ಬೀದರ್
ಬಸವಣ್ಣನವರ ಜೀವನದ ಮೇಲೆ ಬೆಳಕು ಚೆಲ್ಲುವ ಕಲಾಕೃತಿಗಳನ್ನು ರಚಿಸಿರುವ ಹಿರಿಯ ಚಿತ್ರ ಕಲಾವಿದ ಸಿ.ಬಿ. ಸೋಮಶೆಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಮುಖ್ಯ ಮಂತ್ರಿಗಳಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ರವಿವಾರ ಹೇಳಿದರು.
ಸಿ.ಬಿ ಸೋಮಶೆಟ್ಟಿ ಕಲಾ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಚನ ಸಮೂಹ ಸಂಸ್ಥೆ ಆಯೋಜಿಸಿರುವ ಸಿ.ಬಿ ಸೋಮಶೆಟ್ಟಿ ಆರ್ಟ್ ಗ್ಯಾಲರಿ ಹಾಗೂ ಶ್ರೀಗುರುಬಸವ ಚಿತ್ರಚರಿತ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಖಂಡ್ರೆ ‘ಆರ್ಟ್ ಗ್ಯಾಲರಿ’ ಉದ್ಘಾಟಿಸಿದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಅವರು ಚಿತ್ರ ಸಂಪುಟ ಬಿಡುಗಡೆಗೊಳಿಸಿದರು.
ಬಸವಣ್ಣನವರ ಜನ್ಮದಿಂದ ಹಿಡಿದು ಲಿಂಗೈಕ್ಯದವರೆಗೆ ನಡೆದ ಬೆಳವಣಿಗೆಗಳನ್ನು ತನ್ನ ಕುಂಚದಲ್ಲಿ ಸೆರೆಹಿಡಿದು ತನ್ನ ಸ್ವಂತ ಖರ್ಚಿನಿಂದ ಆರ್ಟ್ ಗ್ಯಾಲರಿ ನಿರ್ಮಿಸಿರುವುದು ಸ್ತುತ್ಯಾರ್ಹವಾಗಿದೆ ಎಂದು ಖಂಡ್ರೆ ನುಡಿದರು.
78ನೆ ವಯಸ್ಸಿನಲ್ಲಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ಬದಿಗೊತ್ತಿ ಸಮಾಜಕ್ಕೆ ಕೊಡುಗೈ ದಾನಿಗಳಾಗಿ ಪರಿಶ್ರಮ ಮಾಡಿರುವದು ಶ್ಲಾಘನಿಯ ಕಾರ್ಯ.
ಮುಖ್ಯ ಅತಿಥಿಯಾಗಿ ಬಂದಿದ್ದ ಬೈಲೂರ ನಿಷ್ಕಲ ಮಂಟಪದ ನಿಜಗುಣ ಪ್ರಭು ಸ್ವಾಮೀಜಿ ಮಹಾನ್ ಕಲಾಕೃತಿಗಳ ಮೂಲಕ 12ನೇ ಶತಮಾನದ ಸಮಾಜ ಸುಧಾಕರ ಬಸವಣ್ಣನವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೆಲಸ ಕಲಾವಿದ ಸಿ.ಬಿ. ಸೋಮಶೆಟ್ಟಿ ಅವರು ಮಾಡಿದ್ದಾರೆ. ಅವರ ಕೆಲಸ ಬಹಳ ಶ್ರೇಷ್ಠವಾದುದು ಎಂದರು.
ಕಲಾವಿದ ಸೋಮಶೆಟ್ಟಿ ಅವರು ತಮ್ಮ ವೈಯಕ್ತಿಕ ಸುಖವನ್ನು ತ್ಯಜಿಸಿ, ಶಿಕ್ಷಕ ವೃತ್ತಿಯಿಂದ ಗಳಿಸಿದ ₹40 ಲಕ್ಷವನ್ನು ವಿನಿಯೋಗಿಸಿ, 17 ವರ್ಷ ತಪಸ್ಸಿನಂತೆ ಕೆಲಸ ಮಾಡಿ ಬಸವಣ್ಣನ ಜನ್ಮದಿಂದ ಲಿಂಗೈಕ್ಯರಾಗುವ ಅವಧಿಯ ಪ್ರಮುಖ ಘಟ್ಟಗಳನ್ನು ಚಿತ್ರಗಳಲ್ಲಿ ಸೋಮಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ಜಲವರ್ಣದ ಕಲಾಕೃತಿಗಳನ್ನು ನೋಡುತ್ತಿದ್ದರೆ 12ನೇ ಶತಮಾನದ ಘಟನಾವಳಿಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ ಎಂದರು.
ಯಾವುದೇ ಪ್ರಶಸ್ತಿ, ಸನ್ಮಾನಕ್ಕಾಗಿ ಅವರು ಈ ಕೆಲಸ ಮಾಡಿಲ್ಲ. ಬಸವಣ್ಣನವರ ಸಾಮಾಜಿಕ ನ್ಯಾಯದ ತತ್ವಗಳು ಜನಮನಕ್ಕೆ ತಲುಪಲಿ ಎಂಬ ಮಹದುದ್ದೇಶ ಇದರಲ್ಲಿದೆ ಎಂದು ತಿಳಿಸಿದರು.

ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಬಸವಣ್ಣನವರ ಕಾಯಕ ಸಿದ್ಧಾಂತ ಅಳವಡಿಸಿಕೊಂಡು ತಮ್ಮ ಇಡಿ ಜೀವನ ಸೋಮಶೆಟ್ಟಿ ಬಸವಮಯವಾಗಿಸಿ ಕೊಂಡಿದ್ದಾರೆ.
ಬೀದರ ಪಾರಂಪರಿಕ ಇತಿಹಾಸದಲ್ಲಿ ಚ.ಬಿ ಸೋಮಶೆಟ್ಟಿ ಚಿತ್ರಾಲಯ ಸೇರ್ಪಡೆ ಮಾಡಲು ಶ್ರಮಿಸುವುದಾಗಿ ಹೇಳಿದರು. ಅವರ ಶಾಂತ ಸ್ವಭಾವ ಬಸವ ನಿಷ್ಟೆ ನಮ್ಮನ್ನು ಸಂಸ್ಕೃತಿಕವಾಗಿ ಬದುಕಲು ಪ್ರೇರಣೆ ನೀಡಿದೆ ಎಂದು ನುಡಿದರು.
50 ಸಾವಿರ ದೇಣಿಗೆ
ನಿವೃತ್ತ ಚಿತ್ರಕಲಾ ಶಿಕ್ಷಕ ಸಿ.ಬಿ. ಸೋಮಶೆಟ್ಟಿ ಅವರು ಇಲ್ಲಿಯ ಬಸವನಗರದಲ್ಲಿ ನಿರ್ಮಿಸಿರುವ ಬಸವಣ್ಣನವರ ಜೀವನ ಚರಿತ್ರೆ ಬಿಂಬಿಸುವ ಚಿತ್ರಗಳ ‘ಸಿ.ಬಿ. ಸೋಮಶೆಟ್ಟಿ ಆರ್ಟ್ ಗ್ಯಾಲರಿ’ಗೆ ಬಸವ ಕಾಯಕ ದಾಸೋಹ (ಬಿಕೆಡಿ) ಫೌಂಡೇಷನ್ ರೂ. 50 ಸಾವಿರ ದೇಣಿಗೆ ನೀಡಿದೆ.
ಭಾನುವಾರ ನಡೆದ ಆರ್ಟ್ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ಆರ್ಟ್ ಗ್ಯಾಲರಿಯ ಸ್ಥಾಪಕ ಸಿ.ಬಿ. ಸೋಮಶೆಟ್ಟಿ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ, ಗ್ರಂಥದ ಲೇಖಕರಾದ ಬಸವಕಲ್ಯಾಣದ ಗಾಯತ್ರಿ ತಾಯಿ, ಗಂಗಾಧರ ದೇವರು, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಕಾಶ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಷ್ಣುಸಿಂಗ್ ಠಾಕೂರ್, ಬಸವರಾಜ ಧನ್ನೂರ, ಅರುಣಕುಮಾರ ಹೊತಪೇಟೆ, ಸಿದ್ರಾಮಪ್ಪ ಮಾಸಿಮಾಡೆ, ಕಲಾವಿದ ಎ.ಎಸ್. ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಲಿಂಗಾರತಿ ನಾವದಗೇರೆ, ಶಿವಲಿಂಗ ಎರ್‌ಗಲ, ಚನ್ನಬಸಪ್ಪ ನೌಬಾದೆ, ಶರಣಪ್ಪ ಮಿಠಾರೆ, ರೇವಣಪ್ಪ ಮೂಲಗೆ, ಅಲ್ಲಮಪ್ರಭು ನಾವದಗೇರೆ, ವಿಜಯಕುಮಾರ ಸೋನಾರೆ, ವಿನಯ್ ಕುಮಾರ್ ಮಾಳಗೆ, ಸುನೀಲ ಪಾಟೀಲ ಗಾದಗಿ, ಉಮೇಶ ಅಷ್ಟೂರೆ, ಬಸವರಾಜ ಅನಗವಾಡಿ, ಕಂಟೆಪ್ಪ ಗಂದಿಗುಡಿ ಮತ್ತಿತರರು ಇದ್ದರು.