ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿದ್ದಗಂಗಾಶ್ರೀಗಳಿಗೆ ಗುರುವಂದನೆ‌

ಬಸವ ಮೀಡಿಯಾ
ಬಸವ ಮೀಡಿಯಾ

ಪಾಂಡವಪುರ

ಮನುಷ್ಯನಲ್ಲಿರುವ ಅಂಧಕಾರ ಅಳಿಸಲು ಜ್ಞಾನದ ಬಲದಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಕೃಷ್ಣನಗರದಲ್ಲಿ ಶ್ರೀ ಬಾಲಶನೇಶ್ವರ ಭಕ್ತ ಮಂಡಳಿ ಸಂಜೆ ಆಯೋಜಿಸಿದ್ದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಜನರು ಮಕ್ಕಳ ಶಿಕ್ಷಣಕ್ಕಿಂತಲೂ ಮದುವೆಗಾಗಿ ದುಂದುವೆಚ್ಚ ಮಾಡುವುದು ಬೇಸರದ ಸಂಗತಿ ಎಂದರು.

ಜನರಲ್ಲಿ ಸೇವಾ ಮನೋಭಾವ ಕ್ಷೀಣಿಸುತ್ತಿದೆ. ನಾವೆಲ್ಲರೂ ಸಮಾಜವನ್ನು ಒಗ್ಗೂಡಿಸಬೇಕಿದೆ. ಸಮಾಜದಲ್ಲಿ ಬೆಂಕಿ ಹಚ್ಚು ಕೆಲಸ ಮಾಡದೇ ದೀಪ ಹಚ್ಚು ಕೆಲಸ ಮಾಡಬೇಕಿದೆ. ಕಸಪೊರಕೆ ಮತ್ತು ದೀಪ ನಮಗೆ ಬಹಳ ಮುಖ್ಯ. ಮನೆಯ ಕಸಹೊಡೆದು ದೀಪ ಹಚ್ಚಿ ಬೆಳಕು ಹರಿಸಿದಂತೆ ಅಜ್ಞಾನವನ್ನು ತೊಡೆದು ಹಾಕಿ ಅರಿವಿನ ಜ್ಯೋತಿ ಹಚ್ಚಬೇಕಿದೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಅವರನ್ನು ಕತ್ತಲಿಂದ ಬೆಳಕಿನ ಕಡೆಗೆ ಕರೆದೊಯ್ಯಬೇಕಿದೆ ಎಂದರು.

ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಎಂಬುದು ಕನಸಾಗಿದೆ. ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಜನರ ಒಲವು ಆಂಗ್ಲಮಾಧ್ಯಮ ಕಡೆಗಿದೆ. ಆದರೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಲಿತರೆ ಮಾತ್ರ ಕನ್ನಡ ಉಳಿಯಲು ಸಾಧ್ಯ. ಕನ್ನಡದ ನೆಲದಲ್ಲಿ ಕನ್ನಡ ಉಳಿವಿಗಾಗಿ ಹೋರಾಟ ಮಾಡಬೇಕಿರುವುದು ದುರಂತದ ವಿಚಾರವಾಗಿದೆ. ಕನ್ನಡ ನೆಲದಲ್ಲಿರುವ ಪ್ರತಿಯೊಬ್ಬರು ಕನ್ನಡವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಕನ್ನಡ ಪತ್ರಿಕೆ, ಕತೆ, ಕಾದಂಬರಿ, ಲೇಖನ ಸೇರಿದಂತೆ ಇನ್ನಿತರ ಕನ್ನಡ ಭಾಷೆಯ ಪುಸ್ತಕಗಳನ್ನು ಓದುವುದರ ಮೂಲಕ ಕನ್ನಡ ಭಾಷೆಯನ್ನು ವಿಸ್ತಾರಗೊಳಿಸಬೇಕಿದೆ ಎಂದರು.

ಕರ್ನಾಟಕ ಗಡಿಭಾಗಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಗಟ್ಟಿ ನಿರ್ಧಾರ ತೆಗೆದುಕೊಂಡು ಅಲ್ಲಿ ಕನ್ನಡಿಗರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸವಾಗಬೇಕಿದೆ. ನಾವೆಲ್ಲ ನವೆಂಬರ್ ಮಾಸದ ಕನ್ನಡಿಗರಾಗದೆ, ಕನ್ನಡ ಭಾಷೆ, ನೆಲ, ಜಲವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಶ್ರೀ ಬಾಲಶನೇಶ್ವರ ಭಕ್ತ ಮಂಡಳಿಯ ಬಳಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವನ್ನು ಹಚ್ಚಲಾಯಿತು. ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸಮಹಾಸ್ವಾಮೀಜಿ, ಶ್ರೀ ಬಾಲ ಶನೇಶ್ವರ ಭಕ್ತ ಮಂಡಳಿಯ ಧರ್ಮದರ್ಶಿ ರವಿತೇಜ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ಮುಖಂಡ ಹೊಸಕೋಟೆ ವಿಜಯಕುಮಾರ್, ಪುರಸಭೆ ಸದಸ್ಯ ಎ.ಕೃಷ್ಣ ಅಣ್ಣಯ್ಯ, ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಮೈಸೂರಿನ ಗಾಯಕ ದೀಕ್ಷಿತ್ ಗೌಡ, ಗಾಯಕಿ ಶಿವಾನಿ ಮತ್ತು ಇತರರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

Share This Article
Leave a comment

Leave a Reply

Your email address will not be published. Required fields are marked *