ಚಿತ್ರದುರ್ಗ:
೧೨ನೇ ಶತಮಾನದ ಶಿವಶರಣರಲ್ಲಿ ಸೂಜಿಕಾಯಕದ ರಾಮಿತಂದೆಯವರೂ ಒಬ್ಬರಾಗಿದ್ದಾರೆ. ಇವರ ವಚನಗಳು ಮೇಲ್ನೋಟಕ್ಕೆ ಸುಲಭವಾಗಿ ಅರ್ಥವಾಗುವುದಿಲ್ಲ. ಆಳವಾದ ಅಧ್ಯಯನ ಅಗತ್ಯ. ಇವರ ವಚನಗಳು ಶರೀರವನ್ನು ಒಂದು ನಿರುಪಯುಕ್ತ ಸಾಧನವನ್ನಾಗಿ, ಆತ್ಮವನ್ನು ಚೈತನ್ಯಶಕ್ತಿಯಾಗಿ, ಭಗವಂತನನ್ನು ಸರ್ವವ್ಯಾಪಿಯಾಗಿ ನಿರೂಪಿಸುತ್ತ ಹೋಗುತ್ತಾರೆ. ಅವು ಭಕ್ತರ ವಿವೇಕಕ್ಕೆ ಮತ್ತು ತತ್ವಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ ಎಂದು ಚಿತ್ರದುರ್ಗದ ಪ್ರಧಾನ ಅಂಚೆ ಕಛೇರಿಯ ಅಂಚೆ ಸಹಾಯಕ ಆರ್. ತಿಪ್ಪೇಸ್ವಾಮಿ ತಮ್ಮ ಅನುಭವ ವ್ಯಕ್ತಪಡಿಸಿದರು.
ಅವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕರ್ತರು ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ೩೩ ದಿನಗಳ ಕಾಲ ಏರ್ಪಡಿಸಿರುವ ವಚನ ಕಾರ್ತೀಕದ ೭ನೇ ದಿನದಲ್ಲಿ ಭಾಗವಹಿಸಿ ಶಿವಶರಣ ಸೂಜಿಕಾಯಕದ ರಾಮಿತಂದೆಗಳ ಕುರಿತಾಗಿ ಮಾತನಾಡಿದರು.
ರಾಮಿತಂದೆಯವರ ಪೂರ್ವಾಪರ ವಿಚಾರಗಳು ಸ್ಪಷ್ಟವಾಗಿ ಲಭ್ಯವಿಲ್ಲ. ಸೂಜಿಕಾಯಕದ ರಾಮಿತಂದೆಯ ವಚನಗಳು ಶರಣರ ಕಾಯಕ ಧರ್ಮದ ವಿಚಾರಗಳನ್ನು ಪ್ರಸ್ತುತಪಡಿಸುತ್ತವೆ. ಸೇವಾಭಾವ ಆತ್ಮಸಂಯಮ, ನಿಷ್ಠೆ ಇವು ವಚನಗಳ ಪ್ರಮುಖ ಆಶಯವಾಗಿವೆ ಎಂದರು.

ಇನ್ನೋರ್ವ ಶರಣರಾದ ಸಿದ್ದಮಲ್ಲಪ್ಪ ಅವರ ಬಗ್ಗೆ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಚಂದ್ರಶೇಖರ ಕಂಬಳಿ ಮಾತನಾಡಿ, ಸಿದ್ದಮಲ್ಲಪ್ಪ ೧೭ನೇ ಶತಮಾನದವರಾಗಿದ್ದು ಇವರ ಅನೇಕ ವಚನಗಳು ಲಭ್ಯವಾಗಿವೆ. ವಚನಗಳು ಕೆಲವೊಂದು ಸರಳ ಮತ್ತು ಕಠಿಣ ಸ್ವರೂಪದ್ದಾಗಿವೆ.
ಜನರು ನಂಬುವ ಮೂಢನಂಬಿಕೆ, ಅಂಧಶ್ರದ್ಧೆ ಮತ್ತು ಅಸತ್ಯಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಮನಸ್ಸಿನಲ್ಲಿ ಶುದ್ಧತೆ ಇರಬೇಕು. ಇಂದರಿದ ಲೋಕದ ಸಂಕಷ್ಟಗಳನ್ನು ಧೈರ್ಯವಾಗಿ ನಿಭಾಯಿಸಬಹುದೆಂದರು.
ಶ್ರೀಮುರುಘಾ ಮಠದಲ್ಲಿ ಸಾಧಕರಾಗಿರುವ ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಸಿದ್ದಮಲ್ಲಪ್ಪನವರು ಹಂಪಿ ವಿರೂಪಾಕ್ಷ ವಿಜಯನಗರದ ಸಾಮ್ರಾಜ್ಯದ ಭಾಗದಲ್ಲಿದ್ದ ಒಂದು ಮಠದ ಅಧಿಕಾರಿ, ಅವರು ವಚನಗಳಲ್ಲಿ ಮೌಢ್ಯ ಬಿತ್ತರಿಸಬಾರದು ಮತ್ತು ಅದನ್ನು ನೋಡಿ ಸುಮ್ಮನಿರಬಾರದು ಖಂಡಿಸಬೇಕು ಎಂದಿದ್ದಾರೆ.

ಹಿಂದೆ ಲಿಂಗಾಯತ ಸಮಾಜ ಒಂದಾಗಿತ್ತು. ಈಗ ಸಮಾಜವನ್ನು ಇಬ್ಭಾಗ ಮಾಡುವ ಕೆಲಸ ನಡೆದಿದೆ. ಒಡೆಯುವವರನ್ನು ದೂರ ಇಟ್ಟು ಯಾರು ಒಂದುಗೂಡಿಸುತ್ತಾರೆ ಅಂತಹವರನ್ನು ನಿಮ್ಮ ತಲೆಯ ಮೇಲಿಟ್ಟುಕೊಳ್ಳಿ ಎಂದು ಸೂಜಿ ಕಾಯಕದ ರಾಮಿತಂದೆಯವರು ಹೇಳಿದ್ದರೆಂದು ನುಡಿದರು.
ಸಮಾರಂಭದಲ್ಲಿ ಶಿವಶರಣರಾದ ಸಿದ್ದಮಲ್ಲಪ್ಪ ಹಾಗೂ ಸೂಜಿಕಾಯಕದ ರಾಮಿತಂದೆಯವರ ಒಂದೊಂದು ವಚನಗಳನ್ನು ಜಮುರಾ ಕಲಾವಿದರಾದ ಉಮೇಶ್ ಪತ್ತಾರ್ ಹಾಡಿದರು. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಶ್ರೀನಿಧಿ, ಚಂದನ್ ವಚನ ಪಠಣ ಮಾಡಿದರು. ಅದೇ ವಿದ್ಯಾಲಯದ ಚಂದನಾ ಬಿ. ಸ್ವಾಗತಿಸಿದರು. ಅರುಂಧತಿ ಡಿ. ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಶರಣು ಸಮರ್ಪಣೆ ಮಾಡಿದರು.
ನಂತರ ಕರ್ತುವಿನ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದ ಸುತ್ತ ವಚನ ಭಂಡಾರ ಹೊತ್ತು ಪ್ರದಕ್ಷಿಣೆ ಹಾಕಿ ವಚನ ಮಂಗಲ ಹಾಡಿ ದೀಪಾರತಿ ನೆರವೇರಿಸಲಾಯಿತು.
