ಸಿದ್ದರಾಮಯ್ಯ ಪ್ರತಿಕೃತಿಗೆ ಚಪ್ಪಲಿ ಏಟು, ಬಿಜೆಪಿ ಶಾಸಕ ವಿರುದ್ಧ ಪ್ರಕರಣ ದಾಖಲು
ಉಡುಪಿ
ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ ಹಲವರ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ಅವರಿಗೆ ನೀಡಲಾಗಿದ್ದ ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಸರ್ಕಾರ ತಡೆ ಹಿಡಿದಿರುವುದನ್ನು ಖಂಡಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ದ ಮಣಿಪಾಲದಲ್ಲಿ ಸೆಪ್ಟೆಂಬರ್ 6 ಪ್ರತಿಭಟನೆ ಮಾಡಿದ್ದರು. ಆಗ ಸಿದ್ದರಾಮಯ್ಯ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯಲಾಗಿತ್ತು, ಎಂದು ಆರೋಪಿಸಲಾಗಿದೆ.
ಹೆಬ್ರಿ ನಿವಾಸಿ ಸೌರಭ್ ಬಲ್ಲಾಳ್ ಅವರ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 219-2024 ಕಲಂ: 192, 196(1), 352, 353(1)(c) BNS 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ, ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ರಾಮಕೃಷ್ಣ ಅವರು ಹಿಜಾಬ್ ವಿಷಯದಲ್ಲಿ ಸರ್ಕಾರದ ಆದೇಶವನ್ನಷ್ಟೇ ಪಾಲಿಸಿದ್ದಾರೆ, ಸರ್ಕಾರವು ಪ್ರಶಸ್ತಿಯನ್ನು ವಾಪಸ್ ಪಡೆಯುವ ಮೂಲಕ ಜೇನುಗೂಡಿಗೆ ಕೈಹಾಕುವ ಕೆಲಸ ಮಾಡಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಸುವರ್ಣ ಹೇಳಿದರು.
ಎಸ್‌ಡಿಪಿಐಯವರ ಮಾತು ಕೇಳಿ ಸರ್ಕಾರ ಪ್ರಶಸ್ತಿ ತಡೆಹಿಡಿದಿದೆ. ಎಸ್‌ಡಿಪಿಐ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಹೇಳಿದರು.
ಗ್ಯಾರಂಟಿಗೆ ಯೋಜನೆಗಳಿಂದ ರಾಜ್ಯ ಸರಕಾರದ ಬೊಕ್ಕಸದಲ್ಲಿ ಖಾಲಿ ಮಾಡಿರುವ ಸಿದ್ದರಾಮಯ್ಯ ಅವರನ್ನು ಸಮುದ್ರಕ್ಕೆ ವಿಸರ್ಜಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಇದ್ದರು.