ಬಸವಕಲ್ಯಾಣದಲ್ಲಿ ಶರಣೆ ದಾನಮ್ಮ ಜ್ಞಾನ ಜ್ಯೋತಿ ಯಾತ್ರೆಗೆ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

“ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಊರುಗಳಲ್ಲಿ 6 ಸಾವಿರಕ್ಕೂ ಹೆಚ್ಚು ಜನಗಳಿಗೆ ಲಿಂಗದೀಕ್ಷೆ ನೀಡಿದ್ದಾರೆ.”

ಬಸವಕಲ್ಯಾಣ

ಏಪ್ರಿಲ್ 5, 6 ನಡೆಯಲಿರುವ ದಾನಮ್ಮ ಉತ್ಸವವನ್ನು ಇಲ್ಲಿನ ಐತಿಹಾಸಿಕ ಅಲ್ಲಮಪ್ರಭು ದೇವರ ಗದ್ದುಗೆ ಮಠದಲ್ಲಿ ಲಿಂಗಯೋಗ ಮಾಡುವುದರ ಮೂಲಕ ಬಸವ ತತ್ವ ಪ್ರಸಾರ ಮತ್ತು ಪ್ರಚಾರ ಕೇಂದ್ರದ ಅಧ್ಯಕ್ಷರಾದ ಶರಣ ಜಯಪ್ರಕಾಶ ಸದಾನಂದೆ ಚಾಲನೆ ನೀಡಿದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಅವರು ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಬಸವ ಧರ್ಮ ಪ್ರಚಾರಾರ್ಥವಾಗಿ ಕಳೆದ 13 ವರ್ಷದಿಂದ ಶರಣೆ ದಾನಮ್ಮ ಜ್ಞಾನ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಂಡು ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಐದು ಜಿಲ್ಲೆಗಳ ನೂರಾರು ಊರುಗಳಲ್ಲಿ ಪ್ರಚಾರ ಮಾಡಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನಗಳಿಗೆ ಲಿಂಗದೀಕ್ಷೆ ನೀಡಿ ಬಸವತತ್ವವನ್ನು ಉಳಿಸಿ ಬೆಳೆಸುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

ಪೂಜ್ಯರು ಬಸವಕಲ್ಯಾಣದ ಗುಣತೀರ್ಥವಾಡಿ-ನಾರಾಯಣಪೂರವನ್ನು ದಾನಮ್ಮನ ತಪೋಕ್ಷೇತ್ರವೆಂದು ಸಂಶೋಧನೆ ಮೂಲಕ ಗುರುತಿಸಿ ಅಲ್ಲಿ ಕಲ್ಯಾಣ ಮಹಾಮನೆಯನ್ನು ಕಟ್ಟಿ, ಪ್ರತಿವರ್ಷ ಶರಣ ಸಮಾಗಮ ಹಾಗೂ ದಾನಮ್ಮ ಉತ್ಸವವನ್ನು ಹಮ್ಮಿಕೊಳ್ಳುತ್ತಿರುವರು.

ಈ ವರ್ಷದ ಏಪ್ರಿಲ್ 5, 6ರಂದು ನಡೆಯುವ ಕಾರ್ಯಕ್ರಮದ ಉದ್ಘಾಟನೆಗಾಗಿ ದಾನಮ್ಮನ ಐಕ್ಯ ಕ್ಷೇತ್ರ ಗುಡ್ಡಾಪುರದಿಂದ, ಸೋಲಾಪೂರ ಸಿದ್ಧರಾಮೇಶ್ವರದಿಂದ, ಕೊಲ್ಲಾಪೂರ ಜಿಲ್ಲೆಯ ಅಲ್ಲಮಗಿರಿಯಿಂದ ಜ್ಯೋತಿಯನ್ನು ಹೊತ್ತಿಸಿಕೊಂಡು ಬರುತ್ತಿರುವರು. ಪೂಜ್ಯರು ಶರಣ ಜ್ಞಾನಿಗಳಾಗಿದ್ದು ಅವರು ಹಮ್ಮಿಕೊಳ್ಳುವ ಕಾರ್ಯಕ್ರಮ ಅನುಭಾವದಿಂದ ಕೂಡಿರುತ್ತವೆ, ಎಲ್ಲರೂ ತನು ಮನ ಧನದಿಂದ ಸಹಕರಿಸಬೇಕೆಂದು ಕರೆ ನೀಡಿದರು.

ಕಲ್ಯಾಣ ಮಹಾಮನೆಯ ಪೂಜ್ಯ ನಿಜಲಿಂಗ ದೇವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಬಸವಪ್ರಭು ಸ್ವಾಮೀಜಿಯವರು ಹಮ್ಮಿಕೊಂಡ ಜ್ಯೋತಿ ಯಾತ್ರೆಯು ಆಡಂಬರದ ಪಾದಯಾತ್ರೆಯಾಗಿರದೆ, ಜನರನ್ನು ಧಾರ್ಮಿಕವಾಗಿ ಪರಿವರ್ತಿಸುವ ಜ್ಞಾನಜ್ಯೋತಿ ಯಾತ್ರೆಯಾಗಿದೆ.

ಪೂಜ್ಯ ಶ್ರೀ ಮಾತೆ ಮಹಾದೇವಿಯವರ ಕರ ಸಂಜಾತರಾದ ಪೂಜ್ಯರು ಅವರಂತೆ ಮುಂದುವರೆದ ಭಾಗವಾಗಿ ಧರ್ಮ ಪ್ರಚಾರ ಮಾಡುವ ಕೈಂಕರ್ಯವನ್ನು ಹೊಂದಿದ್ದಾರೆ ಎಂದರಲ್ಲದೆ 25ದಿನ ನಡೆಯಲಿರುವ ಜ್ಞಾನ ಜ್ಯೋತಿ ಯಾತ್ರೆಯಲ್ಲಿ ಬಸವಧರ್ಮಿಯರಿಗೆ ಪ್ರವಚನ, ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಉಚಿತವಾಗಿ ಲಿಂಗದೀಕ್ಷೆ ಮಾಡಲಾಗುತ್ತದೆ, ಸರ್ವರೂ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಆಶಿರ್ವಚನ ಮಾಡಿದ ಶರಣೆ ದಾನಮ್ಮ ಜ್ಯೋತಿ ಯಾತ್ರೆಯ ರುವಾರಿ ಶ್ರೀ ಬಸವಪ್ರಭು ಸ್ವಾಮೀಜಿಯವರು, ಹನ್ನೆರಡನೇ ಶತಮಾನದಲ್ಲಿ ಗುರು ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಮಹಾಶರಣೆ ದಾನಮ್ಮನವರು ಅದ್ಭುತ ಲಿಂಗಯೋಗಿಗಳಾಗಿದ್ದಾರೆ. ಬೇಡಿದವರಿಗೆ ಇಷ್ಟಾರ್ಥವನ್ನು ಈಡೇರಿಸುವ ವರದಾನಿಯಾಗಿದ್ದಾರೆ.

ಅವರು ದಾಂಪತ್ಯ ಧರ್ಮವನ್ನು ಸ್ವೀಕರಿಸಿ, ಸಾಮಾಜಿಕ ಮತ್ತು ಮಾನವೀಯ ಕಾರ್ಯಗಳನ್ನು ಮಾಡಿ ಜನಮಾನಸದ ಹೃದಯದಲ್ಲಿ ಶಾಶ್ವತ ನೆಲೆ ನಿಂತಿದ್ದಾರೆ. ಅವರು ಕಲ್ಯಾಣಕ್ಕೆ ಬಂದ ಕುರುಹುಗಳಿರಲಿಲ್ಲ ಇತ್ತೀಚೆಗೆ ನಾವು ಕಂಡುಕೊಂಡಿದ್ದೇವೆ. ಗುಣತೀರ್ಥವಾಡಿಯನ್ನು ನಾವು ದಾನಮ್ಮನ ತಪೋಸ್ಥಾನವೆಂದು ಘೋಷಿಸಿದ್ಧೇವೆ. ಈ ಕ್ಷೇತ್ರವನ್ನು ಪವಿತ್ರ ಧಾರ್ಮಿಕ ಶರಣ ಕ್ಷೇತ್ರವಾಗಿಸಲು ನಾನು ಸಂಕಲ್ಪ ಮಾಡಿರುವೆ, ಈ ಕಾರಣವಾಗಿ ಸತತ 13ವರ್ಷದಿಂದ ಪ್ರಯತ್ನಿಸಿದ ಫಲವಾಗಿ ಅದು ಸಾಧ್ಯವಾಗಿದೆ ಎಂದರು.

ದಾನಮ್ಮನ ಉತ್ಸವನ್ನು ಒಂದು ಜಾತ್ರೆಯಾಗಿ ಮಾಡದೆ, ಶರಣ ಜ್ಞಾನವನ್ನು ಬಿತ್ತರಿಸುವ ಅನುಭವ ಮಂಟಪದ ಉತ್ಸವಾಗಿ, ಕಲ್ಯಾಣದ ಹಬ್ಬವಾಗಿ ಆಚರಿಸಬೇಕೆಂದು ಸಂಕಲ್ಪಿಸಿರುವೆ. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸಾಕಷ್ಟು ಅನುಭಾವಿಗಳು, ಚಿಂತಕರು, ದಾನಮ್ಮನ ಬಸವ ಭಕ್ತಿಯ ಬಳಗ ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ತಾವು ತಮ್ಮ ಸಹ ಕುಟುಂಬ ಪರಿವಾರದೊಂದಿಗೆ ಆಗಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶರಣೆ ಲಕ್ಷ್ಮಿಬಾಯಿ ಪಾಟೀಲ ಮಾತನಾಡಿದರು. ಶರಣೆ ಸವಿತಾ ರಗಟೆ ಪೂಜೆ ನೆರವೇರಿಸಿದರು. ಶರಣೆ ಗಿರಿಜಾ ಎಸ್. ಹಂಗರಗೀಕರ್ ಸ್ವಾಗತಿಸಿದರು. ಶರಣ ಸಂಗಮೇಶ ತೊಗರಖೇಡೆ ನಿರೂಪಿಸಿದರು. ಶರಣೆ ದೀಪ್ತಿ ಶ್ರೀಶೈಲ ಬಿರಾದಾರ ವಂದಿಸಿದರು.

ನೀಲಕಂಠಯ್ಯ ಸ್ವಾಮಿ, ಗಣಪತಿ ಖಸಗೆ, ರಾಮ ಮಜ್ಜಿಗೆ, ಡಾ. ಬಸವರಾಜ ಮೂಲಗೆ, ಸರಸ್ವತಿ ಹೋದಲೂರೆ, ಸಿದ್ಧರಾಮಪ್ಪ ಹಂಗರಗಿಕರ್, ರೇಣುಕಾ ಮಾಮಾ, ಸುಮಿತ್ರಾ ದಾವಣಗಾವೆ, ಗುಣತೀರ್ಥವಾಡಿಯ ಸವಿತಾ, ಜಯಶ್ರೀ, ಅಂಬರೇಶ ಮತ್ತಿತರರಿದ್ದರು.

ಬಸವ ಮೀಡಿಯಾ 23
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *