ಕಲಬುರಗಿ:
ಪುರಾಣಗಳಲ್ಲಿ ಉಲ್ಲೇಖವಾಗಿರುವ ಶಿವನಿಗೂ ಶರಣರ ವಚನಗಳಲ್ಲಿ ಬಳಕೆಯಾಗಿರುವ ಶಿವನಿಗೂ ಸಾಕಷ್ಟು ಗೊಂದಲಗಳಿವೆ. ಆದರೆ ಶಿವ ಎಂಬುದೊಂದು ತತ್ವ ಎಂಬುದನ್ನು ನಾವ್ಯಾರೂ ಮರೆಯಬಾರದು ಎಂದು ಪತ್ರಕರ್ತ-ಲೇಖಕ ಡಾ.ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಫಿಲ್ಟರ್ ಬೆಡ್ ಪ್ರದೇಶದ ಮಹಾಂತಜ್ಯೋತಿ ಪ್ರತಿಷ್ಠಾನದ ವತಿಯಿಂದ ಶಿವರಾತ್ರಿ ನಿಮಿತ್ತ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ಶಿವ ವಿಷಯ ಕುರಿತು ಮಾತನಾಡಿದ ಅವರು, ಶಿವ ಎಂದರೆ ಮಂಗಳಕರವಾದದ್ದು, ಶುಭಕರವಾದದ್ದು ಎಂದು ವಚನಕಾರರು ತಿಳಿಸಿದ್ದಾರೆ.
150ಕ್ಕೂ ಹೆಚ್ಚು ವಚನಕಾರರು ತಮ್ಮ 4391 ವಚನಗಳಲ್ಲಿ 8558 ಬಾರಿ ಶಿವ ಪದವನ್ನು ಬಳಸಿದ್ದಾರೆ. ಶಿವ ಎಂಬುದು ಸೃಷ್ಟಿ ಕಾರಣತತ್ವ ಎಂದು ಶರಣರು ಬೋಧಿಸಿದ್ದರು ಎಂದು ಸತ್ಯಂಪೇಟೆ ಹೇಳಿದರು.

ಜಾನಪದರ ದೃಷ್ಟಿಯಲ್ಲಿ ಶಿವ ವಿಷಯ ಕುರಿತು ವಿಮರ್ಶಕ-ಲೇಖಕ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ಶಿವ-ಪಾರ್ವತಿಯ ಪಾತ್ರಗಳು ಆಕಾಶ ಮತ್ತು ಭೂಮಿಯ ತತ್ವ ಹೇಳುತ್ತವೆ. ಶಿವ ಸಗುಣಿ ಎಂಬುದನ್ನು ತಿಳಿಸಿಕೊಡುತ್ತವೆ ಎಂದರು.
ವಿಜ್ಞಾನದ ದೃಷ್ಟಿಯಲ್ಲಿ ಶಿವ ವಿಷಯ ಕುರಿತು ಡಾ. ವಿಜಯಶ್ರೀ ಹಿರೇಮಠ ಮಾತನಾಡಿ, ಶಿವರಾತ್ರಿ ದಿನ ಮಾಡುವ ಜಾಗರಣೆ, ಧ್ಯಾನ ಮತ್ತು ಉಪವಾಸಗಳು ದೇಹ, ಮೆದುಳಿಗೆ ಪೂರಕವಾಗಿವೆ ಎಂದು ಹೇಳಿದರು.

ಪುಸ್ತಕೋದ್ಯಮಿ ಬಸವರಾಜ ಕೊನೇಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಶಂಕರ ಕೋಡ್ಲಾ ನೇತೃತ್ವ ವಹಿಸಿದ್ದರು.
ಸಮಾಜ ಸೇವಕ ಎ.ಎಸ್. ಭದ್ರಶೆಟ್ಟಿ, ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ, ಪ್ರೀತಿ ಅಕ್ಕೋಣೆ ವೇದಿಕೆಯಲ್ಲಿ ಇದ್ದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಡಿವಾಳಯ್ಯ ಕೊರಳ್ಳಿ ಪ್ರಾರ್ಥನೆಗೀತೆ ಹಾಡಿದರು. ಉಮಾಕಾಂತ ಪಾಟೀಲ ವಂದಿಸಿದರು.
