ಶರಣ ಧರ್ಮ ಅರಿಯಲು ಚೆನ್ನಬಸವಣ್ಣನವರ ವಚನ ಓದಿ

ಬೀದರ:

ಶರಣ ಧರ್ಮ ಅರಿಯಲು ಚೆನ್ನಬಸವಣ್ಣನವರ ವಚನಗಳನ್ನು ಓದಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು. ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಈಚೆಗೆ ನಡೆದ 268ನೇ ಮಾಸಿಕ ಶರಣ ಸಂಗಮ ಹಾಗೂ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ  ಮಾತನಾಡಿದರು.

ಚೆನ್ನಬಸವಣ್ಣನವರ ವಚನಗಳು ಬಸವಪ್ರಣೀತ ಲಿಂಗಾಯತಕ್ಕೆ ತಾತ್ವಿಕತೆ ಸಾರುತ್ತವೆ ಎಂದು ತಿಳಿಸಿದರು.ಚೆನ್ನಬಸವಣ್ಣನವರ ಹೆಸರೇ ರೋಮಾಂಚನ. ಚೆನ್ನಬಸವಣ್ಣನವರನ್ನು ಬಸವಣ್ಣನವರು ಬಿತ್ತದೆ ಬೆಳೆಯದೆ, ಬೆಳೆದ ಹೆಬ್ಬೆಳಿಸಿನ ರಾಶಿ ಎಂದು ಬಣ್ಣಿಸಿದ್ದಾರೆ ಎಂದು ಹೇಳಿದರು.

ಕಿರಿಯ ವಯಸ್ಸಿನಲ್ಲಿಯೇ ಅಪಾರ ಜ್ಞಾನವಂತರಾಗಿ ಅನುಭವ ಮಂಟಪದಲ್ಲಿ ಮಿಂಚಿದರು. ಹುಟ್ಟುತ್ತಲೇ ಪರಿಮಳ ಬೀರಿದ ಅವರು ಅಲ್ಲಮರ ಆಗಮನ, ಸಿದ್ಧರಾಮರ ಇಷ್ಟಲಿಂಗ ದೀಕ್ಷೆಯಂತಹ ಮಹತ್ವದ ಪ್ರಸಂಗಗಳನ್ನು ಚಾಕಚಕ್ಯತೆಯಿಂದ ನಿಭಾಯಿಸಿ ಸೈ ಎನಿಸಿಕೊಂಡರು ಎಂದು ತಿಳಿಸಿದರು.

ವಯಸ್ಸಿನಲ್ಲಿ ತನಗಿಂತ ಹಿರಿಯರಾದ ಸೊನ್ನಲಾಪುರದ ಸಿದ್ಧರಾಮರಿಗೆ ದೀಕ್ಷೆ ನೀಡಿದ್ದು ಅವರ ಆಧ್ಯಾತ್ಮದ ಎತ್ತರಕ್ಕೆ ಸಾಕ್ಷಿಯಾಗಿದೆ. ಬಸವಣ್ಣನವರ ಹೆಗಲೆಣೆಯಾಗಿ ಕಲ್ಯಾಣ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಚನ್ನಬಸವಣ್ಣ ಯುವ ಪೀಳಿಗೆಗೆ ಆದರ್ಶ ಎಂದು ಹೇಳಿದರು.

ಬೀದರ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ  ಡಾ. ರಾಮಚಂದ್ರ ಗಣಾಪುರ ಮಾತನಾಡಿ, ಚೆನ್ನಬಸವಣ್ಣ ಶರಣ ಪರಂಪರೆಯ ಮಹಾಜ್ಞಾನಿ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಶರಣಧರ್ಮಕ್ಕೆ ತಾರ್ಕಿಕ, ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟು ಒದಗಿಸಿಕೊಟ್ಟವರು ಅವರು ಎಂದು ತಿಳಿಸಿದರು.

ಚೆನ್ನಬಸವಣ್ಣ ಅವರನ್ನು ಷಟ್‍ಸ್ಥಲ ಜ್ಞಾನಿ ಎಂದು ಕರೆಯಲಾಗುತ್ತದೆ. ಅವರ ವಚನಗಳಲ್ಲಿ ಆಧ್ಯಾತ್ಮ ಸಾಧನೆಯ ಆರು ಮೆಟ್ಟಿಲುಗಳಾದ ಆರು ಸ್ಥಲಗಳ ಬಣ್ಣನೆ ಇದೆ ಎಂದು ಹೇಳಿದರು.

ಚೆನ್ನಬಸವಣ್ಣನವರು ಕೂಡಲಚನ್ನಸಂಗಮದೇವ ವಚನಾಂಕಿತದಿಂದ ಬರೆದ 1,776 ವಚನಗಳು ಮನುಕುಲದ ಬೆಳಕಾಗಿವೆ. ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದಲ್ಲಿ ವಚನ ಸಂರಕ್ಷಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಎಂದು ತಿಳಿಸಿದರು. ಇಂದು ನಮಗೆ ವಚನಗಳು ಲಭ್ಯವಾಗಲು ಚೆನ್ನಬಸವಣ್ಣನವರ ಸಮರ್ಥ ಮಾರ್ಗದರ್ಶನವೇ ಕಾರಣ ಎಂದು ಹೇಳಿದರು.

ಚೆನ್ನಬಸವಣ್ಣನವರು ತಮ್ಮ ವಚನಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರ ಜಯಂತಿ ಆಚರಿಸುವುದೆಂದರೆ ಅವರ ಆದರ್ಶಗಳನ್ನು ನೆನೆದು, ಅವರ ವಚನಗಳಂತೆ ಬದುಕಲು ಪ್ರೇರಣೆ ಪಡೆಯುವುದು ಎಂದು ತಿಳಿಸಿದರು.

ಗಣಿತದಲ್ಲಿ ಪಿ.ಎಚ್‍.ಡಿ ಪಡೆದು ಪುಣೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪ್ರದೀಪಕುಮಾರ ಜ್ಯಾಂತೆ, ನೀಟ್‍ನಲ್ಲಿ ಉತ್ತಮ ರ್ಯಾಂಕ್ ಗಳಿಸಿ, ಎಂ.ಬಿ.ಬಿ.ಎಸ್. ಪ್ರವೇಶ ಪಡೆದ ಶ್ರೇಯಾ ಉದಯ ಪಾಟೀಲ, ಲಿಂಗಾಯತ ಸೇವಾ ದಳದ ಗೋರ್ಟಾ ಶಾಖೆ ಅಧ್ಯಕ್ಷರಾಗಿ ಆಯ್ಕೆಯಾದ ಸುಪ್ರೀತ್ ಪತಂಗೆ ಅವರನ್ನು ಅಭಿನಂದಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ರವಿಬಸವ ಚೌಗಲಾ ಸಂಪಾದಿಸಿರುವ, ಶರಣರ ಹೆಸರುಗಳನ್ನು ಬಳಸಿಯೇ ರಚಿಸಿರುವ ವಚನ ಅಂಕಲಿಪಿ, ಕನ್ನಡ, ಇಂಗ್ಲಿಷ್, ಹಿಂದಿ ಅಂಕಲಿಪಿಯ ಚಿತ್ರಪಟಗಳನ್ನು ಬಿಡುಗಡೆ ಮಾಡಲಾಯಿತು.

ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ವೈಷ್ಣವಿ ಪಾಟೀಲ ಉದ್ಘಾಟಿಸಿದರು. ಲಿಂಗಾಯತ ಸಮೃದ್ಧಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಅಣವೀರ ಕುಡಂಬಲ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂತೋಷ ಪಟವಾರಿ ಉಪಸ್ಥಿತರಿದ್ದರು.ನಿಶ್ಚಿಂತ ಗುರುಪೂಜೆ ನಡೆಸಿಕೊಟ್ಟರು. ಗುರುಶ್ರೀ, ಕದಳಿಶ್ರೀ ಹಾಗೂ ಶ್ಯಾಮಲಾ ಎಲಿ ವಚನ ಗಾಯನ ಮಾಡಿದರು. ನಿಷ್ಕಲಾ ಹಂಗರಗಿ ಸ್ವಾಗತಿಸಿದರು. ಸುನಿತಾ ಚನ್ನಬಸಪ್ಪ ಹಂಗರಗಿ ಭಕ್ತಿ ದಾಸೋಹಗೈದರು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
Leave a comment

Leave a Reply

Your email address will not be published. Required fields are marked *