“ಯಾರೋ ಹೇಳಿದರೆಂದು ಕಣ್ಣುಮುಚ್ಚಿ ನಂಬದೇ ಅದನ್ನು ಒರೆಗೆ ಹಚ್ಚಿ ನೋಡುವ, ವೈಚಾರಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಸಬೇಕು.”
ಸೊಲ್ಲಾಪುರ
ಅಜ್ಜಂಪುರ ಶೆಟ್ರು ಸೇವಾಟ್ರಸ್ಟ, ಬಸವಬಳಗ ದಾವಣಗೆರೆ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿ ನಡೆದ ನಾಲ್ಕು ದಿನಗಳ ಶರಣತತ್ವ ಕಮ್ಮಟ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಇಲ್ಲಿಯ ಲಿಂಗಶೆಟ್ಟಿ ಸಾಂಸ್ಕೃತಿಕ ಸಭಾಭವನದಲ್ಲಿ ಡಿ.೨೭ ರಂದು ಸಾಯಂಕಾಲ ಆರಂಭವಾದ ಕಮ್ಮಟ ಸೋಮವಾರ ಸಮಾರೋಪಗೊಂಡಿತು.

ಕರ್ನಾಟಕ ಸೇರಿದಂತೆ ಮಹಾ ರಾಷ್ಟ್ರದ ವಿವಿಧ ಭಾಗದಿಂದ ಬಂದ ಬಸವಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಲಿಂಗಾಯತ ಧರ್ಮದ ಅಷ್ಟಾವರಣ, ಷಟಸ್ಥಲ, ಪಂಚಾಚಾರದ ಕುರಿತಾದ ಗೋಷ್ಠಿಗಳಲ್ಲಿ ವಿವಿಧ ತಜ್ಞರು ಅನುಭಾವ ನೀಡಿದರು.
ಭಾನುವಾರದ ಸಂಜೆ ಮಾದನ ಹಿಪ್ಪರಗಾ ಅಭಿನವ ಶಿವಲಿಂಗ ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿಯವರು ಅನುಭಾವ ನೀಡಿದರು. ಇಲ್ಲಿಯವರೆಗೆ ಬಸವಾದಿ ಶರಣರ ವಚನಗಳು ದೇಶವಿದೇಶದ ೪೩ ಭಾಷೆಗಳಲ್ಲಿ ಭಾಷಾಂತರವಾಗಿದೆ. ಬಸವಾದಿ ಶರಣರ ತತ್ವ ಪ್ರಸಾರದಲ್ಲಿ ತಾಯಂದಿರರು ಜವಾಬ್ದಾರಿ ವಹಿಸಬೇಕು. ಇಷ್ಟಲಿಂಗದ ಮೇಲೆ ಅಮೇರಿಕಾದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ನಡೆದಿದ್ದು ಕೆಲವೇ ದಿನಗಳಲ್ಲಿ ಅದರ ಫಲಿತಾಂಶ ಬರಲಿದೆ. ೨೦೨೫ ಹೊಸ ವರ್ಷದಲ್ಲಿ ಶರಣ ಸಂಸ್ಕೃತಿ ಬೆಳೆದುಬರಲಿ ಎಂದು ಹಾರೈಸಿದರು.

ಕಲಬುರಗಿಯ ಸೂರ್ಯಕಾಂತ ಹೂಗಾರ `ಮಕ್ಕಳಲ್ಲಿ ಲಿಂಗಾಯತ ಧರ್ಮಪ್ರಜ್ಞೆಯ ಅವಶ್ಯಕತೆ’ ವಿಷಯದ ಕುರಿತು ಮಾತನಾಡುತ್ತಾ, ಮಕ್ಕಳು ಮುಂದಿನ ಪ್ರಜೆಗಳಾದ್ದರಿಂದ ಅವರಲ್ಲಿ ಧರ್ಮ ಪ್ರಜ್ಞೆ ಬೆಳೆಸುವದು ಅತ್ಯಾವಶ್ಯಕವಾಗಿದೆ. ಯಾವುದೋ ಒಂದು ವಿಷಯ ಯಾರೋ ಹೇಳಿದರೆಂದು ಕಣ್ಣುಮುಚ್ಚಿ ನಂಬದೇ ಅದನ್ನು ಒರೆಗೆ ಹಚ್ಚಿ ನೋಡುವ, ವೈಚಾರಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಯಬೇಕು. ಕರ್ಮ ಸಿದ್ಧಾಂತ ಬದಿಗೆ ಸರಿಸಿ ಕಾಯಕ ಸಿದ್ದಾಂತ ಮಕ್ಕಳಲ್ಲಿ ಬೆಳೆಸಬೇಕು. ಸಕಲ ಜೀವಿಗಳಿಗೆ ಲೇಸನೇ ಬಯಸುವ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಬಿತ್ತುವ ಕಾರ್ಯ ಶಿಕ್ಷಕರಿಂದ ಸಾಧ್ಯವಾಗುತ್ತದೆ ಅದನ್ನು ಶಿಕ್ಷಕರು ಜವಾಬ್ದಾರಿಯುತವಾಗಿ ಮಾಡಬೇಕು ಎಂದರು.

ಅಕ್ಕಲಕೋಟದ ಡಾ.ಗುರಲಿಂಗಪ್ಪ ಧಬಾಲೆ ಮಾತನಾಡಿ, ಬಸವಣ್ಣನವರು ಕೇವಲ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಸಾಂಸ್ಕೃತಿಕ ನಾಯಕರಲ್ಲ. ಅವರು ಪ್ರಪಂಚದ ಸಾಂಸ್ಕೃತಿಕ ನಾಯಕರು. ಅವರದು ಪ್ರಪಂಚದ ಮಹಾಮೇರು ವ್ಯಕ್ತಿತ್ವ. ಅಂಥವರನ್ನು ಲಿಂಗಾಯತರು ಮರೆಯದೆ ಅವರು ಹೇಳಿದ ತತ್ವ -ಸಿದ್ಧಾಂತಗಳ ಮೇಲೆ ಜೀವನ ನಡೆಸಿದಾಗ ಮಾತ್ರ ನಮ್ಮ ಬದುಕು ಪಾವನ ಎಂದರು.
ಸಿಂಧೂತಾಯಿ ಕಾಡಾದಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯ ಡಾ. ಶರಣಬಸವ ದಾಮಾ, ಅವಿನಾಶ ಭೊಸಿಕರ, ಅಜ್ಜಂಪುರ ಸೇವಾ ಟ್ರಸ್ಟನ ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು, ಷಡಕ್ಷರಿ ಅಜ್ಜಂಪುರ, ರುದ್ರಪ್ಪ ಪಗಡದಿನ್ನಿ, ಕಲ್ಬುರ್ಗಿ ಜಾಲಿಂಮದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವ್ಕರ, ಸಿದ್ದರಾಮ ಯಳವಂತಿಗಿ, ಅಕ್ಕ ಗಂಗಾಬಿಕಾ, ಜಾಲಿಂಮದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರಾಜಶೇಖರ ತಂಬಾಕೆ, ಕಾರ್ಯದರ್ಶಿ ಬಸವರಾಜ ಕನಜೆ, ಅಮರನಾಥ ಸೊಲಪುರೆ, ಸೊಲ್ಲಾಪುರ ಜಿಲ್ಲಾದ್ಯಕ್ಷ ಶಿವಾನಂದ ಗೋಗಾವ, ಮಹಿಳಾಧ್ಯಕ್ಷೆ ರಾಜಶ್ರೀ ಥಳಂಗೆ, ದಶರಥ ವಡತಿಲೆ, ಚನ್ನವೀರ ಭದ್ರೇಶ್ವರಮಠ, ವಿಜಯಕುಮಾರ ಭಾವೆ, ರಾಜೇಂದ್ರ ಖಸಗಿ, ಲಕ್ಷ್ಮಣ ಚಲಗೇರಿ, ಮಲ್ಲಿಕಾರ್ಜುನ ಮುಲಗೆ, ಬಸವರಾಜ ಚಾಕಾಯಿ, ಸೇರಿದಂತೆ ಹಲವರು ಇದ್ದರು.
ಇಲ್ಲಿಯ ಶಂಕರಲಿಂಗ ಮಹಿಳಾ ಮಂಡಳಿ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಸದಸ್ಯರು ಸಾದರ ಪಡಿಸಿದ ಅನುಭವ ಮಂಟಪದಲ್ಲಿ ಅಕ್ಕ- ಅಲ್ಲಮರ ಸಂವಾದ ಕುರಿತಾತ ರೂಪಕ, ವಾಗದರಿ ಕನ್ನಡ ಪ್ರಾಥಮಿಕ ಶಾಲೆಯ ಬಾಲಕಿಯರು ಪ್ರಸ್ತುತ ಪಡಿಸಿದ ವಚನ ನೃತ್ಯ ಎಲ್ಲರ ಜನಮನ ಸೂರೆಗೊಂಡಿತು.

ಬೆಳಗಿನ ಜಾವದಲ್ಲಿ ನಡೆದ ಇಷ್ಟಲಿಂಗ ಪೂಜೆ, ಪಥ ಸಂಚಲನ, ವಿವಿಧ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಕಮ್ಮಟ ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ನಡೆಯಿತು.

