ಬಸವ ತತ್ವದ ರಾಜಕಾರಣಿ ಎಂದು ಹೆಸರು ಮಾಡಿದ್ದ ಎಸ್ ಎಸ್ ಪಾಟೀಲರು ಈಗ ಪಲ್ಟಿ ಹೊಡೆದಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.
ಮುಂಡರಗಿ
ಈ ತಿಂಗಳ 27 ಮತ್ತು 28ರಂದು ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಧರ್ಮ ಜಾಗೃತಿ ಸಭೆ ಮತ್ತು ಇಷ್ಟಲಿಂಗ ಪೂಜೆ ನಡೆಯುತ್ತಿದೆ.
ಈ ಕಾರ್ಯಕ್ರಮ ಬಸವ ತತ್ವದ ರಾಜಕಾರಣಿ ಎಂದೇ ಹೆಸರು ಮಾಡಿರುವ ಮಾಜಿ ಮಂತ್ರಿ ಎಸ್.ಎಸ್. ಪಾಟೀಲರ ನೇತೃತ್ವದಲ್ಲಿ, ಅವರ ಊರಲ್ಲಿಯೇ ನಡೆಯುತ್ತಿರುವುದು ಶರಣ ಸಮಾಜದ ಗಮನ ಸೆಳೆದಿದೆ. “ಹೌದು, ಕಾರ್ಯಕ್ರಮ ನನ್ನ ಅಧ್ಯಕ್ಷತೆಯಲ್ಲಿಯೇ ನಡೆಯುತ್ತಿದೆ,” ಎಂದು ಪಾಟೀಲರು ಬಸವ ಮೀಡಿಯಾಕ್ಕೆ ಹೇಳಿದರು.
ಮುಂದುವರೆದು “ಅಡ್ಡ ಪಲ್ಲಕ್ಕಿ ಉತ್ಸವ ಮಾಡಬಾರದು ಅನ್ನೋದು ನನ್ನ ಅಭಿಪ್ರಾಯ. ಇದು ತಪ್ಪು ಅಂತ ನನ್ನ ಅಧ್ಯಕ್ಷ ಭಾಷಣದಾಗೆ ಹೇಳ್ತೀನಿ,” ಅಂತಲೂ ಹೇಳಿದರು.
ನಿಜವಾಗಿಯೂ ನಿಮ್ಮ ಭಾಷಣದಲ್ಲಿ ಅಡ್ಡಪಲ್ಲಕ್ಕಿ ವಿರೋಧಿಸ್ತೀರಾ ಎಂದು ಕೇಳಿದಾಗ, “yesss” ಎಂದು ಜೋರಾಗಿ ಇಂಗ್ಲೀಷಿನಲ್ಲಿ ಉತ್ತರಿಸಿದರು.

90 ವರ್ಷದ ಅನುಭವಿ ಪಾಟೀಲರು ಒಂದು ದೊಡ್ಡ ಗೊಂದಲದಲ್ಲಿದ್ದಾರೆ ಎಂದು ಅನಿಸಿತು.
ಬಸವ ತತ್ವದ ರಾಜಕಾರಣಿ ಎಂದು ಇಷ್ಟು ವರ್ಷ ಹೆಸರು ಮಾಡಿದ್ದರು. ಒಂದು ವರ್ಷದ ಹಿಂದೆ ಧಾರವಾಡದಲ್ಲಿ ನಡೆದ ಪಂಚ ಪೀಠಗಳ ಕಾರ್ಯಕ್ರಮದಲ್ಲಿ ಯಾವ ಪಂಚಾಚಾರ್ಯರ ಹೆಸರೂ ಹೇಳದೆ ಬಸವಾದಿ ಶರಣರನ್ನು ಸ್ಮರಿಸಿಕೊಂಡು, ದೀರ್ಘವಾದ ಬಸವ ಸ್ತುತಿಯಿಂದ ಭಾಷಣ ಶುರು ಮಾಡಿದ ಪಾಟೀಲರು ಈಗ ಪಲ್ಟಿ ಹೊಡೆದಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.
ಈ ಪಲ್ಟಿಯ ಕಾರಣಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಕಷ್ಟೂ ಟೀಕೆಗಳೂ ಬರುತ್ತಿವೆ. ಅಡ್ಡ ಪಲ್ಲಕ್ಕಿಗೆ ಹೆಗಲು ಕೊಟ್ಟರೂ ತಾವು ಬಸವ ತತ್ವ ನಿಷ್ಠರೆಂದು ತೋರಿಸಲು ಪಾಟೀಲರು ಹೆಣಗಾಡುತ್ತಿದ್ದಾರೆ. ಅವರಿಗೆ ಕರೆ ಮಾಡಿ ಪ್ರಶ್ನಿಸಿದವರಿಗೆಲ್ಲಾ ತಮ್ಮ ಹಳೆಯ ವಿಶ್ವಗುರು ಬಸವಣ್ಣನವರ ವೇಷಧಾರಿ ಫೋಟೋ ಕಳಿಸುತ್ತಿದ್ದಾರೆ.
ಪಾಟೀಲರು ವೈಯಕ್ತಿಕವಾಗಿ ಅಡ್ಡ ಪಲ್ಲಕ್ಕಿ ವಿರೋಧಿಸಿದರೆ ಈ ಪಂಚಪೀಠದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ಏಕೆ? ಅಹ್ವಾನ ಪತ್ರಿಕೆಯಲ್ಲಿ ಫೋಟೋ ಹಾಕಿಸಿಕೊಂಡು ಕಾರ್ಯಕ್ರಮವನ್ನು ಮುಕ್ತವಾಗಿ ಬೆಂಬಲಿಸುತ್ತಿರುವುದು ಏಕೆ?
“ಊರಾಗ ಅವರು ಮಾಡಾಕ್ ಹತ್ತಿದ್ರ ಬೇಡ ಅನ್ನಾಕ ಆಗೋದಿಲ್ಲ…ಅವರದೇ ಆದ ಗುಂಪಿದೆ
ಮತ್ತೆ ಊರಾಗ ಎರಡು ಭಾಗ ಆಗ್ತಾವ. ಎಲ್ಲಾ ಹೊಂದ್ಕೊಂಡ ಹೋಗಬೇಕಲ್ರೀ…ಅನಿವಾರ್ಯ,” ಎಂದು ಹೇಳುತ್ತಾರೆ.
“ಎಲ್ಲಾರೂ ಹೊಂದಾಣಿಕೆ ಮಾಡಿಕೊಳ್ಳದೆ ಹೋದರೆ ಮುಂದೆ ನಮ್ಮ ಸಮಾಜನೇ ಕೆಟ್ಟು ಹೋಗ್ತದೆ, ಎಲ್ಲಾ ಉಪಜಾತಿ ಮಾಡ್ಕೊಂಡ್ ಹೊಂಟ್ರ ಲಿಂಗಾಯತ ಧರ್ಮ ಹಾಳಾಗ್ತದೆ,” ಎಂದು ಎಚ್ಚರಿಕೆಯನ್ನೂ ನೀಡುತ್ತಾರೆ.
ಬಸವ ತತ್ವದವರು ಅಡ್ಡ ಪಲ್ಲಕ್ಕಿಗೆ ಹೆಗಲು ಕೊಟ್ಟರೆ ಜನರಿಗೆ ತಪ್ಪು ಸಂದೇಶ ಹೋಗುವುದಿಲ್ಲವೆ?
“ಏನೂ ಆಗೂದಿಲ್ರಿ, ಎರಡೂ ಕಡೆಯ ಜನರನ್ನ ಒಂದೇ ವೇದಿಕೆಗೆ ತಂದು ಹೊಂದಾಣಿಕೆ ಮಾಡಬೇಕು, ಅವರದೂ ಒಂದೂ ಶಕ್ತಿ ಇದೆ, ಇವರದೂ ಒಂದು ಶಕ್ತಿ ಇದೆ. ಹೀಗೆ ಗುದ್ದಾಡಿಕೊಂಡು ಹೊಂಟ್ರೆ ಹೆಂಗ.
ಬಸವ ಧರ್ಮವೆಂದರೆ ಸ್ವಧರ್ಮ ನಿಷ್ಠೆ, ಪರ ಧರ್ಮ ಸಹಿಷ್ಣುತೆ. ಎಲ್ಲರನ್ನೂ ಒಂದು ಮಾಡಬೇಕು ಅನ್ನೋದು ನನ್ನ ಉದ್ಧೇಶ. ಲಿಂಗಾಯತ ಮಹಾಸಭಾ, ವೀರಶೈವ ಮಹಾಸಭಾ ಎರಡೂ ಕೂಡಿಸಬೇಕು.”

ಹಿಂದೆಯೂ ಈ ರೀತಿ ಕಾರ್ಯಕ್ರಮ ನಡೆಸಿದ್ದಾರಂತೆ.
“ಹಿಂದೆನೂ ಈ ತರ ಕಾರ್ಯಕ್ರಮ ಮಾಡೀನಿ. ಇವರ ಕಾರ್ಯಕ್ರಮಾನೂ ಮಾಡೀನಿ, ಅವರ ಕಾರ್ಯಕ್ರಮನೂ ಮಾಡೀನಿ. ಈಗಲ್ಲ, 30-40 ವರ್ಷದ ಹಿಂದೇನೇ ಮಾಡೀನಿ,” ಎನ್ನುತ್ತಾರೆ.
ಸಮಾಜ ಬದಲಾಗುತ್ತಿರುವುದರಿಂದ ಈ ರೀತಿಯ ಹೊಂದಾಣಿಕೆ ಕಾರ್ಯಕ್ರಮಗಳು ಅನಿವಾರ್ಯ ಎನ್ನುವುದು ಎಸ್. ಎಸ್. ಪಾಟೀಲರ ಅಭಿಪ್ರಾಯ
“ಅವರೂ ಈಗ (ಪಂಚ ಪೀಠದವರು) ಒಂದು ಲೆಕ್ಕಕ್ಕ ಬಂದಾರ. ಮೊದಲೆಲ್ಲಾ ಬಸವಣ್ಣನವರ ಫೋಟೋ ಹಾಕುತ್ತಾ ಇರಲಿಲ್ಲ, ಈಗ ಹಾಕೋ ಅಷ್ಟಕ್ಕಾದ್ರು ಬಂದಿದ್ದಾರ, ಬಸವಣ್ಣನ ವಚನ ಹೇಳಾಕ ಶುರು ಮಾಡ್ಯಾರ, ನಮ್ಮ ಸಮನಾಗಿ ಕೂರಾಕ್ ಹತ್ಯಾರ, ಮೊದಲು ಎತ್ತರದ ಕುರ್ಚಿ ಹಾಕ್ಬೇಕು ಅಂತಿದ್ರು. ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು,” ಎಂದು ಸಮರ್ಥಿಸಿಕೊಂಡರು.
ಪಾಟೀಲರು ರೇಣುಕಾಚಾರ್ಯರನ್ನು ನಂಬುತ್ತಾರಾ?
“ನಂಬೋರು ನಂಬುತ್ತಾರೆ, ನಾವೇನ್ ಮಾಡಣ ಅದಕ್ಕೆ. ನಾವು ನಂಬೋದ್ ಬೇಡ, ಇಬ್ಬರನ್ನ ಒಂದಾಗಿಸಬೇಕು ಅನ್ನೋ ನಂಬಿಕೆ ನನ್ನದು.”
ದೊಡ್ಡ ಪ್ರಚಾರದೊಂದಿಗೆ ರೇಣುಕಾಚಾರ್ಯ ಜಯಂತಿ ಆಚರಣೆಯಾಗುತ್ತಿದೆ. ಇದರ ಬಗ್ಗೆ ಅವರ ಅಭಿಪ್ರಾಯವೇನು?
“ಮಾಡೋರು ಮಾಡ್ಲಿ. ಊರಾಗ್ ಎಲ್ಲಾರ್ನೂ ಕೂಡಿಸಿಕೊಂಡು ಹೊಂಟೀವಿ, ಆ ಕಡೆ ಉರುಸ್ ಗಳನ್ನೂ ಮಾಡ್ತೀವಿ ಈ ಕಡೆ ಜಾತ್ರೆಗಳನ್ನು ಮಾಡ್ತೀವಿ. ಮತ್ತ ಉರುಸ್ ಮಾಡಬೇಡಿರಿ ಅಂದ್ರೆ ನಡೀತದೇನ್ರಿ,” ಎಂದು ಕೇಳುತ್ತಾರೆ.
ಅಡ್ಡ ಪಲ್ಲಕ್ಕಿ ಕಾರ್ಯಕ್ರಮ ನಡೆಸುತ್ತಿರುವುದರ ವಿರುದ್ಧ ಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆಯನ್ನೂ ನೀಡಿದರು.
“ಎಲ್ಲಾರೂ ಬಸವಣ್ಣನ ಹೆಸರು ಹೇಳ್ತಾರ, ಆದರ ವಿರಕ್ತ ಮಠದಲ್ಲೇ ಈಗ ಬಸವಣ್ಣ ಇಲ್ಲ. ಯಾರ ಕೊರಳಾಗೂ, ಮನ್ಯಾಗೂ ಲಿಂಗಪ್ಪ ಇಲ್ಲ. ಮೊದಲು ಲಿಂಗಪ್ಪನ ಕಟ್ಟಬೇಕು, ಮೂಲ ಸಮಸ್ಯೆ ಅಲ್ಲೈತಿ.
ಲಿಂಗಾಯತ ಧರ್ಮಾನೆ ಉಳಿದಿಲ್ಲ ಎಲ್ಲಾರೂ ಮಾಂಸ ತಿಂತಾರೆ, ಎಲ್ಲಾ ಸುಡುಗಾಡು ಮಾಡ್ತಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವಿಷಯವಾಗಿ ಇತ್ತೀಚೆಗೆ ಅವರ ಆಪ್ತರೊಬ್ಬರು ಕರೆ ಮಾಡಿ ಅವರೊಂದಿಗೆ ಮಾತನಾಡಿದ್ದರು. “ಪಾಟೀಲರು ಒತ್ತಡದಲ್ಲಿದ್ದಾರೆ. ನಂಟೂ ಬೇಕು, ಗಂಟು ಬೇಕು ಅನ್ನುವ ಪರಿಸ್ಥಿತಿ ಅವರದಾಗಿದೆ,” ಎಂದು ಅವರು ಬಸವ ಮೀಡಿಯಾಗೆ ಹೇಳಿದರು.
ಡೋಂಗಿ
ಎಸ್ ಎಸ್ ಪಾಟೇಲರು ಡೋಂಗಿ ಬಸವಣ್ಣನವರ ಅನುಯಾಯಿಗಳು
ಎಸ್.ಎಸ್.ಪಾಟೀಲ್ ರದು ಎಡಬಿಡಂಗಿ ವ್ಯಕ್ತಿತ್ವ ಅಂತ ಅನ್ನಿಸುತ್ತೆ. ಅಥವಾ ಅನುಕೂಲ ಸಿಂಧು ರಾಜಕೀಯ ನೀತಿ ಎನ್ನ ಬಹುದು. ಹೇಗೊ 90 ವರ್ಷ ಆಗಿದೆ. ರಾಜಕೀಯ ಜೀವನ ಮುಗಿದಿದೆ. ಈಗಲಾದರೂ ಅವರಿಗೆ ವಿಶ್ವಗುರು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಬಗ್ಗೆ ಒಲವು ಇದ್ದರೆ ಅಡ್ಡಪಲ್ಲಕ್ಕಿ ಉತ್ಸವ ಮತ್ತು ರೇಣುಕಾಚಾರ್ಯ ಜಯಂತಿ ಆಚರಣೆ ಯಿಂದ ದೂರ ಇದ್ದರೆ ಒಳಿತು.
👍💯
ರಾಜಕೀಯ ಮಂದಿಗೆ ಪ್ರಚಾರ ಮುಖ್ಯ ತತ್ವಗಳಲ್ಲ……. ಪಾಪ ಮನೆಯಲ್ಲೇ ಕೂತು ಬೇಜಾರದಂಗ ಕಾಣಸ್ತಾತದ ಆಗ ಈ ಪಂಚಾಚಾರ್ಯರು ಸಿಕ್ಕಾರ…… ಪ್ರಚಾರ ಗಿಟ್ಟಿಸಿಕೊಲ್ಲಾಕ ಹತ್ಯಾರ ಅಷ್ಟೇ…… 😊
ರಾಜಕಾರಣಿಗಳು ವೋಟಿಗಾಗಿ ಏನು ಮಾಡಲು ಹಿಂದೆ ಸರಿಯುವದಿಲ್ಲ.
ಎಡ ಬಿಡಂಗಿ, ಢೋಂಗಿ ಬಸವಣ್ಣನವರ ಅನುಯಾಯಿ. ಊಸರವಳ್ಳಿ ತರಹ ಬಣ್ಣ ಬದಲಿಸುವವರು. ಬಸವ ದ್ರೋಹಿಗಳು. ಸ್ವಾರ್ಥಿಗಳು, ಸಮಯ ಸಾದಕರು.
ಗೌರವಾನ್ವಿತ ಶರಣಜೀವಿಗಳಾದ ಎಸ್ ಎಸ್ ಪಾಟೀಲ ರವರು ಪಂಚಾಚಾರ್ಯ ಪೀಠದ ಕಾಯ೯ಕ್ರಮದಿಂದ ಅಂತರ ಕಾಯ್ದುಕೊಳ್ಳಬೇಕಾಗಿತ್ತು.
ಪೂರ್ವಾಪರವನ್ನು ಶಾಂತಚಿತ್ತದಿಂದ ವಿವೇಚಿಸಬೇಕು. ಎಸ್. ಎಸ್. ಪಾಟೀಲರಿಗೆ ಇರುವ ಅನುಭವದಷ್ಟೂ ನಮಗೆ ವಯಸ್ಸಾಗಿಲ್ಲ.
ಲಿಂಗಾಯತ ನಿಜತತ್ವ ಆಚರಿಸುವವರು ಕೇವಲ 1-2%. ಲಿಂಗಾಯತ ಧರ್ಮ ಒಳಗೊಳ್ಳುವ ಸಂಸ್ಕೃತಿ.
ನಮ್ಮ ಮುಂದೆ ತುಂಬಾ ಸವಾಲುಗಳಿವೆ.
1. ಎಲ್ಲ ಕಾಯಕವರ್ಗದವರಲ್ಲಿ ನಾವು ಲಿಂಗಾಯತರು ಎನ್ನುವನಸ್ಥಿತಿಯೇ ಇಲ್ಲ. ಇವರೆಲ್ಲರನ್ನು ತಾವೂ ಲಿಂಗಾಯತರು ಎನ್ನುವ ಮನಸ್ಥಿತಿಗೆ ತರಬೇಕು.
2. ವೀರಶೈವರೆನ್ನುವವರ ಮನಸ್ಥಿತಿ ಕೂಡ ಹೀಗೆ ಇದೆ. ಅವರಿಗೂ ಮನವರಿಕೆಯಾಗುತ್ತಿದೆ. ಹೆಚ್ಚು ಕಡಿಮೆ ಕೊನೆಯ ಘಟ್ಟಕ್ಕೆ ಬಂದಿದ್ದಾರೆ. ತಾತ್ವಿಕ ವಿಚಾರ ಬಿಟ್ಟು ಸಾಮಾಜಿಕ ದೃಷ್ಟಿಯಿಂದ ಅವರನ್ನು ಪೂರ್ಣ ನಮ್ಮತ್ತ ತರುವ ದೊಡ್ಡ ಪ್ರಯತ್ನ ಆಗಬೇಕಿದೆ.
3. ಹಳ್ಳಿಗಳಲ್ಲಿ ಲಿಂಗಾಯತ ಕಟ್ಟಾ ಸಂಪ್ರದಾಯತ್ವ ನಡೆಯುವುದಿಲ್ಲ. ವಾಸ್ತವದಲ್ಲಿ ಹಳ್ಳಿಗರು ಎಲ್ಲರೂ ಒಂದೇ ಕುಟುಂಬದವರಂತೆ ಬದುಕುತ್ತಿದ್ದಾರೆ. ಜಾಣತನದಿಂದ ಸೂಕ್ಷ್ಮವಾಗಿ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ.
4. ಎಸ್. ಎಸ್. ಪಾಟೀಲರಿಗೆ ನಿಜವಾದ ಕಳಕಳಿಯಿದೆ. ದೀರ್ಘಕಾಲದಿಂದ ಲಿಂಗಾಯತ ಮತ್ತು ವೀರಶೈವ ಮಠಾಧೀಶರು ; ಲಿಂಗಾಯತ ಮತ್ತು ವೀರಶೈವ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಲೇ ಬಂದವರು. ನಿಷ್ಠುರವಾಗಿ ಇಬ್ಬರಿಗೂ ತಿಳುವಳಿಕೆ ಹೇಳಿದವರು. ಅವರ ಕಳಕಳಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಒಂದು ಕಾರ್ಯಕ್ರಮ ನೆಪ ಮಾಡಿಕೊಂಡು ಎಸ್. ಎಸ್. ಪಾಟೀಲ ಹಿರಿಯರಿಗೆ ಹೀಗೆ ಮಾಡುವುದು ಶೋಭೆ ತರುವುದಿಲ್ಲ.
ದಯವಿಟ್ಟು ಶರಣ ಶರಣೆ ತಂದೆತಾಯಿಗಳು ವಿವೇಚಿಸಿ ಬರೆಯಲಿ ಎಂಬುದೇ ನಮ್ಮ ಆಶಯ.
ಶರಣು ಶರಣಾರ್ಥಿಗಳು