ಶಿರೋಳ
ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದ್ದಕ್ಕೂ ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡಿ, ತುಳಿತಕ್ಕೊಳಗಾದ ಜನತೆಯನ್ನು ಮೇಲೆ ತರಲು ಪ್ರಯತ್ನ ಮಾಡಿದ ಈ ನಾಡಿನ ಸಂತರು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ನರಗುಂದ ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಆಶ್ರಯದಲ್ಲಿ ಲಿಂಗೈಕ್ಯ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳ 76ನೇ ಜಯಂತಿಯ ಭಾವೈಕ್ಯತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮ-ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿ ಯಶಸ್ಸು ಕಂಡು, ನಾಡಿನ ಪ್ರಾಯೋಗಿಕ ಸ್ವಾಮಿಗಳಲ್ಲಿ ಸಿದ್ಧಲಿಂಗ ಮಹಾಸ್ವಾಮಿಗಳು ಅಗ್ರ ಪಂಕ್ತಿಯರಾಗಿದ್ದರು. ಪೂಜ್ಯರ ಸಮಾಜಿಮುಖಿ ಕಾರ್ಯಗಳನ್ನು ಎಣಿಸಲು ಅಸಾಧ್ಯ, ಇಂಥವರ ಕಾಲದಲ್ಲಿ ಜೀವಿಸಿದ ನಾವುಗಳೆ ಪುಣ್ಯವಂತರು. ಬುದ್ಧ, ಭೀಮರಾವ್, ಬಸವಣ್ಣನವರ ಆದರ್ಶಗಳನ್ನು ಪಾಲಿಸಿದ, ಎಡಪರ ಧೋರಣೆಯ ಸ್ವಾಮಿಗಳು ಅವರಾಗಿದ್ದರು ಎಂದರು.
ಶಿಕ್ಷಕ ವೀರನಗೌಡ ಮರಿಗೌಡ್ರ ಮಾತನಾಡಿ, ಪೂಜ್ಯರು ಸಕಾಲಿಕವಾಗಿ ಕೊಡುತ್ತಿದ್ದ ಸಂವಿಧಾನಬದ್ಧ ಹೇಳಿಕೆಗಳು ಬುದ್ಧಿ ಜೀವಿಗಳು, ಮಠಾಧೀಶರು, ಮೌನದಿಂದ ಸಮ್ಮತಿಸುವಂತಿರುತ್ತಿದ್ದವು.
ಗಡಿಭಾಗದ ಬೀದರನ ಭಾಲ್ಕಿಮಠ, ಬೆಳಗಾವಿಯ ರುದ್ರಾಕ್ಷಿಮಠ, ಚಿಂಚಣಿಯ ಕನ್ನಡಮಠ, ಹುಬ್ಬಳ್ಳಿ ಮೂರುಸಾವಿರಮಠ, ಅನೇಕ ಲಿಂಗಾಯತ ಮಠಗಳಿಗೆ ಉತ್ತಮ ಸ್ವಾಮಿಗಳನ್ನು ನೀಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ ಎಂದರು.
ಬಾಪುಗೌಡ ತಿಮ್ಮನಗೌಡ್ರ ಮಾತನಾಡಿ, ಗಣ್ಯವ್ಯಕ್ತಿಗಳ ಜೀವನಾದರ್ಶಗಳ ಕುರಿತ ಪುಣ್ಯ ಪುರುಷರ ಇತಿಹಾಸ ಮಾಲಿಕೆಯ 500 ಪುಸ್ತಕಗಳನ್ನು ಪ್ರಕಟಿಸಿದ ಅಪರೂಪದ ಪುಸ್ತಕ ಸ್ವಾಮಿಗಳಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನಮಂತಗೌಡ ತಿರಕನಗೌಡ್ರ, ಲಾಲಸಾಬ ಅರಗಂಜಿ, ಬಸವರಾಜ ಕರಕಿಕಟ್ಟಿ, ಲೋಕಪ್ಪ ಕರಕಿಕಟ್ಟಿ, ಸಂಜು ಕಲಾಲ, ರಂಜಾನ್ ನದಾಫ, ಶರಣಪ್ಪ ಕಾಡಪ್ಪನವರ, ಪ್ರಾಚಾರ್ಯ ಸಿ.ಎಫ್. ಜಾಧವ, ಈರಮ್ಮ ಮುದಕವಿ, ಕೈಗಾರಿಕಾ ತರಬೇತಿ ಸಂಸ್ಥೆಯ ಭೋಧಕರು ಇದ್ದರು.
ಪ್ರಾಚಾರ್ಯ ಬಸವರಾಜ ಸಾಲಿಮಠ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಈರಣ್ಣ ಸೋನಾರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಕಾಡದೇವರಮಠ ವಂದಿಸಿದರು.