ಸೊಲ್ಲಾಪುರದ ಲಿಂಗಾಯತರು ವೈದಿಕರ ಕಪಿಮುಷ್ಠಿಯಲ್ಲಿ: ಮೀನಾಕ್ಷಿ ಬಾಳಿ

ಸೊಲ್ಲಾಪುರ

ದೇಶದಲ್ಲಿಯೇ ಹೆಚ್ಚು ಲಿಂಗಾಯತರಿರುವ ಸೊಲ್ಲಾಪುರದ ಲಿಂಗಾಯತರಿಗೆ ಬಸವತತ್ವ ತಿಳಿದಿಲ್ಲ. ಇನ್ನೂ ಅವರು ವೈದಿಕರ ಕಪಿಮುಷ್ಠಿಯಲ್ಲಿಯೇ ಬದುಕುತ್ತಿದ್ದಾರೆ. ಇಲ್ಲಿಯ ಲಿಂಗಾಯತರು ಮುಗ್ಧರು. ಅವರನ್ನು ಈ ಸ್ಥಿತಿಯಲ್ಲಿಟ್ಟವರು ವೈದಿಕ ಜಂಗಮರು ಎಂದು ಕಲಬುರಗಿಯ ಬಸವ ಚಿಂತಕಿ, ಜನವಾದಿ ಮಹಿಳಾ ಸಂಘಟನೆಯ ಡಾ. ಮೀನಾಕ್ಷಿ ಬಾಳಿಯವರು ಖಡಾಖಂಡಿತವಾಗಿ ಹೇಳಿದರು.

ಭಾನುವಾರ ಇಲ್ಲಿಯ ಲಿಂಗಶೆಟ್ಟಿ ಸಭಾಭವನದಲ್ಲಿ ಆಯೋಜಿಸಿದ ಲಿಂಗೈಕ್ಯ ಶಾಂತಾಬಾಯಿ ಮಸೂತೆ ಅವರ ಪ್ರಥಮ ಸಂಸ್ಮರಣೆ ದಿನದ ನಿಮಿತ್ಯ ಆಯೋಜಿಸಿದ ಬಸವತತ್ವ ಸಮಾವೇಶದಲ್ಲಿ ಉಪನ್ಯಾಸಕಿಯಾಗಿ ಪಾಲ್ಗೊಂಡ ಅವರು, ಇಲ್ಲಿಯವರಿಗೆ ನಿಜ ಬಸವತತ್ವ ತಿಳಿದಿಲ್ಲ. ಲಿಂಗಾಯತ ಎಂಬುದು ಜಾತಿಯಲ್ಲ ಹತ್ತಾರು ಜಾತಿ, ಕಾಯಕಜೀವಿಗಳು ಬಸವಣ್ಣನವರ ನೇತೃತ್ವದಲ್ಲಿ ಹುಟ್ಟು ಹಾಕಿದ ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಲ್ಪಟ್ಟ ಧರ್ಮ. ಲಿಂಗಾಯತ ಧರ್ಮ ತತ್ವಗಳು ತಿಳಿಯಲು ಇಂಥ ಸಮಾವೇಶಗಳು ಮೇಲಿಂದ ಮೇಲೆ ನಡೆಯಬೇಕು ಎಂದ ಅವರು ಹಲವಾರು ವರ್ಷಗಳ ಹಿಂದೆ ಪಂಚಾಚಾರ್ಯರು ಅಡ್ಡಪಲ್ಲಕ್ಕಿಯಲ್ಲಿ ಹೋಗುತ್ತಿರುವಾಗ ದಾರಿಯಲ್ಲಿಯ ಬಸವಣ್ಣವರ ಭಾವಚಿತ್ರ ತಗೆಸಿದ್ದು, ತಮ್ಮಗೆ ಮತ್ತು ತಮ್ಮ ಗೆಳತಿಗೆ ಸಿದ್ಧರಾಮನ ಮಂದಿರದ ಗರ್ಭಗುಡಿಯೊಳಗೆ ಪ್ರವೇಶಿಸಲು ನಿರಾಕರಿಸಿದ್ದು ನೆನಪಿಸಿಕೊಂಡರು.

ಇನ್ನೋರ್ವ ಉಪನ್ಯಾಸಕ ವಿಜಯಪುರದ ಡಾ.ಜೆ.ಎಸ್.ಪಾಟೀಲರು ಮಾತನಾಡಿ, ಕಲ್ಯಾಣದ ಚಳುವಳಿ ನಂತರ ಮಹಾರಾಷ್ಟ್ರದಲ್ಲಿ ಪ್ರಭಾವ ಬೀರಿದ್ದು ಸಂತರ ವಾರಕರಿ ಚಳುವಳಿ. ಈ ಚಳುವಳಿಗೆ ಶರಣರೇ ಪ್ರೇರಣೆಯಾಗಿದ್ದವರು. ಸಂತ ನಾಮದೇವನ ತಾಯಿ ತವರುಮನೆ ಬಸವಕಲ್ಯಾಣವಾಗಿತ್ತು. ಅವರಲ್ಲಿ ಶರಣರ ಪ್ರಭಾವ ಇದ್ದೇ ಇತ್ತು.

ಸಂತ ತುಕಾರಾಮ, ಚೋಖಾಮೇಳ, ಸೇರಿದಂತೆ ಹತ್ತು ಹಲವಾರು ವಿಚಾರವಂತರ ಪುಣ್ಯ ಭೂಮಿ ಸೊಲ್ಲಾಪುರ ಜಿಲ್ಲೆ. ಸಿದ್ಧರಾಮನ ಕಾಯಕಭೂಮಿ ಸೊಲ್ಲಾಪುರದಲ್ಲಿ ಸಿದ್ಧರಾಮರನ್ನು ಸಿದ್ದೇಶ್ವರರನ್ನಾಗಿ ಮಾಡಿ ಹೋಮ-ಹವನಗಳು ಮಾಡುತ್ತಿರುವದು ದುರದುಷ್ಟಕರ. ದೇಶ ನಡೆಯುತ್ತಿರುವದು ಕಾಯಕ ಜೀವಿಗಳಿಂದ, ಇಂದು ದುಡಿಯಲಾರದ ವೈದಿಕ ವರ್ಗ ಹದಿನಾರು ದಾನಗಳನ್ನು ಮಾಡುವ ಮೂಲಕ ದುಡಿಯುವ ವರ್ಗವನ್ನು ಶೋಷಣೆ ಮಾಡುತಿತ್ತು. ವೈದಿಕರ ಕಪಿಮುಷ್ಠಿಯಿಂದ ಲಿಂಗಾಯತರು ಹೊರಬರಬೇಕೆಂದು ಕರೆ ನೀಡಿದರು.

ನಮ್ಮ ದೇಶದ ನಿಜವಾದ ಮಾಲೀಕರು ಕಾಯಕ ಜೀವಿಗಳು. ಕಾಯಕ ಜೀವಿಗಳು ತಮ್ಮ ಕಾಯಕ ಮಾಡದೇ ಹೋದರೆ ದೇಶದಲ್ಲಿ ಮನುಷ್ಯನ ಬದುಕು ದುಸ್ತರವಾಗುತ್ತದೆ. ಅದಕ್ಕಾಗಿ ಈ ಸತ್ಯ ಅರಿತ ಬಸವಣ್ಣನವರು ಕಾಯಕ ಜೀವಿಗಳಿಂದ ಕಲ್ಯಾಣ ರಾಜ್ಯ ಕಟ್ಟಿದರು. ನಮ್ಮ ತಾಯಿ ಶಾಂತಾಬಾಯಿ ನಮಗೆ ತಾಯಿಯ ಜತೆಗೆ ಅಧ್ಯಾತ್ಮಿಕ ಗುರುವೂ ಆಗಿದ್ದರು. ಅವರಿಂದ ತಮಗೆ ಲಿಂಗಾಯತ ಧರ್ಮದ ಸಂಸ್ಕಾರ ದೊರೆತದ್ದು, ಅವರ ಮೊದಲ ಸಂಸ್ಮರಣೆ ದಿನದ ನಿಮಿತ್ತ ಇಂಥದೊಂದು ಕಾರ್ಯಕ್ರಮ ಆಯೋಜಿಸಿದ್ದು ಖುಷಿ ತಂದಿದೆ ಎಂದು ಸಮಾವೇಶ ಸಂಯೋಜಕ, ವಿಶ್ವಕಲ್ಯಾಣ ಮಹಾಮನೆ ಚಾರಿಟೆಬಲ್ ಟ್ರಸ್ಟ್ನ ಶ್ರೀಶೈಲ ಮಸೂತೆ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ವಿಶ್ವಕಲ್ಯಾಣ ಮಹಾಮನೆ ಚಾರಿಟೆಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ಕಾಯಕಜೀವಿಗಳ ಮಕ್ಕಳ ಶಿಕ್ಷಣಕ್ಕಾಗಿ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.

ಬೆಂಗಳೂರಿನ ಅಕ್ಕ ಐಎಎಸ್ ಅಕಾಡಮಿಯ ಶಿವಕುಮಾರ ಜ್ಯೋತಿ ಬೆಳಗಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಬಸವಕೇಂದ್ರದ ಸಿಂಧೂತಾಯಿ ಕಾಡಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರದ ಸಾಹಿತಿ ಚಿಂತಕ ಡಾ.ಜೆಎಸ್ ಪಾಟೀಲರು ಬರೆದ `ಎಳೆಹೂಟೆ’ ನಾಟಕ ಪುಸ್ತಕ ಬಿಡುಗಡೆ ಮಾಡಲಾಯಿತು.
ವಿಶ್ವಕಲ್ಯಾಣ ಮಹಾಮನೆ ಚಾರಿಟೆಬಲ್ ಟ್ರಸ್ಟ್ನ ವತಿಯಿಂದ ೧೫ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ದತ್ತು ತಗೆದು ಕೊಳ್ಳಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಸೊಲ್ಲಾಪುರ ಮಹಿಳಾ ಘಟಕದ ಅಧ್ಯಕ್ಷೆ ರಾಜಶ್ರೀ ಥಳಂಗೆಯವರಿಗೆ ಚಿನ್ಮೂಲಾದ್ರಿ ಚಿತ್ಕಳೆ ಪ್ರಶಸ್ತಿ ನೀಡಿ ಗೌರವಿಸಿದರೆ, ಪಿಹೆಚ್‌ಡಿ ಪದವಿ ಪಡೆದ ಶ್ರೀದೇವಿ ಪಾಟೀಲರಿಗೆ ಸನ್ಮಾನಿಸಲಾಯಿತು. ಶಂಕರಲಿಂಗ ಮಹಿಳಾ ಸದಸ್ಯರಿಂದ ‘ಅಕ್ಕ ಅಲ್ಲಮರ ಸಂವಾದ’ ರೂಪಕ ಪ್ರದರ್ಶನ ಗೊಂಡಿತು.

ಸಮಾವೇಶದಲ್ಲಿ ಗುಳೇದಗುಡ್ಡದ ಶ್ರೀಮದ್ ಹಿಮವತ್ಕೇದಾರ ಶ್ರೀಗಳು, ಗುಣತೀರ್ಥವಾಡಿ ಬಸವಕಲ್ಯಾಣದ ಪೂಜ್ಯ ಬಸವಪ್ರಭು ಶ್ರೀಗಳು, ಆಳಂದ ತೋಂಟದಾರ್ಯ ಮಠದ ಕೋರಣೇಶ್ವರ ಶ್ರೀಗಳು, ಮುಗಳಿ ಬಸವಮಂಟಪದ ಪೂಜ್ಯ ಮಹಾನಂದಾತಾಯಿ, ಸಸ್ತಾಪುರದ ಸದಾನಂದ ಶ್ರೀಗಳು, ಸಲಗರದ ಡಾ. ಈಶ್ವರಾನಂದ ಶ್ರೀಗಳು, ಮೈಂದರ್ಗಿಯ ಅಭಿನವ ರೇವಣಸಿದ್ಧ ಪಟ್ಟದ್ದೇವರು, ಮಸವಳ್ಳಿಯ ಓಂಕಾರೇಶ್ವರ ಶ್ರೀಗಳು ಪಾಲ್ಗೊಂಡಿದ್ದರು.

ನ್ಯಾಯಾಧೀಶ ಮನಿಷಾ ಭಂಗಿ, ಮಹಾಜನ, ಡಾ.ಬಿ.ಬಿ. ಪೂಜಾರಿ, ಲೀಲಾವತಿ ಮಡಕಿ, ವಿಜಯಕುಮಾರ ಹತ್ತುರೆ, ಚನ್ನವೀರ ಭದ್ರೇಶ್ವರಮಠ, ಸಿದ್ಧಾರೂಢ ಹಿಟ್ನಳ್ಳಿ, ಶಿವಾನಂದ ಗೋಗಾವ, ಅಶೋಕ ಅಂಕಲಗಿ, ಚನ್ನಪ್ಪ ರೂಗೆ, ಮಲ್ಲಿನಾಥ ಕರಜಗಿ, ಪರಮೇಶ್ವರ ಕಂಚೆ, ಸಿದ್ಧರಾಮ ನಿಂಬಾಳ, ಸುಜಾತಾ ಪಾಟೀಲ, ಪ್ರಕಾಶ ಫುಲಾರಿ, ಮಹಾಂತೇಶ ಕುಂಬಾರ, ಶಿವಪುತ್ರ ಭಾವಿ, ಸಿದ್ಧರಾಮ ಬಿಜ್ಜರಗಿ, ರಾಜೇಂದ್ರ ಖಸಗಿ, ಸುಧಾ ಅಳ್ಳಿಮೋರೆ, ಶಶಿಕಲಾ ರಾಮಪೂರೆ, ಮುಂತಾದವರು ಉಪಸ್ಥಿತರಿದ್ದರು.

ಶಂಕರಲಿಂಗ ಮಹಿಳಾ ಮಂಡಳಿ, ಜಾಲಿಂಮ ಮಹಿಳಾ ಸದಸ್ಯರು ಮತ್ತು ಅಂಕಿತಾ ಅವರಿಂದ ವಚನ ನೃತ್ಯ ನಡೆಯಿತು. ಸಂಗಮೇಶ ತೂಗರಖೇಡ ಕಾರ್ಯಕ್ರಮ ನಿರೂಪಿಸಿದರು, ಸಿದ್ಧಾರೂಢ ಗವಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
1 Comment

Leave a Reply

Your email address will not be published. Required fields are marked *