‘ಮಕ್ಕಳ ಶ್ರೇಯಸ್ಸಿಗೆ ಜೀವನವನ್ನೇ ಸಮರ್ಪಿಸಿದ ಪೂಜ್ಯ ಶಿವಕುಮಾರ ಶ್ರೀಗಳು’

ಬಸವ ಮೀಡಿಯಾ
ಬಸವ ಮೀಡಿಯಾ

‘ಸಿದ್ಧಗಂಗಾಶ್ರೀ’ ಮತ್ತು ‘ಸಂಘ ಸಿರಿ’ ಪ್ರಶಸ್ತಿ ಪ್ರದಾನ

ತುಮಕೂರು:

ಶ್ರೀಮಠದ ಬೆಳವಣಿಗೆಯ ಪ್ರತಿ ಹಂತದಲ್ಲು ಪೂಜ್ಯ ಶಿವಕುಮಾರ ಶ್ರೀಗಳ ಶ್ರಮ ಇದೆ. ಮಠದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವರು ಜೀವನವನ್ನೇ ಸಮರ್ಪಿಸಿಕೊಂಡಿದ್ದರು ಎಂದು ಸಿದ್ದಗಂಗಾ ಮಠಾಧ್ಯಕ್ಷ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ಸಿದ್ಧಗಂಗಾಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ “ಸಿದ್ಧಗಂಗಾಶ್ರೀ’ ‘ಸಂಘ ಸಿರಿ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಶಿವಕುಮಾರ ಶ್ರೀಗಳ ಮೇಲಿನ ಭಕ್ತಿ, ಶ್ರದ್ಧೆ, ಅಭಿಮಾನ, ಪ್ರೀತಿಯಿಂದ ಹಳೆಯ ವಿದ್ಯಾರ್ಥಿಗಳು ಈ ಸಮಾವೇಶಕ್ಕೆ ನಾಡಿನೆಲ್ಲೆಡೆಯಿಂದ ಆಗಮಿಸಿದ್ದಾರೆ. ಇದೊಂದು ಕೃತಜ್ಞತಾ ಸಭೆ ಅಂದರೆ ತಪ್ಪಾಗಲಾರದು. ಶ್ರೀಮಠವು ಎಂದೂ ಏನನ್ನು ಬೇಡುವುದಿಲ್ಲ. ಸಂಘಕ್ಕೆ ಯಾವ ನಿಧಿಯು ಬೇಡ. ಹಳೆಯ ವಿದ್ಯಾರ್ಥಿಗಳೇ ನಮ್ಮ ಪಾಲಿನ ನಿಧಿ ಎಂದರು.

ಪರಮಪೂಜ್ಯರಿಗೆ ಹಳೆಯ ವಿದ್ಯಾರ್ಥಿಗಳ ಕಂಡರೆ ಅಭಿಮಾನ, ಪ್ರೀತಿ ಇತ್ತು‌. ನಿಮ್ಮಲ್ಲಿ ಪೂಜ್ಯರನ್ನು ಕಂಡಷ್ಟು ಖುಷಿಯಾಗುತ್ತಿದೆ ಎಂದರು.

ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಗುರಿ ಹೊಂದಿದ್ದ ಶ್ರೀಗಳು, ಮಠದಲ್ಲಿ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ದಾಸೋಹ ನೀಡಿದ್ದಲ್ಲದೆ ಗ್ರಾಮೀಣ ಭಾಗದಲ್ಲಿ ಗ್ರಾಮಾಂತರ ಶಾಲೆಗಳನ್ನು ತೆರೆದು ಅವರನ್ನು ಅಕ್ಷರಸ್ಥರನ್ನಾಗಿಸುವುದರ ಜತೆಗೆ ಸಂಸ್ಕಾರವನ್ನು ಕಲಿಸಿ ಉತ್ತಮ ಬದುಕು ರೂಪಿಸಿ ಕೊಳ್ಳಲು ಅವಕಾಶ ಕಲ್ಪಿಸಿದರು. ಶ್ರೀಗಳ ಆಶಯದಂತೆ ನಾವೆಲ್ಲಾ ಬದುಕೋಣ ಎಂದರು.

ಹಳೆಯ ವಿದ್ಯಾರ್ಥಿಗಳು ವೈಯಕ್ತಿಕ ಬದುಕು, ವೃತ್ತಿ ಬದುಕಲ್ಲು ಪ್ರಾಮಾಣಿಕತೆ ತೋರಿ ಮಠದ ಕೀರ್ತಿಯನ್ನು ಬೆಳಗಿದ್ದೀರಾ. ಶ್ರೀಗಳ ಆಶೀರ್ವಾದ ಪಡೆದು ಬೆಳೆದಿರುವ ನೀವುಗಳು ಮಠಕ್ಕೆ ಬರುವುದೇ ನಮಗೆ ಪುಣ್ಯವೆಂದು ಭಾವಿಸಿದ್ದೀವಿ ಎಂದರು.

ಸಿದ್ಧಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಸ್ವೀಕರಿಸಿ ಮೈಸೂರಿನ ಡಾ.ಎಸ್​.ಪಿ. ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ. ಶರತ್​ ಕುಮಾರ್​ ಮಾತನಾಡಿದರು.

ಕೆಎಸ್​ಒಯು ಕುಲಪತಿ ಪ್ರೊ. ಶರಣಪ್ಪ ಹಲಸೆ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ, ಸಂದ ಕಾರ್ಯದರ್ಶಿ ಕೆ.ಎಚ್​. ಶಿವರುದ್ರಯ್ಯ, ಎಸ್​. ಶಿವಕುಮಾರ್​, ವಿದ್ವಾನ್​ ಎಂ.ಜಿ. ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾಗಿದ್ದ ಡಾ.ಎಂ.ಎನ್​. ಚನ್ನಬಸಪ್ಪ ಅವರನ್ನು ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಶಿಕ್ಷಣ, ಆಡಳಿತ ಹಾಗೂ ಶ್ರೀಮಠಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಯನ್ನು ಪರಿಗಣಿಸಿ ಚನ್ನಬಸಪ್ಪ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಎಂಎನ್​ಸಿ ಪುತ್ರಿ ಶ್ರೀಮತಿ ಹೇಮಾ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 1 ಲಕ್ಷ ರೂ. ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಮೈಸೂರಿನ ಡಾ.ಎಸ್​.ಪಿ. ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ. ಶರತ್​ ಕುಮಾರ್​ಗೆ ಸಿದ್ಧಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಹೊಂದಿದೆ.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಂಘದ ಹಳೆಯ ವಿದ್ಯಾರ್ಥಿಗಳಾದ ದುಗ್ಗಹಟ್ಟಿಯ ಪಿ. ವೀರಭದ್ರಪ್ಪ, ತುಮಕೂರಿನ ಎಚ್​.ಬಿ. ನಂಜುಂಡಯ್ಯ, ಎಂ.ಎಸ್​. ದಶರಥರಾಮಯ್ಯ, ಗೆದ್ದಲಗಟ್ಟೆ ಎಂ. ಸಿದ್ದಯ್ಯ, ಬೆಂಗಳೂರಿನ ಜಿ. ನಾಗಸುಂದರ್​, ದಾವಣಗೆರೆ ಸಿ.ಕೆ. ಸಿದ್ದಪ್ಪ ಅವರಿಗೆ ಸಂಘಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *