ಕಲ್ಯಾಣ ಕರ್ನಾಟಕದ ಪ್ರಜ್ಞಾವಂತ ಲಿಂಗಾಯತರು ಈ ಹಿಂದುತ್ವವಾದಿ, ಶರಣ ಸಂಸ್ಕೃತಿ ವಿರೋಧಿ ಉತ್ಸವವನ್ನು ಬೆಂಬಲಿಸಲಿಲ್ಲ ಎನ್ನುವುದು ಮಹತ್ವದ ಸಂಗತಿಯಾಗಿದೆ.
ಕಲಬುರಗಿ
ಸೇಡಂನಲ್ಲಿ ನಡೆದ ಒಂಬತ್ತು ದಿನಗಳ ಭಾರತೀಯ ಸಂಸ್ಕೃತಿ ಹೆಸರಿನ ವೈದಿಕ ಸಂಸ್ಕೃತಿ ಉತ್ಸವ ಸಂಪೂರ್ಣ ವಿಫಲವಾಗಿದ್ದು ಕರ್ನಾಟಕ ಶರಣರˌ ಸೂಫಿ ಸಂತರ ನಾಡು ಎನ್ನುವುದನ್ನು ದೃಢಪಡಿಸಿದೆ.
ಈ ಕಾರ್ಯಕ್ರಮದ ಆಯೋಜಕ ಬಸವರಾಜ್ ಪಾಟೀಲˌ ಸೇಡಂ ಈ ನಾಡನ್ನು ಹನುಮನುದಿಸಿದ ನಾಡು ಎಂದು ಲಜ್ಜಾಹೀನವಾಗಿ ಹೇಳುವುದು ಈಗಲಾದರೂ ನಿಲ್ಲಿಸಬೇಕು. ಈ ಹಿಂದೆ ಹಿಂದುತ್ವವಾದಿಗಳು ಜೇವರ್ಗಿಯಲ್ಲಿ ಸಂತ ಸಮಾವೇಷ ಮಾಡಿದಾಗ ಕೂಡ ಅದನ್ನು ವಿರೋಧಿಸಿ ಪ್ರಗತಿಪರರು ಶರಣ-ಸೂಫಿ ಸಮಾವೇಷ ಮಾಡಿ ಅದಕ್ಕೆ ಪ್ರತಿರೋಧ ಒಡ್ಡಿದ್ದರು. ಆ ಕಾರಣದಿಂದ ಅಂದು ಆ ಕಾರ್ಯಕ್ರಮವೂ ವಿಫಲವಾಗಿತ್ತು.
ಕಲಬುರಗಿಯ ಪ್ರಗತಿಪರ ಬಸವವಾದಿಗಳಾದ ಪ್ರೊ. ಮೀನಾಕ್ಷಿ ಬಾಳಿˌ ಪ್ರೊ. ಆರ್. ಕೆ. ಹುಡಗಿˌ ಪ್ರೊ. ಪ್ರಭು ಖಾನಾಪುರೆˌ ಪ್ರೊ. ಕಾಶಿನಾಥ್ ಅಂಬಲಗೆˌ ನೀಲಾ. ಕೆˌ ಮಾರುತಿ ಗೋಖಲೆ ಮುಂತಾದವರ ನೇತೃತ್ವದಲ್ಲಿ ಅಲ್ಲಿನ ಎಲ್ಲಾ ಬಸವಪರˌ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ಜನವರಿಯಲ್ಲಿ ನಡೆದ ಬಹುಸಂಸ್ಕೃತಿ ಭಾರತೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಗಾಗಿ ಜರುಗಿತು. ನಾಡಿನ ಅನೇಕ ಜನ ಪ್ರಗತಿಪರ ಮಠಾಧೀಶರುˌ ಚಿಂತಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಹುಸಂಸ್ಕೃತಿ ಭಾರತೋತ್ಸವದ ಪ್ರಭಾವದಿಂದ ಸೇಡಂನ ಏಕಸಂಸ್ಕೃತಿ ಭಾರತೋತ್ಸವ ನೆಲಕಚ್ಚಿತು.

ಈ ಕಾರ್ಯಕ್ರಮ ನೆಲಕಚ್ಚಲು ಇನ್ನೂ ಅನೇಕ ಕಾರಣಗಳಿವೆ. ಸಂಘ ಪರಿವಾರದ ಒಳಜಗಳವೂ ಇದಕ್ಕೆ ದೊಡ್ಡ ಪೆಟ್ಟು ಕೊಟ್ಟಿತು. ರಾಜಕೀಯವಾಗಿ ಸವಕಲು ನಾಣ್ಯವಾಗಿರುವ ಬಸವರಾಜ್ ಪಾಟೀಲˌಸೇಡಂ ಮತ್ತು ಅದೇ ಕೆಟಗರಿಯ ಗೋವಿಂದಾಚಾರ್ಯರ ಗುಂಪಿನ ವಿರುದ್ಧವಿರುವ ಸಂಘದ ಮತ್ತೊಂದು ಗುಂಪು ಈ ಕಾರ್ಯಕ್ರಮವನ್ನು ವಿಫಲಗೊಳಿಸಲು ಶ್ರಮಿಸಿತು ಎಂದು ಬಿಜೆಪಿಯೊಳಗಿನ ಗುಂಪುಗಳು ಮಾತನಾಡಿಕೊಳ್ಳುತ್ತಿವೆ. ಇಂತಹ ಬಸವರಾಜ್ ಪಾಟೀಲ ಸೇಡಂನ ಮಾತಿಗೆ ಮಣೆ ಹಾಕುವ ಈ ಭಾಗದ ಲಜ್ಜೆಗೇಡಿ ಲಿಂಗಾಯತ ಮಠಾಧೀಶರು ಈಗಲಾದರೂ ಎಚ್ಚರಗೊಳ್ಳಬೇಕು.
ಈ ಸೇಡಂ ಬಸವಕಲ್ಯಾಣದಲ್ಲಿ ಶರಣ ಸಂಸ್ಕೃತಿ ನಾಶ ಮಾಡಲು ಮಾಡಿದ ಅವಾಂತರಗಳು ಒಂದೆರಡಲ್ಲ. ಕಲ್ಯಾಣ ಕೇವಲ ಶರಣರಿಂದಾಗಿ ಜನಪ್ರಿಯವಾಗಲಿಲ್ಲ ಅಲ್ಲಿ ಜ್ಞಾನೇಶ್ವರರೂ ಇದ್ದರು ಎನ್ನುವ ತರಲೆತನˌ ಶರಣರ ಸ್ಮಾರಕಗಳಿಗೆ ವ್ಯತಿರಿಕ್ತವಾದ ನಾಮಫಲಕ ಅಳವಡಿಸುವುದು ಇವೆಲ್ಲವನ್ನು ಈತ ಕಲ್ಯಾಣದಲ್ಲಿ ಮಾಡಿದಾಗ ಅದಕ್ಕೆ ಬೆಂಗಾವಲಾಗಿ ನಿಂತವರು ಭಾಲ್ಕಿಯ ಉಭಯ ಶ್ರೀಗಳುˌ ಅಕ್ಕ ಗಂಗಾಂಬಿಕಾ ಮತ್ತು ಅಲ್ಲಿನ ಸ್ಥಳೀಯ ಒಬ್ಬ ಶಿವಾಚಾರ್ಯ ಸ್ವಾಮಿಗಳು. ಹೆಜ್ಜೆ ಹೆಜ್ಜೆಗೆ ಸೇಡಂ ಮಾಡುವ ಅವಾಂತರಗಳನ್ನು ನಾಡಿನ ಬಸವವಾದಿಗಳು ಖಂಡಿಸುತ್ತˌ ಪ್ರಶ್ನಿಸುತ್ತˌ ಪ್ರತಿಭಟಿಸುತ್ತ ಬಂದರೂ ಇದು ಅವರ ಮೇಲೆ ಯಾವ ಪರಿಣಾಮವೂ ಬೀರಲಿಲ್ಲ.
ಈಗ ಅವರ ಏಕಸಂಸ್ಕೃತಿ ಉತ್ಸವವು ಇನ್ನಿಲ್ಲದಂತೆ ನೆಲಕಚ್ಚಿದೆ. ಕಲ್ಯಾಣ ಕರ್ನಾಟಕದ ಪ್ರಜ್ಞಾವಂತ ಲಿಂಗಾಯತರು ಈ ಹಿಂದುತ್ವವಾದಿ, ಶರಣ ಸಂಸ್ಕೃತಿ ವಿರೋಧಿ ಹುನ್ನಾರವನ್ನು ಬೆಂಬಲಿಸಲಿಲ್ಲ ಎನ್ನುವುದು ಮಹತ್ವದ ಸಂಗತಿಯಾಗಿದೆ. ಈ ಪ್ರಜ್ಞೆ ನಾಡಿನ ಉಳಿದ ಭಾಗದ ಲಿಂಗಾಯತರಿಗೂ ಬರಲಿ ಎನ್ನುವುದು ಬಸವವಾದಿಗಳ ಆಶಯವಾಗಿದೆ. ಬಸವರಾಜ್ ಪಾಟೀಲˌ ಸೇಡಂ ಮತ್ತು ಅವರ ಸಂಘದ ಸಹವಾಸವನ್ನು ಇನ್ನಾದರೂ ಈ ಭಾಗದ ಮಠಾಧೀಶರು ಬಿಟ್ಟಾರೆಯೆ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳು ಉತ್ತರಿಸಲಿವೆ.
ಈ ಬಸವರಾಜ ಪಾಟಿಲ್ ಸೇಡಂ ಅವರು ಮೊದಲಿನಿಂದಲೂ ಲಿಂಗಾಯತ ಧರ್ಮದ ವಿರುದ್ಧವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯ ಆಂದೋಲನಕ್ಕೆ ಎಳ್ಳಷ್ಟೂ ಸಹಾಯ ಸಹಕಾರ ನೀಡಲಿಲ್ಲ. RSS ನ ಈ ವ್ಯಕ್ತಿಗೆ ಈಗಲಾದರೂ ಬುದ್ಧಿ ಬಂದರೆ ಸರಿ, ಇಲ್ಲವಾದರೆ ಈಗಿರುವ ಅಲ್ಪ ಸ್ವಲ್ಪ ಪ್ರಭಾವ ಕಳೆದುಕೊಳ್ಳಬೇಕಾದ ಪ್ರಸಂಗ ಬರಬಹುದು.
ಬಸವಣ್ಣನವರ ವಚನಗಳು ಅರ್ಥವಾಗದ ಗಿಳಿ ಪಾಠ ಓದುವ ಮಠಾಧೀಶರು ಇವರು ಹೇಳೋದೊಂದು ಮಾಡೋದೊಂದು ಜನರ ಮತ್ತು ಶಿಷ್ಯರ ದಿಕ್ಕು ತಪ್ಪಿಸಿ ಹೈಫೈ ಕಾರಿನಲ್ಲಿ ಕುಳಿತು ಚಂದಾ ವಸೂಲಿ ಮಾಡಿ ಧರ್ಮದ ಹೆಸರಿನಲ್ಲಿ ಉತ್ಸವ ಜಾತ್ರೆ ಮಾಡಿ ಬದುಕು ಸಾಗಿಸುವ ವರಾಗಿದ್ದಾರೆ. ಭಲೇ ಗುರುಗಳೇ ರೈತರಿಗೆ ಕೂಲಿಕಾರರಿಗೆ ದುಡಿಯುವ ವರ್ಗದ ವರಿಗೆ ಹುರಿದುಂಬಿಸಿ ಜೈ ಗುರು ಬಸವ 🙏🙏🙏