ಸಿರಿಗೆರೆ
ಸಿರಿಗೆರೆ ಮಠದ ಆಸ್ತಿ ಕಬಳಿಕೆ ಆರೋಪವನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ತಳ್ಳಿ ಹಾಕಿದರು.
ತರಳಬಾಳು ಮಠದಲ್ಲಿ ಸೋಮವಾರ ನಡೆದ ಭಕ್ತರ ಸಭೆಯಲ್ಲಿ “₹2,000 ಕೋಟಿ ಬೆಲೆಯ ಮಠದ ಆಸ್ತಿಯನ್ನು ನಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದೇವೆ ಎಂದು ಆಪಾದಿಸುವವರು ಅದನ್ನು ಭಕ್ತರ ಮುಂದೆ ಸಾಬೀತುಪಡಿಸಲಿ,” ಎಂದು ಸ್ವಾಮೀಜಿ ಸವಾಲು ಹಾಕಿದರು.
‘ಮಠದ ಆಸ್ತಿ ಹಿರಿಯ ಗುರುಗಳ ಹೆಸರಿನಲ್ಲಿದೆ. ಇವೆಲ್ಲವೂ ಮಠದ ಆಸ್ತಿಗಳೇ ಅಂತ ಟ್ರಸ್ಟ್ ಡೀಡ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ನಾವೇನು ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದೇವಾ?’ ಎಂದು ಪ್ರಶ್ನಿಸಿದರು.
‘ನಾವು ಪಟ್ಟಕ್ಕೆ ಬಂದಮೇಲೆ ಖರೀದಿ ಮಾಡಿದ ಆಸ್ತಿಗಳು ನಮ್ಮ ಹೆಸರಲ್ಲೂ ಇವೆ, ಮಠದ ಹೆಸರಲ್ಲೂ ಇದೆ. ವೈಯಕ್ತಿಕ ಹೆಸರಿಗೆ ಮಾಡುವುದು ಅನಿವಾರ್ಯವಾಗಿ ಬಂದಿತ್ತು. ತುರ್ತಾಗಿ ಆಸ್ತಿ ಖರೀದಿಸಲು ಡಿಸಿಗಳ ಅನುಮತಿ ಬೇಕಾಗುತ್ತೆ. ಅದು ತಡವಾದ್ರೆ ಅವ್ರು ಕಾಯೋದಿಲ್ಲ, ಹಾಗಾಗಿ ನಮ್ಮ ಹೆಸರಿಗೆ ಮಾಡಿಸಿದ್ದೇವೆ. ನಮ್ಮ ಹೆಸರಿಗಿದ್ದ ಮಾತ್ರಕ್ಕೆ ನಮ್ಮ ಸ್ವಂತ ಆಸ್ತಿ ಆಗಲ್ಲ.’ ಎಂದರು.
1990 ರಲ್ಲಿ ಕಾನೂನು ಪ್ರಕಾರ ಮಠದ ರೀತಿ ರಿವಾಜಿನಂತೆ ಟ್ರಸ್ಟ್ ಡೀಡ್ ಮಾಡಿದ್ದೇವೆ. ಯಾವುದೇ ಆಸ್ತಿಯಿದ್ದರೂ ಮಠದಿಂದ ವ್ಯವಹರಿಸಿದ್ದರೆ, ಅದು ಮಠಕ್ಕೆ ಸೇರಿದ್ದೇ ಹೊರತು ಸ್ವಂತ ಅಲ್ಲ ಎಂದು ಘೋಷಣೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಸ್ವಾಮೀಜಿಯನ್ನು ಬೆಂಬಲಿಸಿ 36 ಹಳ್ಳಿಗಳ ಸಾವಿರಾರು ಭಕ್ತರು ಇಲ್ಲಿನ ಬೆನ್ನೂರು ಸರ್ಕಲ್‌ನಿಂದ ಸಿರಿಗೆರೆಯವರೆಗೂ 6 ಕಿ.ಮೀ. ಪಾದಯಾತ್ರೆ ಹಾಗೂ ಬೈಕ್ ಜಾಥಾ ಸೋಮವಾರ ನಡೆಸಿದರು.
ಬೆನ್ನೂರು ಸರ್ಕಲ್‌ನಲ್ಲಿ ಸೇರಿದ್ದ ಭಕ್ತರು, ಶ್ರೀಗಳ ವಿರುದ್ಧ ದಾವಣಗೆರೆಯಲ್ಲಿ ಭಾನುವಾರ ಸಭೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್, ಉದ್ಯಮಿ ಅಣಬೇರು ರಾಜಣ್ಣ ವಿರುದ್ಧ ಘೋಷಣೆ ಕೂಗಿದರು.
ಶ್ರೀಗಳ ಪರ ಘೋಷಣೆ ಕೂಗುತ್ತಾ ಕಾಲ್ನಡಿಗೆ, ಬೈಕ್ ಜಾಥಾ ಮೂಲಕ ಮಠದ ಆವರಣ ತಲುಪಿ, ಶ್ರೀಗಳನ್ನು ಬೆಂಬಲಿಸಿದ ಘೋಷಣಾ ಪತ್ರಗಳನ್ನು ಸಮರ್ಪಿಸಿದರು.