‘ಬುದ್ಧ ಬಸವ ಅಂಬೇಡ್ಕರ್ ಮಾರ್ಗದಲ್ಲಿ ನಡೆದ ಸಿದ್ಧಲಿಂಗ ಶ್ರೀಗಳು’

ನರಗುಂದ

ಸಂಸ್ಕಾರವಂತ ಹಾಗೂ ಶಿಸ್ತುಬದ್ಧ ಜೀವನ ಕಲಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಪೂರಕವಾಗಿದೆ. ಈ ಶಿಬಿರದಲ್ಲಿ ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಹೋದರತ್ವ ಭಾವನೆಯನ್ನು ಮೂಡಿಸುತ್ತದೆ. ಮಹಾತ್ಮಾ ಗಾಂಧೀಜಿಯ ಜನ್ಮಶತಮಾನೋತ್ಸವದ ನಿಮಿತ್ಯ ಪ್ರಾರಂಭಿಸಲಾದ ಎನ್ ಎಸ್ ಎಸ್ ಹಳ್ಳಿಗಳ ಉದ್ಧಾರಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಉಪನ್ಯಾಸಕ ಹೆಚ್ ವ್ಹಿ ಬ್ಯಾಡಗಿ ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೭೫ ನೇ ಮಾಸಿಕ ಶಿವಾನುಭವ ಹಾಗೂ ಕನ್ನಡ ಕುಲಗುರು ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

೧೨ ನೇ ಶತಮಾನದ ನಂತರ ೨೧ ನೇ ಶತಮಾನದಲ್ಲಿ ವೈಚಾರಿಕ ವಿಚಾರಧಾರೆಗಳೊಂದಿಗೆ ಸಮಸಮಾಜ ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಈ ಶತಮಾನ ಕಂಡ ಶ್ರೇಷ್ಠ ಸಂತರು. ಅವರ ಬದುಕೆ ಒಂದು ಹೋರಾಟ, ಜೀವನವೇ ನಮಗೆಲ್ಲ ಆದರ್ಶಪ್ರಾಯ. ಸೇಂಟ್ ಎವರೆಸ್ಟ್ ಪರ್ವತದಷ್ಟು ಎತ್ತರದ ವ್ಯಕ್ತಿತ್ವವನ್ನು ಹೊಂದಿದ ಅವರು ಬುದ್ಧ ಬಸವ ಅಂಬೇಡ್ಕರ ಕನಸನ್ನು ಸಾಕಾರಗೊಳಿಸಿದ ಅಭಿನವ ಬಸವಣ್ಣ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಹಾದೇವ ಎಫ್ ವಡೇಕರ ಅವರು ರಾಷ್ಟ್ರೀಯ ಸೇವಾ ಯೋಜನೆ ಎಂದರೆ ಬರೀ ಕೆಲಸ ಮಾತ್ರ ಅಲ್ಲ ಸೇವೆಯೊಂದಿಗೆ ಶೈಕ್ಷಣಿಕ, ಪರಿಸರ, ರಕ್ಷಣೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವ ಸಾಗರವಿದ್ದಂತೆ, ಅಲ್ಲಿ ನಮಗೆ ಬೇಕಾದಷ್ಟು ಮುತ್ತುಗಳನ್ನು ಬಾಚಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ನಾಗರಿಕರಾಗಲು ಸಹಕಾರಿಯಾಗಿದೆ. ಸೇವಾ ಯೋಜನೆ ಮೂಲಕ ನಮ್ಮನ್ನು ನಾವು ಅರ್ಥೈಸಿಕೊಂಡು ನಮ್ಮ ಅಂತರಾತ್ಮವನ್ನು ನೋಡಿಕೊಳ್ಳುವ ಒಂದು ವಿಶೇಷ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕೊಡಮಾಡುವ ಅತ್ಯುತ್ತಮ ಎನ್ ಎಸ್ ಎಸ್ ಘಟಕ ಹಾಗೂ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಭಾಜನರಾದ ಡಾ. ಮಹಾದೇವ ಎಫ್ ವಡೇಕರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ಪೂಜ್ಯ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಪ್ರಾಚಾರ್ಯ ಆನಂದ ಲಾಳಸಂಗಿ, ಎನ್ ಎಸ್ ಎಸ್ ಸಂಯೋಜಕರಾದ ಡಾ. ಜಗದೀಶ ತಳವಾರ, ಡಾ ಫಕ್ಕೀರಬಿ ನದಾಫ್, ಡಾ. ರಾಮು ಎಮ್ ಎಸ್ ಹಾಗೂ ನಿಕಟಪೂರ್ವ ಸಂಯೋಜಕರಾದ ಪ್ರೊ. ಭೀಮನಗೌಡ ಕೊಣ್ಣೂರ, ವಿಶ್ರಾಂತ ಪ್ರಾದ್ಯಾಪಕ ಪಿ ಎಸ್ ಅಣ್ಣಿಗೇರಿ, ನಿವೃತ್ತ ಶಿಕ್ಷಕ ಎಸ್ ಬಿ ಭಜಂತ್ರಿ, ಹೂಗಾರ ಶಿಕ್ಷಕರು ಪ್ರಮುಖರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *