ಸಿಂಧನೂರು
ಪಟ್ಟಣದ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನ ಹಾಗೂ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಸಮಾರಂಭ ಅದ್ಧೂರಿಯಾಗಿ ಜರುಗಿತು.
ಮೊದಲಿಗೆ ಪಥ ಸಂಚಲನ ತಹಶೀಲ್ದಾರ ಕಾರ್ಯಾಲಯದಿಂದ ಮುಖ್ಯ ರಸ್ತೆ, ಹಳೆ ಬಜಾರ್ ಮಾರ್ಗ, ಬಸವ ವೃತ್ತಕ್ಕೆ ಬಂದು, ವಿಶ್ವಗುರು ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಹಾಗೂ ದ್ವಜಾರೋಹಣ ನೆರವೇರಿತು. ಪುನಃ ಪಥ ಸಂಚಲನ ಅಲ್ಲಿಂದ ಪ್ರಸಾದ ನಿಲಯದವರೆಗೆ ನಡೆಯಿತು.
ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು.
ಪ್ರಾಸ್ತಾವಿಕವಾಗಿ ಪಿ. ರುದ್ರಪ್ಪಣ್ಣ ಮಾತನಾಡುತ್ತ, ಇದಿರಿಟ್ಟು ಪೂಜಿಸುವ ದೇವರು ದೇವರಲ್ಲ, ಇಷ್ಟಲಿಂಗ ಶಿವಯೋಗದ ಸಾಧನ. ಅಂತಹ ಲಿಂಗ ಸಂಶೋಧನೆ ಮಾಡಿ ನಮಗೆ ನೀಡಿದ ದಿನವಿಂದು ಎಂದರು. ಲಿಂಗಾಯತ ಎನ್ನುವುದು ಜಾತಿಯಲ್ಲ, ಇದೊಂದು ಧರ್ಮ. ನಮ್ಮ ಸ್ವರೂಪವನ್ನು ನಾವು ಕಂಡುಕೊಳ್ಳಲು ಇಷ್ಟಲಿಂಗ ಧರಿಸಬೇಕು ಎಂದರು.
ಡಾ. ಕೆ. ಶಿವರಾಜ ಮಾತನಾಡಿ, ಮೂಲತಃ ಬಸವಧರ್ಮ ಲಿಂಗಾಯತ ಧರ್ಮವಾಯಿತು. ಬಸವ ತಂದೆ ಸತ್ಯಕ್ಕ, ಸಂಕವ್ವೆಯಂತಹ ಅತ್ಯಂತ ತಳ ಸಮುದಾಯದವರಿಗೆ ಲಿಂಗ ಭೇದವಿಲ್ಲದೆ ಇಷ್ಟಲಿಂಗ ನೀಡಿದರು.
ಬಸವಣ್ಣನವರ ಅನುಭವ ಮಂಟಪವೇ ಪ್ರಥಮ ಮ್ಯಾಗ್ನಾಕಾರ್ಟ್. ಲಿಂಗಾಯತ ಧರ್ಮ ವಿಶ್ವವ್ಯಾಪಿ ಆಗಿಲ್ಲ ಕಾರಣ ನವೀಕರಣ, ಸರಳೀಕರಣ,ಏಕೀಕರಣದ ಅಗತ್ಯವಿದೆಯೆಂದರು. ಲಿಂಗಾಯತ ಆಚರಣೆಗಳು ಸಂಕ್ಷಿಪ್ತ ಹಾಗೂ ಸರಳವಾಗಿರಬೇಕು. ಧರ್ಮ ಜಾಗತಿಕರಣವಾಗಬೇಕು. ಸಬಲೀಕರಣವಾಗಬೇಕು, ಶುದ್ಧಿಕರಣವಾಗಬೇಕು ಎಂದರು.
ಇಂದಿನ ಲಿಂಗಾಯತರು ಹೋಮ, ಹವನ, ಲಕ್ಷ್ಮೀಪೂಜೆ, ಜಾತೀಯತೆಗಳಿಂದ ಪ್ರೇರಿತರಾಗಿದ್ದಾರೆ. ಇವೆಲ್ಲ ಹೋದಾಗ ಮಾತ್ರ ಲಿಂಗಾಯತ ಶುದ್ಧಿಕರಣ ಸಾಧ್ಯವೆಂದರು.
ಅನುಭಾವಿ ಶಿವಕುಮಾರ ಬಳಿಗಾರ ಮಾತನಾಡುತ್ತ, ಶಿವಯೋಗಿ ಸಿದ್ರಾಮೇಶ್ವರರು ಬಹಿರಂಗದ ದೇವಾಲಯ ನಿರ್ಮಿಸುವುದನ್ನು ನಿಲ್ಲಿಸಿ, ಅಂತರಂಗದ ಶಿವನನ್ನು ಕಂಡುಕೊಳ್ಳಲು ಮುಂದಾದರು. ಜಗತ್ತು ಲಿಂಗ ಸ್ವರೂಪ. ಮೌಢ್ಯಮುಕ್ತರು ಲಿಂಗಧಾರಿಗಳಾಗುತ್ತಾರೆ. ತನು ಮನ ಭಾವದಲ್ಲಿ ಕಿಂಚಿತ್ ದೋಷವಾದರೆ ಲಿಂಗಧಾರಣೆ ಉಪಯೋಗವಿಲ್ಲ. ನಿನ್ನ ನೀನು ಅರಿಯಲು ಲಿಂಗಧಾರಿಯಾಗು, ಅಷ್ಟಾವರಣ, ಪಂಚಾಚಾರ, ಷಟ್ಸ್ಥಳ ಮೇಲೆ ಲಿಂಗಾಯತ ಧರ್ಮ ನೆಲೆಗೊಳ್ಳಬೇಕು. ಎಂದು ನುಡಿದರು.
ವೆಂಕಟಾಪುರ ಬಸವರಾಜ ಶರಣರು ಮಾತನಾಡುತ್ತಾ, ಬಸವಸ್ತುತಿ ಮಾಡಿದ ಸಿದ್ದರಾಮ ಶಿವಯೋಗಿಗಳ ವಚನಗಳ ಕುರಿತು ವಿವರಿಸಿದರು. ಸಿದ್ದರಾಮ ಶಿವಯೋಗಿಗಳ ಜೀವನ ಸಾಧನೆ ಕುರಿತು ಮಾತನಾಡಿದರು.
ನಾರಾಯಣಪ್ಪ ಮಾಡಶಿರವಾರ ಬಸವರಾಜಪ್ಪ ವರದಾಪುರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ವಗರನಾಳ ಸ್ವಾಗತಿಸಿದರು. ಶಂಭನಗೌಡ ನೀಡಿಗೊಳ ನಿರೂಪಿಸಿದರು. ವೇದಿಕೆಯಲ್ಲಿ ಲಕ್ಷ್ಮಣ ಭೋವಿ, ಕರೇಗೌಡ ಕುರುಕುಂದಿ, ಶರಣಬಸಪ್ಪ ಸಾಹುಕಾರ, ಸುಮಂಗಳಕ್ಕ ಚಿಂಚರಕಿ, ವಿಜಯಲಕ್ಷ್ಮಿ ಗುರಿಕಾರ ಉಪಸ್ಥಿತರಿದ್ದರು. ನೂರಾರು ಶರಣ-ಶರಣೆಯರು ಉಪಸ್ಥಿತರಿದ್ದರು.
ಜಯ ಗುರು ಬಸವೇಶ. ಶರಣು ಶರಣಾರ್ಥಿ.
ಶರಣು ಶರಣಾರತಿ