ಕಲಬುರ್ಗಿ:
ಶಿವಯೋಗಕ್ಕೆ ವಾರ ದಿನಕ್ಕಿಂತ ಲಿಂಗ ಶ್ರೇಷ್ಠವಾಗಿದೆ. ಲಿಂಗಪೂಜೆಗೆ ಎಲ್ಲಾ ವಾರ, ಎಲ್ಲ ದಿನಗಳು ಶ್ರೇಷ್ಠವಾಗಿವೆ ಎಂದು ಶರಣರು ಅಭಿಪ್ರಾಯ ಪಡುತ್ತಾರೆ ಎಂದು ಸಂಶೋಧಕರು, ನಿವೃತ್ತ ಪ್ರಾಧ್ಯಾಪಕರಾದ ಡಾ.ಜಯಶ್ರೀ ದಂಡೆ ಅವರು ಹೇಳಿದರು.
ಬಸವ ಸಮಿತಿ ಅನುಭಾವ ಮಂಟಪ, ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಲಿಂಗೈಕ್ಯ ಬಿ.ಮಹಾದೇವಪ್ಪ ಸ್ಮರಣಾರ್ಥ ಜರುಗಿದ ಅರಿವಿನ ಮನೆ 888ನೇ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.
ಒಬ್ಬ ಶರಣ ಇನ್ನೊಬ್ಬ ಶರಣನೊಂದಿಗೆ ಅನುಭವ ಹಂಚಿಕೊಂಡರೆ ಅದುವೇ ಶಿವರಾತ್ರಿಯಾಗಿದೆ. ಲಿಂಗಧಾರಣೆ ಮಾಡಿದವರಿಗೆ ನಿತ್ಯವು ಶಿವರಾತ್ರಿಯಾಗಿದೆ. ಶರಣ ನಿದ್ರೆಗೈದರೆ ಜಪ, ಎದ್ದು ಕುಳಿತರೆ ಅದೇ ಶಿವರಾತ್ರಿಯಾಗಿದೆ. ಇಂತಹ ಶರಣನ ನಡೆಪಾವನ ನುಡಿ ಪಾವನವಾಗಿರುತ್ತದೆ. ಅಭ್ಯಾಸ ಯೋಗ ನಿಯಮದಿಂದ ಹೊರಬಂದು ಇಷ್ಟಲಿಂಗ ನಿಷ್ಠೆಯಲ್ಲಿ ದಿನವೂ ತಲ್ಲಿನವಾಗಬೇಕೆಂದು ಅಲ್ಲಮಪ್ರಭು ಹೇಳುತ್ತಾರೆ.
ಶಿವಯೋಗಿ ಸಿದ್ಧರಾಮರು ಇಷ್ಟಲಿಂಗ ಧಾರಣೆಗಿಂತ ಮುಂಚೆ ಶೈವ- ಸ್ಥಾವರಲಿಂಗ ಉಪಾಸಕರಾಗಿದ್ದರು. ಲಿಂಗಯೋಗ ಅರಿತು ಲಿಂಗಯೋಗಿಯಾದರು. ಧ್ಯಾನ-ಧಾರಣಾ -ಸಮಾಧಿಗಳು ಎಚ್ಚರವಿದ್ದಾಗಲೇ ಪಡೆಯುವಂಥವು.
ಅಲ್ಲಮಪ್ರಭು ಹೇಳುವಂತೆ ಶರಣರು ಸ್ವತಂತ್ರ ಧೀರರಾಗಿದ್ದಾರೆ ಮತ್ತು ಸ್ವತಂತ್ರ ಆಲೋಚಕರಾಗಿದ್ದಾರೆ. ವಚನಾಮೃತ ಸುಧೆ ಸವಿಯುವ ಮೂಲಕ ನಿಜವಾದ ಶಿವಯೋಗ ಆನಂದಿಸಬೇಕು. ಶಿವಯೋಗ ರೂಢಿಯಿಂದ ಬರುವಂಥದ್ದಾಗಿದೆ.
ಬಸವಣ್ಣ ಯಾವ ವ್ಯಕ್ತಿಯನ್ನು ಕಡಿಮೆ ಎಂದು ಹೇಳಲಿಲ್ಲ. ಅವರು ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಂಡರು. ತಮ್ಮಂತೆ ಅನುಕರಿಸಲು ಜನರನ್ನು ಹೇಳಲಿಲ್ಲ. ಪ್ರತಿಯೊಬ್ಬರೂ ತಮ್ಮನ್ನು ತಾವು ಪರೀಕ್ಷಿಸಿಕೊಂಡು ಶಿವಯೋಗ ಮಾಡಬೇಕು ಎಂದರು.
ಹೊರತಾಗಿ ಯಾರದು ಅಂಧ ಅನುಕರಣೆ ಮಾಡಬಾರದು ಎಂದರು. ಇಷ್ಟಲಿಂಗ ಕಟ್ಟಿಕೊಂಡು ಒಳ್ಳೆಯ ಕೆಲಸ ಮಾಡಬೇಕು. ಶಿವಯೋಗವೆಂದರೆ ಕೇವಲ ತ್ರಿಕಾಲ ಪೂಜೆ ಮಾತ್ರ ಅಲ್ಲ. ನಾವು ಯಾವ ಕಾಯಕದಲ್ಲಿ ನಿರತರಾಗಿರುತ್ತೇವೋ ಅದರಲ್ಲಿಯೇ 24 ಗಂಟೆ ದೇವರ ಆರಾಧನೆಯಲ್ಲಿ ನಿರತನಾಗಿರಬೇಕು ಅದೇ ಶಿವಯೋಗವಾಗಿದೆ.
ಲಿಂಗೈಕ್ಯ ಎಂದರೆ ಸಾವು ಅಲ್ಲ, ಲಿಂಗ ಧ್ಯಾನದಲ್ಲಿಯೇ ಬೇರೆ ಭಾವವಿಲ್ಲದೆ ಬೆರೆಯುವುದೇ ಲಿಂಗೈಕ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಕೂಬಾ, ಡಾ.ವೀರಣ್ಣ ದಂಡೆ, ಉದ್ಯಮಿ ರಾಜೇಂದ್ರ ಕೂಬಾ, ಕಾರ್ಯದರ್ಶಿ ಡಾ.ಆನಂದ ಸಿದ್ಧಾಮಣಿ, ಡಾ.ಕೆ.ಎಸ್.ವಾಲಿ, ಶರಣಗೌಡ ಪಾಟೀಲ ಪಾಳ, ದತ್ತಿ ದಾಸೋಹಿಗಳಾದ ಬಿ.ವೀರಬಸವಂತ, ಭಾರತಿ ಹುಲುಗೋಳ ನಿರೂಪಿಸಿದರು, ಉದ್ದಂಡಯ್ಯ ಭಾಗವಹಿಸಿದರು.
