ಸಾಣೇಹಳ್ಳಿ
ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ `ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಈ ಬಾರಿ ಇಳಕಲ್ಲಿನ ಹಿರಿಯ ರಂಗಕರ್ಮಿ ಮಹಾಂತೇಶ ಎಂ. ಗಜೇಂದ್ರಗಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಿಳಿಸಿದ್ದಾರೆ.
೨೦೦೪ ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ ಶ್ರೀ ಶಿವಕುಮಾರ ಪ್ರಶಸ್ತಿಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ, ರಂಗಚಟುವಟಿಕೆಗಳಲ್ಲಿ, ಮಹತ್ವದ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.
ಇದುವರೆಗೂ ಪ್ರಸನ್ನ(೨೦೦೪), ಸಿಜಿಕೆ(೨೦೦೫), ಪಿ ಜಿ ಗಂಗಾಧರಸ್ವಾಮಿ(೨೦೦೬), ಅಶೋಕ ಬಾದರದಿನ್ನಿ(೨೦೦೭), ಮಾಲತಿಶ್ರೀ(೨೦೦೮), ೨೦೦೯ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ. ಸಿ ಬಸವಲಿಂಗಯ್ಯ(೨೦೧೦), ಬಿ ಜಯಶ್ರೀ(೨೦೧೧), ಡಾ. ಕೆ ಮರುಳಸಿದ್ಧಪ್ಪ(೨೦೧೨), ಚಿದಂಬರರಾವ್ ಜಂಬೆ(೨೦೧೨), ಕೋಟಗಾನಹಳ್ಳಿ ರಾಮಯ್ಯ(೨೦೧೪), ಡಾ. ಸುಭದ್ರಮ್ಮ ಮನ್ಸೂರು (೨೦೧೫), ಲಕ್ಷ್ಮೀ ಚಂದ್ರಶೇಖರ (೨೦೧೬), ಶ್ರೀನಿವಾಸ ಜಿ ಕಪ್ಪಣ್ಣ (೨೦೧೭), ಬಸವರಾಜ ಬೆಂಗೇರಿ(೨೦೧೮), ಟಿ ಎಸ್ ನಾಗಾಭರಣ (೨೦೧೯), ೨೦೨೦ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (೨೦೨೧), ಡಾ. ಎಂ ಜಿ ಈಶ್ವರಪ್ಪ(೨೦೨೨), ಶಶಿಧರ ಅಡಪ (೨೦೨೩)ಇವರಿಗೆ ನೀಡುತ್ತಾ ಬರಲಾಗಿದೆ.
ರಂಗಕರ್ಮಿ, ರಂಗಸಂಘಟಕ, ಕಲಾವಿದ, ಕಲಾನಿರ್ದೇಶಕ ಮಹಾಂತೇಶ ಎಂ. ಗಜೇಂದ್ರಗಡ ಅವರು ಕಳೆದ ೪೨ ವರ್ಷಗಳಿಂದ ರಂಗಭೂಮಿ ಕ್ಷೇತ್ರ ಹಾಗೂ ವೃತ್ತಿ ನಾಟಕ ಕಂಪನಿಗಳಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.
ಇಂತಹ ಅಪರೂಪದ ರಂಗಕಲಾವಿದರಿಗೆ `ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರಕಟ ಆಗಿರುವಂಥದ್ದು ನಮಗಂತೂ ತುಂಬಾ ಸಂತೋಷವಾಯಿತು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಅವರನ್ನು ಅಭಿನಂದಿಸಿ ಸುದ್ದಿಯನ್ನು ಮಾಧ್ಯಮಗಳಿಗೆ ಬಿಡುಗೊಳಿಸಿದರು.
ಪ್ರಶಸ್ತಿಯು ೫೦ ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಇದೇ ನವೆಂಬರ್ ೪ ರಿಂದ ೯ ರವರೆಗೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದ ದಿನ ಪ್ರಧಾನ ಮಾಡಲಾಗುವುದು ಎಂದರು.