ಸಿರಗುಪ್ಪ
ತಾಲ್ಲೂಕಿನ ಸಿರಿಗೇರಿ ಗ್ರಾಮದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವ ಬಳಗ ಟ್ರಸ್ಟ್ ವತಿಯಿಂದ “ಅರಿವು” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಶಿಕ್ಷಕರು ಎನ್. ಪಂಪಾಪತಿ ಅವರು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೆಂಕಟಾಪುರದ ಬಸವರಾಜಪ್ಪ ಶರಣರು ಮಾತನಾಡಿ, “ಆಹಾರ, ಗಾಳಿ, ಬೆಳಕು, ನೀರು ಇವುಗಳು ಪ್ರಾಕೃತಿಕವಾಗಿ ದೊರೆಯುವ ವಸ್ತುಗಳು ಇವುಗಳನ್ನ ಸದ್ಬಳಕೆ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರು ಮಾಡಿದ ಹಳೆಯ ಮೌಢ್ಯಗಳನ್ನು ತ್ಯಜಿಸಿ ಪ್ರಾತ್ಯಕ್ಷಿಕವಾಗಿ, ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು” ಎಂದರು.

ಮುಂದುವರೆದು, “ನಾವೇ ಸೃಷ್ಟಿ ಮಾಡಿದ ಕಲ್ಲಿನ ನಾಗದೇವತೆಗಳಿಗೆ ಹಾಲೆರೆದರೆ ಹಾಲು ಮಣ್ಣು ಪಾಲಾಗುತ್ತದೆ, ಹಾವಿಗೆ ಹಾಲೆರೆದರೆ ಸಾಯುತ್ತದೆ, ಅದಕ್ಕೆ ಗಾಳಿಯೇ ಆಹಾರ. ಸಾವಿರಾರು ನಿರ್ಗತಿಕರಿಗೆ ಹಾಲನ್ನು ನೀಡಿದರೆ ಹಸಿವು ನೀಗುತ್ತದೆ. ದೇವರ ಹೆಸರುಗಳಲ್ಲಿ ದುರ್ವಿನಿಯೋಗ ಮಾಡಬೇಡಿ. ವಿದ್ಯಾರ್ಥಿಗಳು ತಿಳುವಳಿಕೆಯಿಂದ ನಡೆದುಕೊಳ್ಳಬೇಕು. ಸತತ ಪ್ರಯತ್ನ, ಆತ್ಮವಿಶ್ವಾಸದಿಂದ ಕಾರ್ಯೋನ್ಮುಖರಾಗಬೇಕು” ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಬಸವ ಬಳಗ ಗ್ರಾಮ ಘಟಕದ ಅಧ್ಯಕ್ಷರಾದ ಶಶಿಧರಗೌಡ ಮಾತನಾಡಿ, “ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಈಗಿನಿಂದಲೇ ಒಳ್ಳೆಯ ಯೋಚನೆ, ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು” ಎಂದರು.
ನಂತರ ಎಲ್ಲಾ ಮಕ್ಕಳಿಗೆ ಹಾಲನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಸವ ಬಳಗದ ಸದಸ್ಯರಾದ ಬಸವರಾಜಗೌಡ, ವೀರೇಶಗೌಡ, ಹೆಚ್. ಎರ್ರೆಪ್ಪ, ಎಂ. ಪಂಪನಗೌಡ, ಆರ್. ಯಲ್ಲನಗೌಡ, ಗುಂಡಿಗನೂರು ಯಲ್ಲನಗೌಡ, ಹೊಸಳ್ಳಿ ಚಂದ್ರಶೇಖರ್ ‘ನಿಮಗಾಗಿ ನಾವು’ ಸಂಸ್ಥೆಯ ಪದಾಧಿಕಾರಿಗಳಾದ ಹಳ್ಳಿ ಮರದ ನಾಗರಾಜ್, ಶಿವಾಜಿರಾವ್, ಪುನೀತ್, ಶಿಕ್ಷಕರಾದ ಮಹಾಬಲೇಶ್, ರಂಜಿತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.