ಸಿದ್ಧರಾಮೇಶ್ವರ ಮಂದಿರದಲ್ಲಿ ಪ್ರಥಮ ಶರಣ ಸಂಗಮ ಉತ್ಸವ

ಸೊಲ್ಲಾಪುರ:

ಶನಿವಾರ ಸಂಜೆ ಇಲ್ಲಿಯ ಸಿದ್ಧರಾಮೇಶ್ವರ ಭಕ್ತ ಮಂಡಳಿ ವತಿಯಿಂದ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಪ್ರಥಮ ‘ಶರಣ ಸಂಗಮ ಉತ್ಸವ’ದಲ್ಲಿ ‘ಶರಣ ವಂದನೆ’ ಕಾರ್ಯಕ್ರಮ ಭಕ್ತಿಯಿಂದ ನಡೆಯಿತು. ಆರಂಭದಲ್ಲಿ ಜ್ಞಾನಜ್ಯೋತಿ ಬಸವಣ್ಣನವರು ಮತ್ತು ಶಿವಯೋಗಿ ಸಿದ್ಧರಾಮೇಶ್ವರರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನೇತೃತ್ವ ವಹಿಸಿದ್ದ ಬಸವಕಲ್ಯಾಣ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮಿಗಳು, ಅಂದು ಕಲ್ಯಾಣ ಕ್ರಾಂತಿಯಾದ ನಂತರ ಸೊಲ್ಲಾಪುರದ ಸಿದ್ಧರಾಮರು ಈ ಭಾಗದಲ್ಲಿ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಶರಣ ಗಣಂಗಳಿಗೆ ಆಶ್ರಯ ನೀಡಿ, ಈ ಭಾಗದಲ್ಲಿ ಲಿಂಗಾಯತ ಧರ್ಮವನ್ನು ನೆಲೆಗೊಳ್ಳುವಲ್ಲಿ ಅದ್ಭುತ ಕಾರ್ಯ ಮಾಡಿದ್ದಾರೆ.

ಅಲ್ಲದೆ ಹೆಣ್ಣು-ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ. ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಹೆಣ್ಣುಮಕ್ಕಳಿಗೆ ಉನ್ನತ ಸ್ಥಾನ ನೀಡಿದುದರ ಪ್ರತಿಯಾಗಿ ಸಿದ್ಧರಾಮರ ಜತೆಯಲ್ಲಿ ಎಲ್ಲ ಶರಣರಿಗೆ ವಂದನೆ ಸಲ್ಲಿಸುವ ಈ ಕಾರ್ಯಕ್ರಮ ವಿಶೇಷವಾಗಿ ನಡೆಯುತ್ತಿದೆ ಎಂದರು. ಕಲ್ಯಾಣದಲ್ಲಿ ಕ್ರಾಂತಿಗೈದ 770 ಅಮರ ಗಣಂಗಳ ನಾಮಗಳು ಓದುತ್ತ ಅವರಿಗೆ ಶರಣು ಶರಣಾರ್ಥಿ ಎಂದರೆ, ಪ್ರತಿಯಾಗಿ ನೆರೆದ ಭಕ್ತರು ಶರಣು ಶರಣಾರ್ಥಿ ಎನ್ನುವಲ್ಲಿ ಶರಣರ ಧ್ವನಿ ಮೊಳಗಿತು.

 ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಪೀಠದ ಡಾ. ಚೆನ್ನಬಸವಾನಂದ ಶ್ರೀಗಳು, ಮುಗಳಿಯ ಪೂಜ್ಯ ಮಹಾನಂದಾತಾಯಿ, ಬೀದರನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲರು ಶರಣರ ನಾಮಗಳನ್ನು ಓದಿದರು.  ಎರಡು ತಾಸು ನಡೆದ ಕಾರ್ಯಕ್ರಮದಲ್ಲಿ ಇಡೀ ಮಂದಿರದ ಪರಿಸರ ಭಕ್ತಿಭಾವದಿಂದ ಮುಳುಗಿತ್ತು ಸಾಮೂಹಿಕ ಭಜನೆ, ವಚನ ಪಠಣ, ಭಕ್ತಿಗೀತೆ, ಶರಣರ ಜಯಘೋಷಗಳು ಕೇಳಿಬಂದವು.

ಸೊಲ್ಲಾಪುರ, ಬಸವಕಲ್ಯಾಣ, ಜತ್ತ, ಸಂಖ, ಅಕ್ಕಲಕೋಟೆ, ಪೂಣಾ, ಕಲಬುರ್ಗಿ ಮತ್ತಿತರ ಕಡೆಯಿಂದ ಬಂದ ಭಕ್ತರಿಗೆ ಸಿದ್ಧರಾಮೇಶ್ವರ ಮಂದಿರ ಸಮಿತಿ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರಾಜಶ್ರೀ ಥಳಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಂಕರಲಿಂಗ ಮಹಿಳಾ ಘಟಕದ ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಲಗೆ, ಸೊಲ್ಲಾಪುರ ಜಿಲ್ಲಾದ್ಯಕ್ಷ ಶಿವಾನಂದ ಗೋಗಾವ, ಸೊಲ್ಲಾಪುರ ನಗರ ಅಧ್ಯಕ್ಷ ರಾಜೇಂದ್ರ ಖಸಗಿ, ಸೈಫುಲ್ ಭಾಗದ ಅಧ್ಯಕ್ಷ ಚನ್ನಬಸಪ್ಪ ಗುರುಭೆಟ್ಟಿ, ಚೆನ್ನಬಸಪ್ಪ ಗುಡ್ಡೊಡಗಿ, ಕೋಶಾಧ್ಯಕ್ಷ ರಾಜೇಂದ್ರ ಹೌದೆ, ವಿಜಯಕುಮಾರ ಭಾವೆ, ಶಶಿಕಲಾ ರಾಮಪೂರೆ, ಮೀನಾಕ್ಷಿ ಬಾಗಲಕೋಟೆ, ಬಾಬಾ ಮ್ಯಾಡಮ್, ಬಸವರಾಜ ಶಾಸ್ತ್ರೀ ಸೇರಿದಂತೆ 1500ಕ್ಕೂ ಹೆಚ್ಚು ಭಕ್ತರು ನೆರೆದಿದ್ದರು.

ಬಸವಾದಿ ಶರಣ ಸಿದ್ದರಾಮೇಶ್ವರರ ಮೇಲಿನ ಭಕ್ತಿಗಾಗಿ, ಸೊಲ್ಲಾಪುರದ ಭಕ್ತ ಮಂಡಳಿ ಕಳೆದ ಮೂರು ವರ್ಷದಿಂದ ಪ್ರತಿತಿಂಗಳು ಒಂದನೇ ತಾರೀಖಿನಂದು ಸಿದ್ದರಾಮೇಶ್ವರ ವಿರಚಿತ ಬಸವ ಸ್ತೋತ್ರದ ತ್ರಿವಿಧ ಪಾರಾಯಣ ಪಠಣ ಮಾಡುತ್ತ ಬಂದಿದ್ದಾರೆ. ಈ ಕಾರ್ಯಕ್ರಮ ಮೂರು ವರ್ಷ ಪೂರೈಸಿದ ಸವಿನೆನಪಿಗಾಗಿ ದೇವಸ್ಥಾನದ ಸಿದ್ರಾಮೇಶ್ವರ ಸಮಾಧಿ ಮುಂದೆ ಪ್ರಥಮ ಶರಣ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
Leave a comment

Leave a Reply

Your email address will not be published. Required fields are marked *