ಸಿಂಧನೂರು
ನವ್ಹೆಂಬರ್ 11 ರಂದು ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಭವನದಲ್ಲಿ ಲಿಂಗಾಯತ ಮಠಾಧೀಶರು, ಬಸವ ಸಂಸ್ಕೃತಿ ಅಭಿಯಾನದಲ್ಲಿ ಆಯಾಯ ಜಿಲ್ಲೆಗಳಲ್ಲಿ ಅವಿರತವಾಗಿ ಕೆಲಸ ಮಾಡಿದ ಬಸವಭಕ್ತರಿಗೆ ಅಭಿನಂದನೆ ಸಲ್ಲಿಸುವದಕ್ಕಾಗಿ ಸಭೆಯನ್ನು ಆಯೋಜಿಸಿ, ಎಲ್ಲ ಬಸವಪರ ಸಂಘಟನೆಗಳಿಗೆ ಸನ್ಮಾನ ಸ್ವೀಕರಿಸಲು ಆಹ್ವಾನವನ್ನು ನೀಡಲಾಗಿತ್ತು.
ಅದರಂತೆ ರಾಯಚೂರು ಜಿಲ್ಲೆಯಿಂದ ಸುಮಾರು 25 ಜನ ಬಸವಭಕ್ತರೊಂದಿಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಆ ಕಾರ್ಯಕ್ರಮ ಆಯೋಜಿಸಿದ್ದು ಸೂಕ್ತವೇ ಆಗಿದ್ದರೂ ಅದನ್ನು ಇನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಬಹುದಿತ್ತು ಎಂದೆನಿಸಿತು.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜನ ಸಮೂಹ ಸಹಕರಿಸಿದ್ದು, ಸಂಘಟನೆಗಳ ಕರೆಗೆ ಓಗೊಟ್ಟು ಬಂದದ್ದು ಜನರಲ್ಲಿ ಬಸವ ಪ್ರೀತಿ ಜೀವಂತವಾಗಿದೆ ಎನ್ನುವುದನ್ನು ಸ್ಮರಿಸಲಾಯಿತು, ಜೊತೆಗೆ ಅಲ್ಲಲ್ಲಿ ನಡೆಯುವ ನಿಜಾಚಾರಣೆಗಳು, ಮಹಾಮನೆ ಕಾರ್ಯಕ್ರಮಗಳು, ಬಸವತತ್ವ ಕಮ್ಮಟಗಳು, ಅಂತರ್ಜಾಲದಲ್ಲಿ ಪ್ರತಿದಿನವೂ ನಡೆಯುವ ಚಿಂತನೆಗಳ ಒಟ್ಟಾರೆ ಪರಿಣಾಮ ಈ ಜನಸಮೂಹ ಸೇರಲು ಕಾರಣವಾದದ್ದನ್ನು ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ ಅಲ್ಲಿ ನೆನಪಿಸಿಕೊಂಡದ್ದು ಸರಿಯಾದ ಚಿಂತನೆ ಎನಿಸಿತು.

ಸಾಣೇಹಳ್ಳಿ ಶ್ರೀಗಳು ಪ್ರಸ್ತಾಪಿಸಿದ, ಮಠಾಧೀಶರು ಮುಂದೆ ಮಾಡಬೇಕಾದ ಕಾರ್ಯಸೂಚಿ ನೆನಪಿಸಿದ್ದು ಅಗತ್ಯ ಸಲಹೆ ಎನಿಸಿತು. ಪ್ರತಿ ಮಠಗಳಲ್ಲಿ ಬಸವತತ್ವ ಇತಿಹಾಸ, ಸಿಂದ್ಧಾಂತ, ನಿಜಾಚಾರಣೆ ಕಮ್ಮಟಗಳನ್ನು ನಡೆಸಬೇಕು ಎನ್ನುವ ಮಾತು ಇಂದಿನ ಅಗತ್ಯತೆ ಎನಿಸಿತು.
ಈ ಸಮಾರಂಭಕ್ಕೆ “ಬಸವ ಸಂಸ್ಕೃತಿ ಪಸರಿಸಲು ಅನುಸರಿಸಬೇಕಾದ ಮುಂದಿನ ಕಾರ್ಯಸೂಚಿಗಳ” ಸಭೆ ಎಂದು ಹೆಸರಿಸಿ ಕರೆದಿದ್ದರೆ ಹೆಚ್ಚು ಅರ್ಥಪೂರ್ಣ ಕಾರ್ಯಕ್ರಮ ಆಗುತ್ತಿತ್ತು. ಬಸವಭಕ್ತರ ತುಡಿತವೂ ಅದೇ ಆಗಿತ್ತು.
ಕಾರ್ಯಕರ್ತರಿಗೆ ಸನ್ಮಾನದ ಸಂಧರ್ಭದಲ್ಲಿ ವ್ಯವಸ್ಥೆಯನ್ನು ಸರಿಯಾಗಿ ಅನುಸರಿಸದಿರುವದು ಬೇಸರದ ಸಂಗತಿಯಾಗಿ ಕಂಡು ಬಂದಿತು. ಅಭಿಯಾನ ಪ್ರಾರಂಭವಾದ ಸ್ಥಳದಿಂದ ಮುಗಿಸಿದ ಸ್ಥಳದ ಆಧಾರದ ಮೇಲೆ ಸತ್ಕಾರ ಮಾಡಿ, ಮೊದಲೇ ಬಸವಭಕ್ತರು ಅಲ್ಲಿರುವಂತೆ ಸೂಚಿಸಿದ್ದರೆ ಇನ್ನೂ ಚಂದವಾದ ಕಾರ್ಯಕ್ರಮ ಆಗುತ್ತಿತ್ತು. ಸನ್ಮಾನ ಮಾಡಿಸಿಕೊಳ್ಳಲು ಭಕ್ತರು ಸಾಲಲ್ಲಿ ನಿಂತು ಸಾಗಬೇಕಾಗಿದ್ದು ಸನ್ಮಾನದ ಅರ್ಥವನ್ನೇ ಪ್ರಶ್ನಿಸುವಂತಿತ್ತು.
ಕಾರ್ಯಕ್ರಮದಲ್ಲಿ ಬಸವ ಸಂಸ್ಕೃತಿಯ ಟೀಕಾಕಾರರಿಗೆ ಹಂದಿಗುಂದದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿಯವರ “ನಮ್ಮ ತಪ್ಪಿಲ್ಲದಿದ್ದರೆ ಎದೆಯ ಮೇಲೆ ಕಾಲಿಟ್ಟು ಮುನ್ನಡೆಯುತ್ತೇವೆ” ಎನ್ನುವ ಮಾತು, ನನ್ನನ್ನು ಯಾವ ಅರ್ಥದಲ್ಲಿ ಇದನ್ನು ಗ್ರಹಿಸಬೇಕು ಎನ್ನುವ ಚಿಂತೆಗೆ ತಳ್ಳಿತು. ಇದು ಟೀಕಾಕಾರರಿಗೆ ಕೊಟ್ಟ ಉತ್ತರ ಎನ್ನುವದು ಸ್ಪಷ್ಟ, ಆದರೆ ಇದು ಆಕ್ರೋಶದಿಂದ ಬಂದ ನುಡಿ ಎನ್ನುವದನ್ನ ಒಪ್ಪಲು ನನಗೆ ಸಾಧ್ಯ ಆಗಲಿಲ್ಲ. ವಚನಗಳ ಬೆಳಗಿನಲ್ಲಿ ಬದುಕುವ ಮಠಾಧೀಶರು, ಬಸವಭಕ್ತರು ಎಂದಿಗೂ ಆಕ್ರೋಶ ಗೊಳ್ಳುವದಿಲ್ಲ, ಅದು ಬಸವ ಕಲಿಸಿದ ಭಾಷೆ.

ಇಂದಿನ ಮುಕ್ತ ವ್ಯವಸ್ಥೆಯಲ್ಲಿಯೇ ಇಂತಹ ಪರಿಸ್ಥಿತಿ ಆದರೆ ಬಸವಣ್ಣನವರಿಗೆ ಅಂದು ಇದಕ್ಕಿಂತ ನೂರುಪಟ್ಟು ಟೀಕೆಗಳು, ವಿರೋಧಗಳು, ಅವಮಾನಿಸುವ ಮಾತುಗಳು ಬಂದಿರಬಹುದು. ಬಸವಣ್ಣನವರ ಸ್ವಜಾತಿ ಬಂಧುಗಳೇ ಅವರನ್ನು ಅವಮಾನಿಸುವ ಪ್ರಯತ್ನ ಮಾಡಿದರು, ಆದರೂ ಸಹ ಬಸವಣ್ಣನವರು ಅವರೆಲ್ಲರ ಎದೆಯ ಮೇಲೆ ಕಾಲಿಟ್ಟು ತಮ್ಮ ಆಂತರ್ಯದ ಸತ್ಯವನ್ನು ಹೊರಹಾಕಿದರು.
ಬಸವಣ್ಣನವರು ದೇವ ಸ್ವರೂಪದ ಬಗ್ಗೆ ಬಿತ್ತಿದ ಮೌಢ್ಯಗಳ ಎದೆಯ ಮೇಲೆ ಕಾಲಿಟ್ಟರು, ಅವುಗಳ ಬೇರುಗಳನ್ನು ಕಿತ್ತಿ ಬೀಸಾಕಿದರು, ದೇವರ ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ, ಜಾತೀಯತೆ, ಲಿಂಗ ಅಸಮಾನತೆ, ಕರ್ಮಸಿದ್ಧಾಂತ, ಕ್ರೌರ್ಯಗಳೆಂಬ ಅನಿಷ್ಟ ಚಿಂತನೆಗಳ ಎದೆಯ ಮೇಲೆ ಕಾಲಿಟ್ಟು ಧರ್ಮವನ್ನು ಕಟ್ಟಿದರು. ಇದನ್ನು ಬೆಂಬಲಿಸಿ ದೂರ ದೂರದಿಂದ ಎಲ್ಲ ಧರ್ಮಗಳ ಹಿನ್ನೆಲೆಯ ಸಾಧಕರು, ಕಾಯಕ ಜೀವಿಗಳು ಅನುಭವ ಮಂಟಪಕ್ಕೆ ಬಂದರು. ಅದು ಇಂದಿನ ಅವಶ್ಯಕತೆ ಎನ್ನುವದನ್ನು ನೆನಪಿಸಲು ಶಿವಾನಂದ ಸ್ವಾಮೀಜಿ ಆ ಮಾತಿನ ಮೂಲಕ ಸರ್ವರಿಗೂ ನೆನಪಿಸಿದರು ಎನ್ನುವದು ಸರಿಯಾದ ಅರ್ಥ ಎನಿಸಿತು.

ಅವರು ಬಳಸಿದ ಶಬ್ದ “ನಮ್ಮ ತಪ್ಪಿಲ್ಲದಿದ್ದರೆ ” ಎನ್ನುವದು ಸಹ ಎಲ್ಲ ಬಸವಭಕ್ತರು, ಮಠಾಧೀಶರು ಸದಾ ನೆನಪಿನಲ್ಲಿ ಇಟ್ಟುಕೊಂಡು ಮುನ್ನಡೆಯುವ ಅವಶ್ಯಕತೆಯನ್ನು ಜ್ಞಾಪಿಸಿತು.
ಟೀಕಾಕಾರರು ಮಾಡಿದ ಎಲ್ಲ ಟೀಕೆಗಳಲ್ಲಿ ನಮ್ಮನ್ನು ಎಚ್ಚರಿಸುವಂತ ನುಡಿಗಳಿವೆ, ಅವುಗಳನ್ನು ಆತ್ಮಸಾಕ್ಷಿಯ ಪ್ರಜ್ಞಾ ನೆಲೆಯಲ್ಲಿ ಚಿಂತಿಸಿ ಮುಂದುವರಿಯಬೇಕಾಗಿದೆ, ನಮ್ಮಿಂದ ನೈತಿಕವಾಗಿ ತಪ್ಪಾಗದಂತೆ ಬಸವಪ್ರಣೀತ ಹೃದಯಗಳು ಎಚ್ಚರಿಕೆ ವಹಿಸುವದು ಇಂದಿನ ಅಗತ್ಯತೆಯಾಗಿದೆ. ಇದು ಹೆಚ್ಚು ಪರಿಣಾಮಕಾರಿ ಅಸ್ತ್ರವಾಗುತ್ತದೆ. ಶುದ್ಧತ್ವ ಇಲ್ಲದಿದ್ದರೆ ಭಕ್ತಿ ಸಾಧ್ಯವಿಲ್ಲ. ಆ ನೆಲೆಯಲ್ಲಿ ಸಾಗೋಣವೆ?.

ಉತ್ತಮ ವಿಮರ್ಶೆ
ಬಸವ ಪಾದಕರ್ಪಿತ.ಶರಣು ಶರಣಾರ್ಥಿಗಳು.
ಶರಣು ಶರಣಾರ್ಥಿಗಳು ,
ಮಠಾಧೀಶರ ಒಕ್ಕೂಟದ ಅಭಿಯಾನ ಕರ್ನಾಟಕದ ಪ್ರತಿ
ಜಿಲ್ಲೆಯಲ್ಲಿ ಅಭೂತಪೂರ್ವ ಯಶಸ್ಸು. ಕಂಡಿತುಮತ್ತು
ಅಕ್ಟೋಬರ್ ಐದನೇ ತಾರೀಕಿನಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಬಸವ ಭಕ್ತರು ಕರ್ನಾಟಕ ಅಲ್ಲದೆ ಆಂಧ್ರ,ಮಹಾರಾಷ್ಟ್ರ, ತಮಿಳುನಾಡು, ಎಲ್ಲರಾಜ್ಯದ ಬಸವ ಭಕ್ತರು ಮತ್ತು 350ರಿಂದ400ಜನ ಮಠಾಧೀಶರು ಉಪಸ್ಥಿತಿ. ನೋಡಿದರೆ ಅದು ಮಠಾಧೀಶರ ಒಕ್ಕೂಟದ ಅಭಿಯಾನದ ಸಮಾರೋಪ ಕಾರ್ಯಕ್ರಮ ಎಂದು ನನಗೆ ಅನ್ನಿಸಲಿಲ್ಲ ಬದಲಾಗಿ ಅದು “ಲಿಂಗಾಯತ ಅಲ್ಪ ಸಂಖ್ಯಾತ ಸಮುದಾಯ” ಎನ್ನುವ ಹೋರಾಟದ
ಆರಂಭದ ಘೋಷಣೆ ಎನ್ನುವ ಮುನ್ಸೂಚನೆಯ ದ್ವನಿ ಅದಾಗಿತ್ತು, ಅಲ್ಲಿಯ ಶ್ರೀಗಳ ಮಾತುಗಳು ಮಠಾಧೀಶರು
ಮತ್ತು ಬಸವಭಕ್ತರಿಗೆ ಎಚ್ಚರಿಕೆಯ ಸಂದೇಶವಿತ್ತು,
ಸಮಾವೇಶದ ನಂತರದ ಬೆಳವಣಿಗೆಗಳು ನಮ್ಮೆಲ್ಲರಿಗೂ
ಗೊತ್ತು ,ಲಿಂಗಾಯತ ಮಠಾಧೀಶರ ಒಕ್ಕೂಟದ ಯಶಸ್ಸು
ಕೆಲವರಿಗೆ ನುಂಗಲಾರದ ತುತ್ತು, ಸೀಮಿತ ವರ್ಗದ ಒಂದು ಸಂಘದ ಕೆಲವರು,(ಒಂದು ರಾಜಕೀಯ ಪಕ್ಷದ) ಲಿಂಗಾಯತ ಮಠಾಧೀಶರಿಂದಲೇ ಲಿಂಗಾಯತ ಒಕ್ಕೂಟಕ್ಕೆ
ಅವಮಾನವಾಗುವಂತೆ ಮಾತನಾಡಿಸಿದರು, ಚೆನ್ನಮ್ಮನ ಆಸ್ಥಾನದಲ್ಲಿ ಮಲ್ಲಾಶೆಟ್ಟಿ, ಮೀರಸಾದಕ್.ಥರದ ಜನರು ಇರುವದು ಸಹಜವೇ, ಅವರುಗಳು ಶಿಖಂಡಿಗಳು ಪಾಕಂಡಿತನ ಮಾಡುತ್ತಲೇ ಇರುತ್ತಾರೆ, ಈ ಕಾರಣದಿಂದ
ಅದೇರೀತಿ ಕೂಡಲ ಸಂಗಮದಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಸುಮಾರು 800/900 ಜನ ಸೇರಿದ್ದು ಸಹಜವೇ ಆಗಿತ್ತು, ನಾವು ಲಿಂಗಾಯತರು ಯಾರಿಗೂ ಹೆದರುವ ಮಾತಿಲ್ಲ, ಸ್ವಾಮೀಜಿಗಳು ಹೇಳಿದಂತೆ
“ಆನೆಯ ಮೇಲೆ ಹೂ ವ ನ ಸ್ವಾನ ಕಚ್ಛ ಬಲ್ಲದೆ”
ಎನ್ನುವ ಮಾತು “ಮೊದಲ ಸಂಗಮ ಶರಣರು ಸ್ವಾತಂತ್ರ್ಯ
ಧೀರರು,ಎನ್ನುವುದನ್ನು ಎಚ್ಚರಿಸಿತು, ಒಕ್ಕೂಟದಲ್ಲಿ ಕೆಲಸ ಮಾಡಿದ ವರಿಗೆ ಸನ್ಮಾನದ ಅಗತ್ಯ ಇರಲಿಲ್ಲ, ಆದರೂ. ತಾವು ಮಾಡಿದ ಈ ಕಾರ್ಯ ಇನ್ನೂ ವ್ಯವಸ್ಥಿತವಾಗಿ
ಮಾಡಬಹುದಿತ್ತು, ನಮ್ಮ ಮನೆಯಲ್ಲಿ,ನಾವು ,ಸಮ್ಮವರಿಂದ ಸನ್ಮಾನ ಪಡೆಯುವದು ಬೇಕಿರಲಿಲ್ಲ
ಅದನ್ನು ಅಭಿಯಾನ ಚಲಿಸಿದ ಜಿಲ್ಲೆಗಳ
ಬಸವಾಭಿಮಾನಿ ಕಾರ್ಯ ಕರ್ತರ ನ್ನು( ಬಸವನ ಬಾಗೇವಾಡಿಯಿಂದ ಬೆಂಗಳೂರಿನ ವರೆಗೆ ) ಕ್ರಮವಾಗಿ
ಕರೆದು ಸನ್ಮಾನ ಮಾಡಬಹುದಿತ್ತು,ಆದರೆ ಹಾ ಗಾ ಗ
ಲಿಲ್ಲ,, ಇರಲಿ ನಮ್ಮದೇ ಮನೆ ,ನಮ್ಮದೇ ಕಾರ್ಯಕ್ರಮ,
“ಪರಮ ಪದವಿಯು ನಿಮ್ಮ ಎದೆಯಲ್ಲಿ ಇರಿದು ಕೊಳ್ಳಿ”
“ಬೇಡ ಎಂದು ಬದುಕಿದರು ನಮ್ಮ ಶರಣರು, ನಾವು
ಲೌಕಿಕದ ಪದವಿ ಬೇಡ ಎನ್ನುವದು ನೆನಪಿರಬೇಕು.
ಅಲ್ಲವೇ?
ಶರಣುಗಳು ತಮ್ಮೆಲ್ಲ ಜಂಗಮ ಪಾದಗಳಿಗೆ
ಮುದ್ದನ ಗೌಡರ ವಚಾರಗಳು ಸರಿಯಾಗಿವೆ. ಈ ಸಂಘಪರಿವಾರಿಗಳಿಗೆ ಬುದ್ದಿಕಲಿಸಬೇಕು. ಧಿಕ್ಕರಿಸಬೇಕು
ಎದೆಯಮೇಲೆ ಕಾಲಿಡುವುದು ಎಂದ್ರೆ, ಮೂಢ ನಂಬಿಕೆಗಳನ್ನು ಮೆಟ್ಟುವುದೆಂದು ಅರ್ಥ. ತಮ್ಮ ತಪ್ಪಿlla ದಿದ್ದರೆ ಅಂದರೆ, ವಚನಗಳ ಅರ್ಥ ಸಮರ್ಥವಾಗಿ ಪ್ರತಿಪಾದಿಸುವುದು. ಎಂದು ಅರ್ಥ. ಇದಕ್ಕೆ ವ್ಯತಿರಿಕ್ತವಾಗಿ ಬೇರೆ ಅರ್ಥ ಇಲ್ಲ. ಇತರೆ ಶರಣರು ಬೇರೆ ಅರ್ಥದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶರಣು ಶರಣಾರ್ಥಿ ಎಲ್ಲರಿಗೂ ಶುಭವಾಗಲಿ