ಶಿವಮೊಗ್ಗ
ಶರಣ ದಂಪತಿ ವಾಣಿ ಎನ್.ಆರ್. ಮತ್ತು ಚಂದ್ರಶೇಖರ ಆರ್. ಯು. ಅವರ ನಗರದ ಅಪೂರ್ವ ಲೇಔಟ್ ನಲ್ಲಿ ಕಟ್ಟಿಸಿರುವ ನೂತನ ಮನೆ ‘ಮಹರ್ಷಿ ಮರುಳಸಿದ್ಧೇಶ್ವರ ಮಹಾಮನೆ’ಯ ಗುರುಪ್ರವೇಶ ಮತ್ತು ‘ಸರ್ವ ಶರಣ ಸಮ್ಮೇಳನ’ ಫೆಬ್ರವರಿ 4 ಲಿಂಗಾಯತ ನಿಜಾಚರಣೆಯಂತೆ ನಡೆಯಿತು.
ಬೆಳಿಗ್ಗೆ ನೂತನ ಮನೆಯ ಗುರುಪ್ರವೇಶವು ವಚನ ವಾಚನ ಹಾಗೂ ಇಷ್ಟಲಿಂಗ ಪೂಜೆಯೊಂದಿಗೆ ನೆರವೇರಿತು.
ಮಧ್ಯಾಹ್ನ ನಡೆದ ‘ಸರ್ವ ಶರಣ ಸಮ್ಮೆಳನ’ದ ಸಾನ್ನಿಧ್ಯವನ್ನು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾಮಠ, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ದೊಡ್ಡ ಮರಳವಾಡಿಯ ಶ್ರೀ ಮೃತ್ಯುಂಜಯ ಮಹಾಸ್ವಾಮೀಜಿ, ಅಕ್ಕಮಹಾದೇವಿ ಮಾತಾಜಿ ಸವಳಂಗ ಅವರು ವಹಿಸಿ ಆಶೀರ್ವಚನ ದಯಪಾಲಿಸಿದರು.

ಕಾರ್ಯಕ್ರಮದಲ್ಲಿ ಚಾರಿತ್ರಿಕ ಕೃತಿಗಳಾದ ‘ವಿಶ್ವಬಂಧು ಮರುಳಸಿದ್ಧ ಹಾಗೂ ಚತುರಾಚಾರ್ಯರ ಚಾರಿತ್ರಿಕ ಅಧ್ಯಯನ’ ಮತ್ತು ‘ದೇವನೂರು ಗುರುಮಲ್ಲೇಶ್ವರರ ಲಿಂಗಲೀಲಾ ವಿಲಾಸ’ ಕೃತಿಗಳನ್ನು ಲೋಕಾರ್ಪಣೆಗೊಂಡವು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀಗಳು ಈಗ ಸತ್ಯ ಯಾರಿಗೂ ಬೇಕಿಲ್ಲ. ಎಲ್ಲರೂ ಪುರಾಣದ ಕಥೆಗೆ ಆದ್ಯತೆ ನೀಡುತ್ತಿದ್ದಾರೆ. ಚತುರಾಚಾರ್ಯರ ಚಾರಿತ್ರಿಕ ಅಧ್ಯಯನ ಪುಸ್ತಕವನ್ನು ಪ್ರಕಾಶಿಸಲು ಯಾರೂ ಮುಂದೆ ಬಾರದೆ ಇದ್ದದ್ದರಿಂದ ಸತ್ಯದ ಅನಾವರಣ ಮಾಡಲು ಲೇಖಕರಿಗೆ ಎರಡು ವರ್ಷಗಳ ಕಾಲ ತಡವಾಯಿತು. ಅವರು ದೈಹಿಕವಾಗಿ ಕೃಶರಾಗಿ ಕಂಡರೂ ಮಾನಸಿಕವಾಗಿ ಗಟ್ಟಿತನ ಅವರಲ್ಲಿದೆ. ಆಧುನಿಕ ವಚನಗಳನ್ನು ರಚಿಸಿದ್ದಾರೆ. ಅವರಲ್ಲಿ ತತ್ವಬದ್ಧತೆ ಇದೆ ಎಂದು ಆಶೀರ್ವಚನ ನೀಡಿದರು.
ದೊಡ್ಡಮರಳವಾಡಿ ಶ್ರೀ ಮೃತ್ಯುಂಜಯ ಸ್ವಾಮೀಜಿ ಗುರುಮಲ್ಲೇಶ್ವರ ಪುಸ್ತಕ ಬಿಡುಗಡೆಗೆ ಸಾಕಷ್ಟು ಪ್ರಯತ್ನಪಟ್ಟರು ಸಾಧ್ಯವಾಗಿರಲಿಲ್ಲ. ಬೆಂಗಳೂರು ಕೃಪಾಶಂಕರ ಮೂಲಕ ಚಂದ್ರಶೇಖರ ಅವರನ್ನು ಸಂಪರ್ಕಿಸಿದಾಗ ಪುಸ್ತಕ ಬಿಡುಗಡೆ ಮಾಡಿಕೊಡಲು ಒಪ್ಪಿದರು ಎಂದು ತಮ್ಮ ಆಶೀರ್ವಾದದ ವಾಣಿಯಲ್ಲಿ ತಿಳಿಸಿದರು.

ಜೆಎಸ್ಎಸ್ ವಿದ್ಯಾಸಂಸ್ಥೆಯ ನಿವೃತ್ತ ಉಪನ್ಯಾಸಕ ಪ್ರೊ. ಸದಾಶಿವಮೂರ್ತಿ ಹಾಗೂ ಕುವೆಂಪು ವಿವಿ ಕನ್ನಡ ಭಾರತಿ ವಿಭಾಗದ ಉಪನ್ಯಾಸಕ ಡಾ.ನವೀನ ಮಂಡಗದ್ದೆ ಪುಸ್ತಕ ಗಳ ಕುರಿತು ಮಾತನಾಡಿದರು.
ಅತಿಥಿಗಳಾಗಿ ಹೆಚ್.ಸಿ. ಯೋಗೀಶ, ಎಸ್. ಪಿ. ನಾಗರಾಜಗೌಡ, ಈ. ವಿಶ್ವಾಸ್, ಮೋಹನ ಬಾಳೇಕಾಯಿ ವೇದಿಕೆಯಲ್ಲಿದ್ದರು.
ಟಿ.ಜೆ. ನಾಗರತ್ನ ಮತ್ತು ಸಂಗಡಿಗರಿಂದ ವಚನ ಗಾಯನ, ಚಂದ್ರಶೇಖರ ಆರ್. ಯು. ಅವರು ಪ್ರಾಸ್ತಾವಿಕ ನುಡಿ, ಹರೀಶ್ ಹೆಚ್. ನಿರೂಪಣೆ, ಚನ್ನೇಶಪ್ಪ ಕೆ. ಹೆಚ್. ಸ್ವಾಗತ, ಮಲ್ಲಿಕಾರ್ಜುನ ಯಲವಟ್ಟಿ ಅವರು ಶರಣು ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಧುರೀಣರು, ಶರಣ, ಶರಣೆಯರು ಉಪಸ್ಥಿತರಿದ್ದರು. ಕಗ್ಗಲ್ಲುಗೌಡ್ರು ಫೌಂಡೇಶನ್ ಸದಸ್ಯರು, ಪದವೀಧರ ಪ್ರಾಥಮಿಕ ಶಿಕ್ಷಕರು ಹಾಗೂ ಬಂಧು-ಮಿತ್ರರು ಕಾರ್ಯಕ್ರಮದಲ್ಲಿ ಇದ್ದು ಸಹಕರಿಸಿದರು.
