ಬೀದರ
ಶ್ರವಣ ಎಂದರೆ ಕೇಳುವುದು ಎಂದರ್ಥ; ಈ ಶ್ರವಣ ಎಂಬ ಪದದಿಂದಲೇ ಶ್ರಾವಣ ಎಂಬ ಉಕ್ತಿ ನಿಷ್ಪನ್ನವಾಗಿದೆ. ವರ್ಷಪೂರ್ತಿಯಾಗಿ ಸಾಂಸಾರಿಕ ಭಾವದಲ್ಲಿ ಜೀವನ ನಡೆಸುತ್ತಾ, ಅನೇಕ ಕಷ್ಟ ಕಾರ್ಪಣ್ಯದಲ್ಲಿ ಬಸವಳಿದ ಜೀವಾತ್ಮನು ಒಂದು ತಿಂಗಳಾದರೂ ಸದ್ಗುರು ಸಾನಿಧ್ಯದಲ್ಲಿ ಕುಳಿತು ಆಧ್ಯಾತ್ಮಿಕ ಪ್ರವಚನವನ್ನು ಶ್ರವಣ ಮಾಡಬೇಕೆಂಬ ಉದ್ಧೇಶದಿಂದ ನಮ್ಮ ಭಾರತ ಸಂಸ್ಕೃತಿಯ ಪೂರ್ವಿಕರು ಶ್ರಾವಣ ಮಾಸ ಎಂದು ಈ ತಿಂಗಳಿಗೆ ವಿಶೇಷ ಸ್ಥಾನ ಮಾನವನ್ನು ಕಲ್ಪಿಸಿದ್ದಾರೆ.

ಪ್ರಾಕೃತಿಕವಾಗಿವಾಗಿಯೂ ಈ ಮಾಸವು ಉತ್ತಮ ವಾತಾವರಣದಿಂದ ಕೂಡಿದೆ. 27 ನಕ್ಷತ್ರಗಳು ಏಕಕಾಲದಲ್ಲಿ ಕೂಡಿ ಮಳೆಯನ್ನು ಧರೆಗೆ ತರಿಸುವುದರ ಮೂಲಕ ಈ ಇಳೆಯನ್ನು ತಂಪಾಗಿಸುತ್ತವೆ. ಜೊತೆಗೆ ಮಾನವರ ಜೀವನ ತಂಪಾಗಿಸಲು ತತ್ವಜ್ಞಾನ ಕೋವಿದನಾದ ಸದ್ಗುರುವಿನ ಸಾನಿಧ್ಯವು ಪ್ರಾಮುಖ್ಯತೆ ಪಡೆದಿದೆ. ನವವಿಧ ಭಕ್ತಿಗಳಾದ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನಾ, ವಂದನಾ, ದಾಸ್ಯ, ಸಂಖ್ಯ, ಆತ್ಮ ನಿವೇದನ, ಇವುಗಳಲ್ಲಿ ಅತ್ಯಂತ ಶ್ರೇಷ್ಟ ಮತ್ತು ಮೊದಲ ಭಕ್ತಿ ಎಂದರೆ ಶ್ರವಣ ಭಕ್ತಿಯಾಗಿದೆ ಎಂದು ಗುಣತೀರ್ಥ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಬೀದರಿನ ಕೊಳಾರ(ಕೆ) ಗ್ರಾಮದ ಬಸವ ಮಂಟಪದಲ್ಲಿ ಶ್ರಾವಣ ಮಾಸ ಪ್ರಯುಕ್ತ ರಾಷ್ಟ್ರೀಯ ಬಸವದಳ ಹಮ್ಮಿಕೊಂಡ ಜೀವನ ದರ್ಶನ ಪ್ರವಚನದಲ್ಲಿ ದಿವ್ಯ ಸಾನಿಧ್ಯ ವಹಿಸಿಕೊಂಡು ಪ್ರವಚನ ನಡೆಸಿಕೊಟ್ಟ ಪೂಜ್ಯರು, ಕೇವಲ ಪ್ರಾಣಿಯಾದ ಮಾನವ ಮಹಾಮಾನವನಾಗಲು ಮೊದಲು ಶ್ರವಣ ಭಕ್ತಿಯನ್ನು ಮಾಡಬೇಕು ಅಂದರೆ ಉತ್ತಮವಾದ ಆಧ್ಯಾತ್ಮಿಕ ವಿಚಾರಗಳನ್ನು ಕೇಳಬೇಕು ನಂತರ ಅವುಗಳನ್ನು ಜೀವನದಲ್ಲಿ ಆಚರಣೆಗೆ ತರಬೇಕು. ಹೀಗೆ ಅರಿವು ನೀಡಿ ಆಚಾರ ಮಾರ್ಗಕ್ಕೆ ಕೊಂಡೊಯ್ಯಲು ಸದ್ಗುರು ನಮ್ಮ ಜೀವನದ ಮಹಾಶಿಲ್ಪಿಯಾಗಿ ಕಾರ್ಯ ಮಾಡುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬೀದರಿನ ಲಿಂಗಾಯತ ಸಮಾಜದ ಅಧ್ಯಕ್ಷರಾದ ಕುಶಲರಾವ ಪಾಟೀಲ ಖಾಜಾಪೂರು ಅವರು ಮಾತನಾಡಿ, ಮಾನವ ಜೀವನ ದೇವರು ಕೊಟ್ಟ ವರದಾನವಾಗಿದೆ, ಅದನ್ನು ಅರಿಯಲು ಆಗಾಗ ಗುರುಗಳ ಪ್ರವಚನಗಳನ್ನು ಆಲಿಸಬೇಕು. ಪೂಜ್ಯರು ಜ್ಞಾನಿಗಳಾಗಿದ್ದು; ಅವರ ಜ್ಞಾನವನ್ನು ಒಂದು ತಿಂಗಳು ಸದುಪಯೋಗ ಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶಕುಂತಲಾ ಬೆಲ್ದಾಳೆ ಮಾತನಾಡಿ, ಬದುಕಿನ ಏರು ಪೇರುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಇಂದಿನ ಮೊಬೈಲ್ ಯುಗದಲ್ಲಿ ಮನಸ್ಸಿನ ನಿಯಂತ್ರಣ ಸಾಧಿಸಲು ಆಧ್ಯಾತ್ಮಿಕ ಮಾರ್ಗಕ್ಕೆ ಮರಳಬೇಕಾಗಿದೆ. ಕೊಳಾರ ರಾಷ್ಟ್ರೀಯ ಬಸವ ದಳದವರು ಅತ್ಯಂತ ಶಿಸ್ತಿನಿಂದ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.
ವೇದಿಕೆ ಮೇಲಿದ್ದು ಮಲ್ಲಿಕಾರ್ಜುನ ಶಂಭು ಮಾತನಾಡಿದರು.

ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಸೋಮಶೇಖರ ಪಾಟೀಲ ಗಾದಗಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಕೊಳಾರ (ಕೆ) ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಶಾಂತ ಶರಗಾರ, ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಅಶೋಕ ಶಂಭು, ಮಹಾದೇವಪ್ಪ ತೇಲಿ, ಬಸವಕುಮಾರ ಪಾಪಡೆ ಉಪಸ್ಥಿತರಿದ್ದರು.
ರವಿ ಪಾಪಡೆ ಸ್ವಾಗತಿಸಿದರೆ ಗುಂಡಪ್ಪ ಹುಡಗೆ ನಿರೂಪಿಸಿದರು, ರವಿ ಶಂಭು ವಂದಿಸಿದರು.