ಸಮ ಸಮಾಜ ನಿರ್ಮಾಣದಲ್ಲಿ ಶಿವಶರಣೆಯರ ಪಾತ್ರ ಮಹತ್ವದ್ದು: ಭಾರತಿ ಮದಬಾವಿ

ಬೆಳಗಾವಿ:

ಶರಣರು  ತ್ಯಾಗಮಯ ಜೀವನ ನಡೆಸಿ ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಭಾರತಿ ಮದಬಾವಿ ಅಭಿಪ್ರಾಯಪಟ್ಟರು. ಬಸವಾದಿ ಪ್ರಮಥರು ಕನಸು ಕಂಡ ಜಾತಿ–ವರ್ಗರಹಿತ ಕಲ್ಯಾಣ ಸಮಾಜ ನಿರ್ಮಾಣದಲ್ಲಿ ಶಿವಶರಣೆಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಲಿಂಗಾಯತ ಸಂಘಟನೆ ಆಶ್ರಯದಲ್ಲಿ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ರವಿವಾರ ನಡೆದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ವಚನ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ಶಿವಶರಣೆಯರಾದ ಗಂಗಾಂಬಿಕಾ, ನೀಲಾಂಬಿಕಾ, ಅಕ್ಕನಾಗಮ್ಮ, ದುಗ್ಗಳೆ, ಸುಗ್ಗಳೆ, ಅಕ್ಕಮ್ಮ, ಸತ್ಯಕ್ಕ, ದೂಪದ ಗೊಗ್ಗವ್ವೆ ಸೇರಿದಂತೆ ಅನೇಕ ಶರಣೆಯರು ಕಾಯಕ ತತ್ವವನ್ನು ಪ್ರತಿಪಾದಿಸಿ ದಾಸೋಹ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಮೂಢನಂಬಿಕೆಗಳನ್ನು ದೂರ ಮಾಡುವುದರ ಜೊತೆಗೆ ಅನುಭವ ಮಂಟಪದ ಕಾರ್ಯಗಳನ್ನು ಶ್ರಮಪಟ್ಟು ಮುನ್ನಡೆಸಿದರು. ಕಾಶ್ಮೀರದ ಬೊಂತಾದೇವಿ ಹಾಗೂ ಅಕ್ಕಮಹಾದೇವಿ, ವೀರ ವಿರಾಗಿಣಿಗಳೆಂದು ಖ್ಯಾತರಾಗಿದ್ದರೆ, ಸುಗ್ಗಳೆ ಜೈನಧರ್ಮ ಅನುಸರಿಸಿದ್ದ ರಾಜ ಜಯಸಿಂಹನನ್ನು ಶಿವಭಕ್ತನನ್ನಾಗಿಸಿದ್ದಾಳೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿ.ಪಿ. ಜೇವಣಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಪ್ರಣಿತಾ ವಸ್ತದಮಠ, ಮಹದೇವ ಕೆಂಪಿಗೌಡ್ರ, ಜಯಶ್ರೀ ಚವಲಗಿ, ಸುವರ್ಣ ಗುಡಸ ವಚನಗಾಯನ ಮಾಡಿದರು. ಮಹಾಂತೇಶ ಮೆಣಸಿನಕಾಯಿ ಪರಿಚಯಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ಪ್ರಸಾದ ಹೀರೇಮಠ ದಾಸೋಹ ಸೇವೆ ಸಲ್ಲಿಸಿದರು. ಅವರ 75ನೇ ಜನ್ಮದಿನವೂ ಆಚರಿಸಲಾಯಿತು. ಶಶಿಭೂಷಣ ಪಾಟೀಲ, ವಿರೂಪಾಕ್ಷ ದೂಡ್ಡಮನಿ, ಬಸವರಾಜ ಕರಡಿಮಠ, ಸಿದ್ದಪ್ಪ ಸಾರಪೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *