋಗ ಮಂದಿರದ ಹಿರಿಮೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರು ಮಾತನಾಡಿ, ಮಠಗಳು ಸಮಾಜದುದ್ದಾರದ ಮಹಾನ್ ಕೇಂದ್ರಗಳಾಗಬೇಕು. ಸ್ವಾಮಿಗಳು ಸೇತುವೆಯೋಪಾದಿಯಲ್ಲಿ ನಿಂತು ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಬೇಕು.

ಹಾನಗಲ್ ಕುಮಾರಸ್ವಾಮಿಗಳ ಬಾಲ್ಯಜೀವನ ಅಧ್ಯಯನ, ಧಾರ್ಮಿಕ ಅಧ್ಯಯನ ಹಾಗೂ ಶಿಕ್ಷಕರಾದ ಕುಮಾರಸ್ವಾಮಿಗಳು ಹೇಗೆ ಸಮಾಜದಿಂದ ಸ್ವಾಮಿಗಳಾದರು ಮತ್ತು ಸನ್ಯಾಸಿ ಮತ್ತು ಸ್ವಾಮಿಗಳೆಂದು ಯಾರಿಗೆ ಹೇಳುತ್ತೇವೆ ಎಂಬ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗದಗ ಡಿಜಿಯಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಉಮೇಶ ಪುರದ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಮೃತ್ಯುಂಜಯ ಪ್ರೌಢಶಾಲೆ ಇಂಗಳಹಳ್ಳಿ ತಾಲೂಕು ಹುಬ್ಬಳ್ಳಿ ಮುಖ್ಯೋಪಾಧ್ಯಾಯರಾದ ಕಳಕಮಲ್ಲೇಶ ಸಿ. ಪಟ್ಟಣಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಡಾ. ಪದ್ಮಾ ಜಿ ಕಬಾಡಿಯವರು ತಾವೇ ರಚಿಸಿದ ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ವಚನಸಂಗೀತ ಸೇವೆಯನ್ನು ಮಂಜುಳಾ ಇದ್ಲಿ, ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಕುಮಾರಿ ಪೂರ್ವಿಕಾ ಕೆ ಹಿರೇಮಠ, ವಚನ ಚಿಂತನವನ್ನು ಕುಮಾರ ಭುವನ ಸಂತೋಷ ವಸ್ತ್ರದ ಇವರು ಮಾಡಿದರು. ದಾಸೋಹ ಸೇವೆಯನ್ನು ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಹಕಾರಿ ಪತ್ತಿನ ಸಂಘ. ( ರಿ ) ಗದಗ ಅಧ್ಯಕ್ಷರಾದ ಶ್ರೀ ಎಸ್.ಎಸ್. ಪಟ್ಟಣಶೆಟ್ಟಿಯವರು ಹಾಗೂ ಕಾರ್ಯದರ್ಶಿಗಳಾದ ದೊಡ್ಡಬಸಪ್ಪ ಚಿತ್ರಗಾರ ನೆರವೇರಿಸಿದರು. ವಿದ್ಯಾವತಿ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶಿವಾನಂದ ಹೊಂಬಳ ಸ್ವಾಗತಗೈದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್‌ರಾದ ಐ.ಬಿ. ಬೆನಕೊಪ್ಪ, ಶಿವಾನುಭವ ಸಮಿತಿ ಸಹಚೇರಮನ್‌ರಾದ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗದಗ ಡಿಜಿಯಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಉಮೇಶ ಪುರದ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಮೃತ್ಯುಂಜಯ ಪ್ರೌಢಶಾಲೆ ಇಂಗಳಹಳ್ಳಿ ತಾಲೂಕು ಹುಬ್ಬಳ್ಳಿ ಮುಖ್ಯೋಪಾಧ್ಯಾಯರಾದ ಕಳಕಮಲ್ಲೇಶ ಸಿ. ಪಟ್ಟಣಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.