ಶರಣ ಉದ್ಯಾನದಲ್ಲಿ ಪ್ರಭುಲಿಂಗ ಲೀಲೆ ಪ್ರವಚನ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನವನದಲ್ಲಿ ಶರಣ ಮಾಸದ ಪರ್ಯಂತರ ನಡೆಯುವ ಪ್ರಭುಲಿಂಗ ಲೀಲೆ ಪ್ರವಚನವನ್ನು ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿಕೊಂಡು ಉದ್ಘಾಟಿಸಿದರು.

ಒಂದು ತಿಂಗಳ ಕಾಲ ಪ್ರವಚನ ಮಾಡಲಿರುವ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ, ಭಾರತೀಯರಿಗೆ ಶ್ರಾವಣ ಎಂದರೆ ಕೇವಲ ಸಂಭ್ರಮ ಅಲ್ಲ. ಅದು ಸತ್ಯ ಸಾಧನೆಯ ನಿಜ ಸಂಭ್ರಮ. ಶ್ರಾವಣ ಸತ್ಯ ಸಾಧನೆಗೆ ದಾರಿ ತೋರುವ ಶರಣರೊಡನೆ ಆಡಿ-ಪಾಡಿ ನಲಿದಾಡುವ ನಿಜ ಸಂಭ್ರಮವಾಗಿದೆ. ಪೂಜೆ, ಪ್ರಾರ್ಥನೆ, ಅನುಭಾವ ಗೋಷ್ಠಿಗಳು ನಡೆಯುವುದರಿಂದ ಎಲ್ಲೆಡೆ ಧನಾತ್ಮ ಅಲೆಗಳು ಪಸರಿಸುವ ಮೂಲಕ ಜನರಲ್ಲಿ ಬದುಕನ್ನು ಎದುರಿಸುವ ಆತ್ಮವಿಶ್ವಾಸ ಮೂಡಿಸುವವು. ಮನುಷ್ಯ ಭಯಮುಕ್ತನಾಗಬೇಕಾದರೆ ಆತ್ಮ ವಿದ್ಯೆಯ ಕಡೆ ಹೋಗುವುದು ಅತಿ ಅವಶ್ಯವಾಗಿದೆ. ಆತ್ಮ ವಿದ್ಯೆಯೇ ಸರ್ವ ಶ್ರೇಷ್ಠ ವಿದ್ಯವಾಗಿದೆ ಎಂದರು.

ಸರಕಾರಿ, ಅರೆ ಸರ್ಕಾರಿ ನೌಕರರ ಪತ್ತಿನ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಬಸವಾದಿ ಶರಣರು ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು.

ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ, ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ. ಶರಣರ, ದಾರ್ಶನಿಕರ ಸಂತರ ನುಡಿಗಳನ್ನು ಕೇಳಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ. ಶ್ರಾವಣ ಮಾಸದಲ್ಲಿ ಇಲ್ಲಿ ನಡೆಯುವ ಅಕ್ಕನವರ ಪ್ರವಚನದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜಯೋಗಿಣಿ ಬಿ.ಕೆ. ಗುರುದೇವಿ ಅಕ್ಕ ಮಾತನಾಡಿದರು. ಬಸವ ಸೇವಾ ಪ್ರತಿಷ್ಠಾನದ ಡಾ. ವಿಜಯಶ್ರೀ ಬಶೆಟ್ಟಿ ಅಧ್ಯಕ್ಷತೆ ವಹಿಸಿಕೊಂಡು ವಚನ ಪಠಣ ಮಾಡಿದರು. ಹಿರಿಯ ಚಿತ್ರಕಲಾವಿದರಾದ ಸಿ. ಬಿ. ಸೋಮಶೆಟ್ಟಿ ಷಟಸ್ಥಲ ಧ್ವಜಾರೋಹಣಗೈದರು. ಬಿ.ಕೆ.ಹಿರೇಮಠ ಉಪಸ್ಥಿತರಿದ್ದರು.

ಶಿವಕುಮಾರ ಪಂಚಾಳ ಮತ್ತು ಸಂಗಡಿಗರಿಂದ ವಚನ ಗಾಯನ ನಡೆಯಿತು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾದ ಜ್ಞಾನದೇವಿ ಬಬಛೆಡೆ ಸ್ವಾಗತಿಸಿದರೆ, ಸುಮಾ ಭೂಶೆಟ್ಟಿ ನಿರೂಪಿಸಿದರು. ಗುರುನಗರ ನೀಲಮ್ಮನ ಬಳಗದ ಶರಣೆಯರು ಗುರುಪೂಜೆ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *